ADVERTISEMENT

Asia Cup 2025: ಭಾರತಕ್ಕೆ ಚೀನಾ ವಿರುದ್ದ ಪ್ರಯಾಸದ ಜಯ

ಏಷ್ಯಾ ಕಪ್ ಹಾಕಿ ಟೂರ್ನಿಯ ಮೊದಲ ಪಂದ್ಯದಲ್ಲಿ 4–3 ಜಯ.

ಪಿಟಿಐ
Published 29 ಆಗಸ್ಟ್ 2025, 13:56 IST
Last Updated 29 ಆಗಸ್ಟ್ 2025, 13:56 IST
<div class="paragraphs"><p>ಭಾರತಕ್ಕೆ ಜಯ</p></div>

ಭಾರತಕ್ಕೆ ಜಯ

   

(ಚಿತ್ರ ಕೃಪೆ: X/@TheHockeyIndia)

ರಾಜಗೀರ್ (ಬಿಹಾರ): ನಾಯಕ ಹರ್ಮನ್‌ಪ್ರೀತ್ ಸಿಂಗ್ ಅವರು ಹ್ಯಾಟ್ರಿಕ್‌ ಗೋಲುಗಳನ್ನು ಗಳಿಸಿದರೂ, ಏಷ್ಯಾ ಕಪ್ ಹಾಕಿ ಟೂರ್ನಿ ಪಂದ್ಯದಲ್ಲಿ ಭಾರತದ ಒಟ್ಟಾರೆ ಆಟ ನೀರಸ ಎನ್ನುವಂತಿತ್ತು. ಆತಿಥೇಯ ತಂಡ ಶುಕ್ರವಾರ ನಡೆದ ತನ್ನ ಮೊದಲ ಪಂದ್ಯದಲ್ಲಿ ತನಗಿಂತ ಕೆಳಕ್ರಮಾಂಕದ ಚೀನಾ ವಿರುದ್ಧ 4–3 ಗೋಲುಗಳ ಅಲ್ಪಅಂತರದ ಜಯ ಪಡೆಯಿತು.

ADVERTISEMENT

ಹರ್ಮನ್‌ಪ್ರೀತ್‌ ಅವರು ‘ಎ’ ಗುಂ‍ಪಿನ ಈ ಪಂದ್ಯದ 20ನೇ, 33ನೇ ಮತ್ತು 47ನೇ ನಿಮಿಷ ಪೆನಾಲ್ಟಿ ಕಾರ್ನರ್‌ ಅವಕಾಶಗಳನ್ನು ಗೋಲಾಗಿ ಪರಿವರ್ತಿಸುವಲ್ಲಿ ಯಶಸ್ವಿ ಆದರು. ಆದರೆ ಅವರು ಒಮ್ಮೆ ‘ಪೆನಾಲ್ಟಿ ಸ್ಟ್ರೋಕ್‌’ ಅವಕಾಶದಲ್ಲಿ ಎಡವಿದರು. ಭಾರತದ ಇನ್ನೊಂದು ಗೋಲನ್ನು ಜುಗರಾಜ್‌ ಸಿಂಗ್ 18ನೇ ನಿಮಿಷ ಹೊಡೆದರು.

ಚೀನಾ ತಂಡದ ಪರ ಶಿಹಾವೊ ದು (12ನೇ ನಿಮಿಷ), ಬೆನ್ಹಾಲ್ ಚೆನ್‌ (35ನೇ ನಿಮಿಷ) ಮತ್ತು ಜೀಶೆಂಗ್‌ ಗಾವೊ (41ನೇ ನಿಮಿಷ) ಗೋಲುಗಳನ್ನು ಗಳಿಸಿದರು.

ವಿಶ್ವ ಕ್ರಮಾಂಕದಲ್ಲಿ ಏಳನೇ ಸ್ಥಾನದಲ್ಲಿರುವ ಭಾರತ ಪಂದ್ಯದ ಹೆಚ್ಚಿನ ಅವಧಿಯಲ್ಲಿ ಮೇಲುಗೈ ಸಾಧಿಸಿತು. ಆದರೆ ತಂಡದಿಂದ ನಿರೀಕ್ಷಿತ ಮಟ್ಟದ ಆಟ ಬರಲಿಲ್ಲ. 23ನೇ ಕ್ರಮಾಂಕದಲ್ಲಿರುವ ಚೀನಾ ತಂಡಕ್ಕೆ ಚೇತರಿಸಲು ಅವಕಾಶ ಮಾಡಿಕೊಟ್ಟು ಒತ್ತಡ ಎದುರಿ ಅಪಾಯ ಮೈಮೇಲೆ ಎಳೆದುಕೊಂಡಿತು.

