ಪಟ್ನಾ: ಏಷ್ಯಾ ಕಪ್ –2025 ಹಾಕಿ ಟೂರ್ನಿಯಲ್ಲಿ ವಿಜೇತರಾಗಿರುವ ಭಾರತೀಯ ಆಟಗಾರರಿಗೆ ತಲಾ ₹10 ಲಕ್ಷ ಬಹುಮಾನ ನೀಡಲಾಗುವುದು ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಸೋಮವಾರ ತಿಳಿಸಿದ್ದಾರೆ.
ಭಾನುವಾರ ರಾಜಗೀರ್‌ನಲ್ಲಿ ನಡೆದ ಏಷ್ಯಾ ಕಪ್ ಫೈನಲ್ ಪಂದ್ಯದಲ್ಲಿ ಭಾರತ ತಂಡವು ದಕ್ಷಿಣ ಕೊರಿಯಾ ವಿರುದ್ಧ 4–1 ಗೋಲುಗಳ ಅಂತರದಲ್ಲಿ ಗೆಲುವು ಸಾಧಿಸಿತ್ತು.
‘ರಾಜಗೀರ್‌ನಲ್ಲಿರುವ ಬಿಹಾರ ಕ್ರೀಡಾ ವಿಶ್ವವಿದ್ಯಾನಿಲಯದಲ್ಲಿರುವ ಕ್ರೀಡಾಂಗಣದಲ್ಲಿ ಇದೇ ಮೊದಲ ಬಾರಿಗೆ ಹಾಕಿ ಪಂದ್ಯವನ್ನು ಆಯೋಜಿಸಲಾಗಿತ್ತು. ಅದರಲ್ಲಿ ಭಾರತೀಯ ತಂಡವು ಪ್ರಶಸ್ತಿ ಗೆದ್ದಿರುವುದು ದೇಶಕ್ಕೆ ಹೆಮ್ಮೆಯ ಸಂಗತಿ’ ಎಂದು ನಿತೀಶ್ ಕುಮಾರ್ ಅವರು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
ಏಷ್ಯಾ ಕಪ್‌ನಲ್ಲಿ ವಿಜೇತರಾಗಿರುವ ಭಾರತ ಹಾಕಿ ತಂಡದ ಆಟಗಾರರು ಮತ್ತು ಸಹಾಯಕ ಸಿಬ್ಬಂದಿಗೆ ಸನ್ಮಾನಿಸಲು ಬಿಹಾರ ಸರ್ಕಾರವು ನಿರ್ಧರಿಸಿದೆ. ಪ್ರತಿಯೊಬ್ಬ ಆಟಗಾರರಿಗೂ ತಲಾ ₹10 ಲಕ್ಷ ಹಾಗೂ ಸಹಾಯಕ ಸಿಬ್ಬಂದಿಗೆ ತಲಾ ₹5 ಲಕ್ಷ ಬಹುಮಾನ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಭಾರತವು 2003, 2007 ಹಾಗೂ 2017ರಲ್ಲಿ ಏಷ್ಯಾ ಕಪ್ ಹಾಕಿ ಟೂರ್ನಿಯಲ್ಲಿ ಪ್ರಶಸ್ತಿ ಗಳಿಸಿದೆ. 2025ರ ಏಷ್ಯಾ ಕಪ್‌ನಲ್ಲಿ ಪ್ರಶಸ್ತಿ ಗಳಿಸುವ ಮೂಲಕ ಮುಂದಿನ ವರ್ಷ ನಡೆಯಲಿರುವ ಎಫ್‌ಐಹೆಚ್ ವಿಶ್ವಕಪ್‌ಗೆ ನೇರ ಅರ್ಹತೆ ಪಡೆದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.