ಲಾಹೋರ್: ಮೇ 24ರಂದು ಬೆಂಗಳೂರಿನಲ್ಲಿ ನಡೆಯಲಿರುವ ಎನ್‌ಸಿ ಕ್ಲಾಸಿಕ್ ಜಾವೆಲಿನ್ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವಂತೆ ಆಯೋಜಕ, ಭಾರತದ ಜಾವೆಲಿನ್ ತಾರೆ ನೀರಜ್ ಚೋಪ್ರಾ ನೀಡಿದ ಆಹ್ವಾನವನ್ನು ನಿರಾಕರಿಸಿರುವುದಾಗಿ ಒಲಿಂಪಿಕ್ ಚಾಂಪಿಯನ್, ಪಾಕಿಸ್ತಾನ ಅರ್ಷದ್ ನದೀಮ್ ಬುಧವಾರ ತಿಳಿಸಿದ್ದಾರೆ.
ಮುಂಬರುವ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ಗಾಗಿ ನಡೆಸಲು ಉದ್ದೇಶಿಸಿರುವ ಸಿದ್ಧತೆಯ ವೇಳೆಯೇ ಈ ಕೂಟ ನಡೆಯುತ್ತಿರುವುದರಿಂದ ತಮಗೆ ಭಾಗವಹಿಸಲು ಆಗುತ್ತಿಲ್ಲ ಎಂದು ಅವರು ಹೇಳಿದ್ದಾರೆ. ಆದರೆ ತಮ್ಮನ್ನು ಈ ಕೂಟಕ್ಕೆ ಆಹ್ವಾನಿಸಿರುವುದಕ್ಕೆ ಅವರು ನೀರಜ್ ಅವರಿಗೆ ಕೃತಜ್ಞರಾಗಿರುವುದಾಗಿಯೂ ನದೀಮ್ ತಿಳಿಸಿದ್ದಾರೆ.
‘ನೀರಜ್ ಚೋಪ್ರಾ ಕ್ಲಾಸಿಕ್ ಸ್ಪರ್ಧೆಯು ಮೇ 24ರಂದು ನಡೆಯಲಿದೆ. ಆದರೆ ನಾನು ಏಷ್ಯನ್ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ನಲ್ಲಿ ಮೇ ತಿಂಗಳ 22ರಂದು ದಕ್ಷಿಣ ಕೊರಿಯಾಕ್ಕೆ ತೆರಳಬೇಕಿದೆ’ ಎಂದು ನದೀಮ್ ಹೇಳಿದ್ದಾರೆ.
‘ಗುಮಿಯಲ್ಲಿ ಮೇ 27 ರಿಂದ 31ರವರೆಗೆ ನಡೆಯಲಿರುವ ಏಷ್ಯನ್ ಚಾಂಪಿಯನ್‌ಷಿಪ್‌ಗಾಗಿ ನಾನು ಕಠಿಣ ಶ್ರಮ ಹಾಕುತ್ತಿದ್ದೇನೆ’ ಎಂದು ಪಾಕ್‌ನ ಸೂಪರ್‌ಸ್ಟಾರ್ ಅಥ್ಲೀಟ್ ತಿಳಿಸಿದ್ದಾರೆ.
ಮೊದಲ ಬಾರಿ ನಡೆಯುತ್ತಿರುವ ಕ್ಲಾಸಿಕ್ ಕೂಟಕ್ಕೆ ನದೀಮ್ ಅವರಿಗೂ ಆಹ್ವಾನ ಕಳಿಸಿರುವುದಾಗಿ ನೀರಜ್ ಚೋಪ್ರಾ ಅವರು ಸೋಮವಾರ ಆನ್‌ಲೈನ್ ಮಾಧ್ಯಮಗೋಷ್ಠಿಯಲ್ಲಿ ಮಾಹಿತಿ ನೀಡಿದ್ದರು. ಈ ಕೂಟದಲ್ಲಿ ಭಾಗವಹಿಸುವುದಾಗಿ ಗ್ರೆನೆಡಾದ ಆ್ಯಂಡರ್ಸನ್ ಪೀಟರ್ಸ್, ಜರ್ಮನಿಯ ಥಾಮಸ್ ರೋಹ್ಲರ್ ಖಚಿತಪಡಿಸಿದ್ದಾರೆ.
ನದೀಮ್ 2024ರ ಪ್ಯಾರಿಸ್ ಒಲಿಂಪಿಕ್ ಕೂಟದಲ್ಲಿ ಭರ್ಚಿಯನ್ನು 92.97 ಮೀ. ದೂರ ಎಸೆದು ಸುಲಭವಾಗಿ ಸ್ವರ್ಣ ಗೆದ್ದಿದ್ದರು. ಚೋಪ್ರಾ 89.45 ಮೀ. ದೂರ ಎಸೆದು ಬೆಳ್ಳಿ ಪದಕ ಗಳಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.