
ವಿಯ್ಕ್ ಆನ್ ಝೀ (ನೆದರ್ಲೆಂಡ್ಸ್): ಭಾರತದ ಅಗ್ರಮಾನ್ಯ ಆಟಗಾರ ಅರ್ಜುನ್ ಇರಿಗೇಶಿ ಅವರು ಆಟದ ನಿರ್ಣಾಯಕ ಘಟ್ಟದಲ್ಲಿ ಜರ್ಮನಿಯ ವಿನ್ಸೆಂಟ್ ಕೀಮರ್ ಅವರ ಕೌಶಲಕ್ಕೆ ಸರಿಸಾಟಿಯಾಗಲಿಲ್ಲ. ಹೀಗಾಗಿ ಟಾಟಾ ಸ್ಟೀಲ್ ಮಾಸ್ಟರ್ಸ್ ಚೆಸ್ ಟೂರ್ನಿಯ ಹತ್ತನೇ ಸುತ್ತಿನಲ್ಲಿ ಸೋಲು ಕಾಣಬೇಕಾಯಿತು. ಇದು ಟೂರ್ನಿಯಲ್ಲಿ ಅವರಿಗೆ ಮೂರನೇ ಸೋಲು.
ವಿಶ್ವ ಚಾಂಪಿಯನ್ ಡಿ.ಗುಕೇಶ್ ಅವರು ಎಂಡ್‌ಗೇಮ್‌ನಲ್ಲಿ ಚಾಣಾಕ್ಷ ನಡೆಗಳ ಮೂಲಕ ಟರ್ಕಿಯ ಪ್ರತಿಭಾನ್ವಿತ ಯಾಗಿಝ್ ಕಾನ್ ಎರ್ಡೊಗ್ಮಸ್ ಅವರನ್ನು ಮಣಿಸಿದರು. ಆದರೆ ಭಾರತದ ಆಟಗಾರ, ಪ್ರಶಸ್ತಿ ರೇಸ್‌ನಲ್ಲಿ ಉಳಿಯಬೇಕಾದರೆ ಕೊನೆಯ ಮೂರೂ ಸುತ್ತುಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಬೇಕಾಗಿದೆ. ಗುಕೇಶ್ 10 ಸುತ್ತುಗಳ ನಂತರ 5 ಪಾಯಿಂಟ್ಸ್ ಗಳಿಸಿದ್ದು ಎಂಟನೇ ಸ್ಥಾನದಲ್ಲಿದ್ದಾರೆ.
14 ಆಟಗಾರರು ಕಣದಲ್ಲಿದ್ದು,
ಉಜ್ಬೇಕಿಸ್ತಾನದ ನಾದಿರ್ಬೆಕ್ ಅಬ್ದುಸತ್ತಾರೋವ್ ಅವರು 6.5 ಅಂಕ ಕಲೆಹಾಕಿದ್ದು ಅಗ್ರಸ್ಥಾನದಲ್ಲಿದ್ದಾರೆ. ಉಜ್ಬೇಕಿಸ್ತಾನದ ಇನ್ನೊಬ್ಬ ಆಟಗಾರ ಜಾವೊಖಿರ್ ಸಿಂದರೊವ್, ಆತಿಥೇಯ ಡಚ್ ಆಟಗಾರ ಜೋರ್ಡನ್ ವಾನ್ ಫೋರೀಸ್ಟ್, ಜರ್ಮನಿಯ ಬ್ಲೂಬಾಮ್ ಮಥಾಯಸ್ ಅವರು ತಲಾ ಆರು ಪಾಯಿಂಟ್ಸ್ ಸಂಗ್ರಹಿಸಿದ್ದಾರೆ.
ಅಬ್ದುಸತ್ತಾರೋವ್ ಹತ್ತನೇ ಸುತ್ತಿನಲ್ಲಿ ವ್ಲಾದಿಮಿರ್ ಫೆಡೊಸೀವ್ (5) ಜೊತೆ ಡ್ರಾ ಮಾಡಿಕೊಂಡರು. ಅತ್ಯುತ್ತಮ ಲಯದಲ್ಲಿರುವ ಮಥಾಯಸ್ ಬ್ಲೂಬಾಮ್, ಆತಿಥೇಯ ದೇಶದ ಅನಿಶ್ ಗಿರಿ (4.5) ಅವರನ್ನು ಸೋಲಿಸಿದರು.
ಅರ್ಜುನ್ (4) ಮೊದಲ ಕೆಲವು ಸುತ್ತುಗಳಲ್ಲಿ ಉತ್ತಮವಾಗಿ ಆಡಿದ್ದರು. ಆದರೆ ಕೊನೆಯ ಕೆಲವು ಸುತ್ತುಗಳಲ್ಲಿ ಗಮನಸೆಳೆಯುವಂಥ ಆಟವಾಡಿಲ್ಲ. ಕೀಮರ್ (5) ಸಹ ಈ ಟೂರ್ನಿಯಲ್ಲಿ ಮಿಶ್ರಫಲ ಉಂಡಿದ್ದಾರೆ.
ಇತರ ಪಂದ್ಯಗಳಲ್ಲಿ ಆರ್.ಪ್ರಜ್ಞಾನಂದ (4.5), ಅಮೆರಿಕದ ಹ್ಯಾನ್ಸ್ ಮೋಕ್ ನೀಮನ್ (5.5) ಜೊತೆ, ವಾನ್ ಫೋರೀಸ್ಟ್, ಜಾವೊಖಿರ್ ಸಿಂದರೋವ್ ಜೊತೆ ಪಾಯಿಂಟ್ ಹಂಚಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.