ತನ್ನ ಪಾಲಿನ ಅವಕಾಶಗಳನ್ನೂ ಸರಿಯಾಗಿ ಬಳಸಿಕೊಳ್ಳಲಿಲ್ಲ. 11 ಪೆನಾಲ್ಟಿ ಕಾರ್ನರ್‌ ಅವಕಾಶಗಳಲ್ಲಿ ಗೋಲಾಗಿದ್ದು ಬರೇ ನಾಲ್ಕರಲ್ಲಷ್ಟೇ. ಚೀನಾ ಗೋಲ್‌ಕೀ‍ಪರ್ ವೀಹಾವೊ ಯಂಗ್ ಕೂಡ ಕೆಲವು ಅವಕಾಶಗಳಿಗೆ ತಡೆಗೋಡೆಯಾದರು.

39ನೇ ನಿಮಿಷ ಮನದೀಪ್ ಅವರ ಮೇಲೆ ಎದುರಾಳಿ ಫೌಲ್ ಮಾಡಿದ ಕಾರಣಕ್ಕೆ ಭಾರತಕ್ಕೆ ಪೆನಾಲ್ಟಿ ಸ್ಟ್ರೋಕ್ ನೀಡಲಾಯಿತು. ಆದರೆ ಈ ಅವಕಾಶದಲ್ಲಿ ಹರ್ಮನ್‌ಪ್ರೀತ್ ಹೊಡೆದ ಚೆಂಡು ಗೋಲುಗಂಬಕ್ಕೆ ಹೊಡೆಯಿತು.

ಭಾರತ ತಂಡವು ಭಾನುವಾರ ಜಪಾನ್ ತಂಡವನ್ನು ಎದುರಿಸಲಿದೆ. ಚೀನಾ ತಂಡವು ಅದೇ ದಿನ ಕಜಾಕಸ್ತಾನ ವಿರುದ್ಧ ಆಡಲಿದೆ.

ಆಟಕ್ಕೆ ತೃ‍ಪ್ತರಾಗದ ಕೋಚ್‌

ಮೊದಲ ಪಂದ್ಯದಲ್ಲಿ ಭಾರತದ ನಿರ್ವಹಣೆಯ ಬಗ್ಗೆ ಚೀಫ್‌ ಕೋಚ್‌ ಕ್ರೇಗ್ ಫುಲ್ಟನ್‌ ಅವರಿಗೆ ಪೂರ್ಣ ಸಮಾಧಾನವಾಗಿರಲಿಲ್ಲ. ಆದರೆ ಅಭಿಯಾನವನ್ನು ಗೆಲುವಿನೊಡನೆ ಆರಂಭಿಸುವುದು  ಮಹತ್ವದ್ದು ಎಂದು ಹೇಳಿದರು.

ಭಾರತ ವಿಶ್ವ ಕ್ರಮಾಂಕದಲ್ಲಿ ಏಳನೇ ಸ್ಥಾನದಲ್ಲಿ ಏಳನೇ ಸ್ಥಾನದಲ್ಲಿದ್ದು, 23ನೇ ಸ್ಥಾನದಲ್ಲಿರುವ ಚೀನಾವು ತೀವ್ರ ಪೈಪೋಟಿ ನೀಡಿ ಆತಿಥೇಯರು ಗೆಲುವಿಗೆ ಕಷ್ಟಪಡುವಂತೆ ಮಾಡಿತು.

ಮೊದಲಾರ್ಧದಲ್ಲಿ ಆಟ ಉತ್ತಮವಾಗಿತ್ತು. ನಾವು ಉತ್ತಮ ರೀತಿ ದಾಳಿಗಿಳಿದೆವು. ಆದರೆ ನಂತರ ಕೆಲವು ತಪ್ಪುಗಳಾದವು. ವಿರಾಮದ ನಂತರ ಕೆಲವು ಪೆನಾಲ್ಟಿ ಕಾರ್ನರ್‌ ಅವಕಾಶಗಳನ್ನು ಗೋಲಾಗಿ ಪರಿವರ್ತಿಸಿದ್ದು ಸಕಾರಾತ್ಮಕ ಅಂಶ. ಸ್ಟ್ರೋಕ್‌ನಲ್ಲಿ ಗೋಲಾಗದ್ದು ದುರದೃಷ್ಟ’ ಎಂದು ಫುಲ್ಟನ್ ಪಂದ್ಯದ ನಂತರ ಸಂವಾದದಲ್ಲಿ ತಿಳಿಸಿದರು.

ಚೀನಾ ಎದುರಿನ ಪಂದ್ಯದಿಂದ ಕಲಿಯಲು ಸಾಕಷ್ಟಿದೆ ಎಂದು ನಾಯಕ ಹರ್ಮನ್‌ಪ್ರೀತ್ ಹೇಳಿದರು. ‘ಪಂದ್ಯ ಕಠಿಣವಾಗಿತ್ತು. ಆದರೆ ಗೆಲುವು ಮಹತ್ವದ್ದು. ಅಂತಿಮ ಸೀಟಿಯವರೆಗೆ ನಾವು ಹೋರಾಡಿದೆಉ. ಇದು ನಮಗೆ ಉತ್ತಮ ಪಾಠ’ ಎಂದು ಅಭಿಪ್ರಾಯಪಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.