
ಢಾಕಾ: ಭಾರತದ ಬಿಲ್ಗಾರರಾದ ಅಂಕಿತಾ ಭಕತ್ ಮತ್ತು ಧೀರಜ್ ಬೊಮ್ಮದೇವರ ಅವರು ಶುಕ್ರವಾರ ನಡೆದ ಏಷ್ಯನ್ ಆರ್ಚರಿ ಚಾಂಪಿಯನ್‌ಷಿಪ್‌ನ ರಿಕರ್ವ್ ವೈಯಕ್ತಿಕ ಸ್ಪರ್ಧೆಯಲ್ಲಿ ಚಿನ್ನದ ಸಾಧನೆ ಮಾಡಿದರು.
27 ವರ್ಷದ ಅಂಕಿತಾ ಮಹಿಳೆಯರ ವಿಭಾಗದ ಫೈನಲ್‌ನಲ್ಲಿ 7–3 ಅಂತರದಿಂದ ಪ್ಯಾರಿಸ್ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ, ದಕ್ಷಿಣ ಕೊರಿಯಾದ ನಾಮ್ ಸುಹಿಯೋನ್ ಅವರಿಗೆ ಆಘಾತ ನೀಡಿದರು. ಪುರುಷರ ವಿಭಾಗದಲ್ಲಿ ಪ್ರಶಸ್ತಿ ಸುತ್ತಿನಲ್ಲಿ ಧೀರಜ್ 6–2ರಿಂದ ಸ್ವದೇಶದ ರಾಹುಲ್ ಅವರನ್ನು ಮಣಿಸಿದರು.
ಅಂಕಿತಾ ಸೆಮಿಫೈನಲ್‌ನಲ್ಲಿ ಸ್ವದೇಶದ ಅನುಭವಿ ದೀಪಿಕಾ ಅವರನ್ನು ಸೋಲಿಸಿದ್ದರು. 5–5 ಅಂಕಗಳಿಂದ ಸಮಬಲ ಸಾಧಿಸಿದ ಬಳಿಕ ಶೂಟ್ ಆಫ್‌ನಲ್ಲೂ ಪಾಯಿಂಟ್ಸ್ (9) ಸಮನಾಯಿತು. ಆದರೆ, ಅಂಕಿತಾ ಅವರ ಬಾಣವು ಹೆಚ್ಚು ನಿಖರವಾಗಿದ್ದರಿಂದ ಅವರು ಫೈನಲ್‌ಗೆ ಮುನ್ನಡೆದರು.
ಐದು ಬಾರಿಯ ಒಲಿಂಪಿಯನ್ ದೀಪಿಕಾ ಕುಮಾರಿ ಕಂಚಿನ ಪದಕ ಗೆದ್ದುಕೊಂಡರು. ಕಂಚಿನ ಪ್ಲೇ ಆಫ್ ಸುತ್ತಿನಲ್ಲಿ ಸ್ವದೇಶದ ಸಂಗೀತಾ ಅವರನ್ನು ಶೂಟ್ ಆಫ್‌ನಲ್ಲಿ (6–5) ಮಣಿಸಿದರು.
ಸೆಮಿಫೈನಲ್‌ನಲ್ಲಿ ಮೊದಲ ಸೆಟ್ ಕಳೆದುಕೊಂಡಿದ್ದ ಧೀರಜ್ ನಂತರ ಲಯ ಕಂಡುಕೊಂಡು 6–2ರಿಂದ ಕೊರಿಯಾದ ಅನುಭವಿ ಆಟಗಾರ ಜಾಂಗ್ ಚೆಹ್ವಾನ್ ಅವರನ್ನು ಸೋಲಿಸಿದ್ದರು.
ಭಾರತವು ಆರು ಚಿನ್ನ, ಮೂರು ಬೆಳ್ಳಿ ಮತ್ತು ಒಂದು ಕಂಚು ಸೇರಿ ಒಟ್ಟು 10 ಪದಕಗಳೊಂದಿಗೆ ಅಭಿಯಾನವನ್ನು ಮುಗಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.