ADVERTISEMENT

ಲಾಸ್‌ ವೇಗಸ್‌ ಫ್ರೀಸ್ಟೈಲ್ ಚೆಸ್‌: ಅರ್ಜುನ್‌ಗೆ 6ನೇ, ಪ್ರಜ್ಞಾನಂದಗೆ 7ನೇ ಸ್ಥಾನ

ಪಿಟಿಐ
Published 21 ಜುಲೈ 2025, 13:31 IST
Last Updated 21 ಜುಲೈ 2025, 13:31 IST
<div class="paragraphs"><p>ಅರ್ಜುನ್ ಇರಿಗೇಶಿ,&nbsp;ಪ್ರಜ್ಞಾನಂದ</p></div>

ಅರ್ಜುನ್ ಇರಿಗೇಶಿ, ಪ್ರಜ್ಞಾನಂದ

   

ಲಾಸ್‌ ವೇಗಸ್‌: ಅಮೆರಿಕದ ಲೆವೋನ್ ಅರೋನಿಯನ್ ಅವರು ಆತಂಕದ ಕ್ಷಣಗಳನ್ನು ಕಂಡರೂ, ಸ್ವದೇಶದ ಹ್ಯಾನ್ಸ್‌ ನೀಮನ್ ಅವರನ್ನು ಸೋಲಿಸಿ, ಭಾನುವಾರ ಮುಕ್ತಾಯಗೊಂಡ ಫ್ರೀಸ್ಟೈಲ್‌ ಚೆಸ್‌ ಗ್ರ್ಯಾನ್‌ಸ್ಲಾಮ್‌ನಲ್ಲಿ ಪ್ರಶಸ್ತಿ ಗೆದ್ದುಕೊಂಡರು. ಭಾರತದ ಅರ್ಜುನ್ ಇರಿಗೇಶಿ ಟೂರ್ನಿಯಲ್ಲಿ ಆರನೇ ಸ್ಥಾನ ಪಡೆದರೆ, ಪ್ರಜ್ಞಾನಂದ ಅವರು ಏಳನೇ ಸ್ಥಾನ ಗಳಿಸಿದರು.

ಅರೋನಿಯನ್ 1.5–0.5 ರಿಂದ ನೀಮನ್ ವಿರುದ್ಧ ಜಯಗಳಿಸಿ ಪ್ರಶಸ್ತಿ ಜೊತೆ ₹1.72 ಕೋಟಿ ಬಹುಮಾನ ಮೊತ್ತ ಜೇಬಿಗಿಳಿಸಿಕೊಂಡರು.

ADVERTISEMENT

ಗುಂಪು ಹಂತದಲ್ಲಿ ನಿರಾಶೆ ಕಂಡು ನಂತರ ಚೇತರಿಸಿಕೊಂಡಿದ್ದ ವಿಶ್ವದ ಅಗ್ರ ಆಟಗಾರ ಮ್ಯಾಗ್ನಸ್‌ ಕಾರ್ಲ್‌ಸನ್‌ (ನಾರ್ವೆ) ಪ್ಲೇ ಆಫ್‌ ಪಂದ್ಯದಲ್ಲಿ 1.5–0.5 ರಿಂದ ಅಮೆರಿಕದ ಹಿಕಾರು ನಕಾಮುರ ಅವರನ್ನು ಮಣಿಸಿ ಮೂರನೇ ಸ್ಥಾನ ಪಡೆದರು.

ಐದು ಮತ್ತು ಆರನೇ ಸ್ಥಾನ ನಿರ್ಧಾರಕ್ಕೆ ನಡೆದ ಪಂದ್ಯದಲ್ಲಿ ಅರ್ಜುನ್ 0–2 ರಿಂದ ಅಮೆರಿಕದ ಫ್ಯಾಬಿಯಾನೊ ಕರುವಾನ ಅವರಿಗೆ ಮಣಿದರು. ಅರ್ಜುನ್‌ ₹34.5 ಲಕ್ಷ ಬಹುಮಾನ ತಮ್ಮದಾಗಿಸಿಕೊಂಡರು.

ಏಳು– ಎಂಟನೇ ಸ್ಥಾನ ನಿರ್ಧರಿಸಲು ನಡೆದ ಪಂದ್ಯದಲ್ಲಿ ಪ್ರಜ್ಞಾನಂದ ಅವರು 1.5–0.5 ರಿಂದ ಅಮೆರಿಕದ ವೆಸ್ಲಿ ಸೊ ಅವರನ್ನು ಸೋಲಿಸಿದರು. ಪ್ರಜ್ಞಾನಂದ ಅವರು ಸುಮಾರು ₹26 ಲಕ್ಷ ಬಹುಮಾನ ಪಡೆದರು.

ಅರ್ಜುನ್ ಮತ್ತು ಪ್ರಜ್ಞಾನಂದ ಅವರು ಇಲ್ಲಿಂದ ಸೌದಿ ಅರೇಬಿಯಾದ ರಿಯಾದ್‌ಗೆ ತೆರಳುವರು. ಅಲ್ಲಿ ಕೆಲವೇ ದಿನಗಳಲ್ಲಿ ಇ–ಸ್ಪೋರ್ಟ್ಸ್‌ ವಿಶ್ವಕಪ್‌ ನಡೆಯಲಿದೆ. ಈ ಟೂರ್ನಿಯ ನಂತರ ಅರ್ಜುನ್ ಅವರು ಆಗಸ್ಟ್‌ನಲ್ಲಿ ನಡೆಯಲಿರುವ ಚೆನ್ನೈ ಗ್ರ್ಯಾಂಡ್‌ಮಾಸ್ಟರ್ಸ್ ಚೆಸ್‌ ಟೂರ್ನಿಯಲ್ಲಿ ಆಡುವರು. ಪ್ರಜ್ಞಾನಂದ ಅವರು ಅಮೆರಿಕದ ಸೇಂಟ್‌ ಲೂಯಿಯಲ್ಲಿ ನಡೆಯಲಿರುವ ಗ್ರ್ಯಾಂಡ್‌ ಚೆಸ್‌ ಟೂರ್‌ನ ಎರಡು ಟೂರ್ನಿಗಳಲ್ಲಿ ಆಡಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.