ADVERTISEMENT

ಏಷ್ಯಾ ಕಪ್‌ ಪುರುಷರ ಹಾಕಿ ಟೂರ್ನಿ: ಭಾರತಕ್ಕೆ ಚೀನಾ ಸವಾಲು

ಪಿಟಿಐ
Published 28 ಆಗಸ್ಟ್ 2025, 15:53 IST
Last Updated 28 ಆಗಸ್ಟ್ 2025, 15:53 IST
<div class="paragraphs"><p>ಏಷ್ಯಾ ಕಪ್‌ ಟ್ರೋಫಿಯೊಂದಿಗೆ ಎಂಟು ತಂಡಗಳ ನಾಯಕರು </p></div>

ಏಷ್ಯಾ ಕಪ್‌ ಟ್ರೋಫಿಯೊಂದಿಗೆ ಎಂಟು ತಂಡಗಳ ನಾಯಕರು

   

–ಪಿಟಿಐ ಚಿತ್ರ

ರಾಜ್‌ಗಿರ್‌ (ಬಿಹಾರ): ಮೂರು ಬಾರಿಯ ಚಾಂಪಿಯನ್‌ ಭಾರತ ಪುರುಷರ ಹಾಕಿ ತಂಡವು ಶುಕ್ರವಾರ ಇಲ್ಲಿ ಆರಂಭವಾಗಲಿರುವ ಏಷ್ಯಾ ಕಪ್‌ ಟೂರ್ನಿಯಲ್ಲಿ ತನಗಿಂತ ಕೆಳ ಕ್ರಮಾಂಕದ ಚೀನಾ ತಂಡದ ವಿರುದ್ಧ ಅಭಿಯಾನ ಆರಂಭಿಸಲಿದೆ. 

ADVERTISEMENT

ಭಾರತ, ಚೀನಾ, ಜಪಾನ್‌ ಮತ್ತು ಕಜಾಕಸ್ತಾನ ತಂಡಗಳೊಂದಿಗೆ ಎ ಗುಂಪಿನಲ್ಲಿದೆ. ಐದು ಬಾರಿಯ ಚಾಂಪಿಯನ್‌ ದಕ್ಷಿಣ ಕೊರಿಯಾ, ಮಲೇಷ್ಯಾ, ಬಾಂಗ್ಲಾದೇಶ ಮತ್ತು ಚೀನಾ ತೈಪೆ ತಂಡಗಳು ಬಿ ಗುಂಪಿನಲ್ಲಿವೆ. ‌‌‌ಪ್ರತಿ ಗುಂಪಿನಲ್ಲಿ ಮೊದಲೆರಡು ಸ್ಥಾನ ಪಡೆಯುವ ತಂಡಗಳು ಸೆಮಿಫೈನಲ್‌ಗೆ ಮುನ್ನಡೆಯಲಿವೆ. ಸೆ.7ರಂದು ಫೈನಲ್‌ ಹಣಾಹಣಿ ನಡೆಯಲಿದೆ. 

ಟೂರ್ನಿಯಲ್ಲಿ ಆಡಲು ಪಾಕಿಸ್ತಾನ ಮತ್ತು ಓಮನ್‌ ತಂಡಗಳು ಹಿಂದೆ ಸರಿದ ಕಾರಣ ಕಜಾಕಸ್ತಾನ ಮತ್ತು ಬಾಂಗ್ಲಾದೇಶ ತಂಡಗಳು ಅವಕಾಶ ಪಡೆದಿವೆ. ಕಜಾಕಸ್ತಾನ ತಂಡವು ಮೂರು ದಶಕಗಳ ನಂತರ ಏಷ್ಯಾಕಪ್‌ ಟೂರ್ನಿಯಲ್ಲಿ ಆಡಲು ಸಜ್ಜಾಗಿದೆ. 

ಹರ್ಮನ್‌ಪ್ರೀತ್‌ ಸಿಂಗ್‌ ನಾಯಕತ್ವದ ಆತಿಥೇಯ ತಂಡವು ತವರಿನಂಗಳದ ಲಾಭ ಪಡೆದು, ನಾಲ್ಕನೇ ಬಾರಿ ಪ್ರಶಸ್ತಿ ಮುಡಿಗೇರಿಸಿಕೊಳ್ಳುವತ್ತ ಚಿತ್ತ ಹರಿಸಿದೆ. ಈ ಮೂಲಕ ಮುಂದಿನ ವರ್ಷದ ಆಗಸ್ಟ್‌ನಲ್ಲಿ ಬೆಲ್ಜಿಯಂ ಮತ್ತು ನೆದರ್ಲೆಂಡ್ಸ್ ಜಂಟಿ ಆತಿಥ್ಯದಲ್ಲಿ ನಡೆಯಲಿರುವ ವಿಶ್ವಕಪ್‌ಗೆ ನೇರ ಅರ್ಹತೆ ಪಡೆಯಲು ಎದುರು ನೋಡುತ್ತಿದೆ. 

ಎಫ್‌ಐಎಚ್ ಪ್ರೊ ಲೀಗ್‌ನ ಯುರೋಪಿಯನ್ ಲೆಗ್‌ನಲ್ಲಿ ಭಾರತ ತಂಡವು ಕಳಪೆ ಪ್ರದರ್ಶನ ನೀಡಿ ಪಾಯಿಂಟ್ಸ್‌ ಪಟ್ಟಿಯಲ್ಲಿ ಏಳನೇ ಸ್ಥಾನದೊಂದಿಗೆ ಅಭಿಯಾನ ಮುಗಿಸಿತ್ತು. ಕೊನೆಯ ಎಂಟು ಪಂದ್ಯಗಳ ಪೈಕಿ ಕೇವಲ ಒಂದರಲ್ಲಿ ಮಾತ್ರ ಜಯ ಸಾಧಿಸಿತ್ತು. ಇದೀಗ ಸುಧಾರಿತ ಆಟ ಪ್ರದರ್ಶನದ ವಿಶ್ವಾಸದೊಂದಿಗೆ ಮುಖ್ಯ ಕೋಚ್ ಕ್ರೇಗ್ ಫುಲ್ಟನ್ ಅವರು ಸಮತೋಲನದ ತಂಡವನ್ನು ಕಣಕ್ಕಿಳಿಸಲು ಸಜ್ಜಾಗಿದ್ದಾರೆ.

ಟೂರ್ನಿಯಲ್ಲಿ ಅಗ್ರ ಶ್ರೇಯಾಂಕಿತ ತಂಡವಾಗಿರುವ ಭಾರತವು ಏಷ್ಯಾದ ಪ್ರತಿಸ್ಪರ್ಧಿಗಳ ವಿರುದ್ಧ ಉತ್ತಮ ದಾಖಲೆ ಹೊಂದಿದೆ. 2023ರ ಏಷ್ಯನ್ ಗೇಮ್ಸ್‌ ಮತ್ತು 2024ರ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಗೆದ್ದಿರುವ ಆತಿಥೇಯ ತಂಡವು ಈ ಟೂರ್ನಿಗಳ 14 ಪಂದ್ಯಗಳಲ್ಲಿ 94 ಗೋಲುಗಳನ್ನು ದಾಖಲಿಸಿದೆ. 

ಪ್ರಸ್ತುತ ವಿಶ್ವ ರ‍್ಯಾಂಕಿಂಗ್‌ನಲ್ಲಿ 7ನೇ ಸ್ಥಾನದಲ್ಲಿರುವ ಭಾರತ ತಂಡವು ಮೊದಲ ಪಂದ್ಯದಲ್ಲಿ 23ನೇ ಕ್ರಮಾಂಕದ ಚೀನಾ ವಿರುದ್ಧ ಜಯ ಸಾಧಿಸುವ ನೆಚ್ಚಿನ ತಂಡವಾಗಿದೆ. 2009ರ ಆವೃತ್ತಿಯಲ್ಲಿ ಮೂರನೇ ಸ್ಥಾನ ಗಳಿಸಿದ್ದು ಚೀನಾ ತಂಡವು ಈವರೆಗಿನ ಉತ್ತಮ ಸಾಧನೆಯಾಗಿದೆ. 2008ರಲ್ಲಿ ಆತಿಥೇಯ ತಂಡವಾಗಿ ಒಮ್ಮೆ ಮಾತ್ರ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡು, 11ನೇ ಸ್ಥಾನ ಪಡೆದಿತ್ತು.

ಇಂದಿನ ಪಂದ್ಯಗಳು

ಮಲೇಷ್ಯಾ–ಬಾಂಗ್ಲಾದೇಶ ಬೆಳಿಗ್ಗೆ 9 

ದಕ್ಷಿಣ ಕೊರಿಯಾ–ಚೀನಾ ತೈಪೆ ಬೆಳಿಗ್ಗೆ 11

ಜಪಾನ್‌ ಕಜಾಜಸ್ತಾನ ಮಧ್ಯಾಹ್ನ 1

ಭಾರತ–ಚೀನಾ ಮಧ್ಯಾಹ್ನ 3

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.