ADVERTISEMENT

ಅಮಿತ್ ಪಂಘಾಲ್‌, ಶಿವ ಥಾಪಾಗೆ ಬೆಳ್ಳಿ ಪದಕ

ಏಷ್ಯನ್ ಬಾಕ್ಸಿಂಗ್ ಚಾಂಪಿಯನ್‌ಷಿಪ್‌: ಉಜ್ಬೆಕಿಸ್ತಾನದ ಎದುರಾಳಿಗೆ ಮಣಿದ ಹಾಲಿ ಚಾಂಪಿಯನ್

ಪಿಟಿಐ
Published 31 ಮೇ 2021, 16:34 IST
Last Updated 31 ಮೇ 2021, 16:34 IST
ಅಮಿತ್ ಪಂಘಾಲ್ –ಟ್ವಿಟರ್ ಚಿತ್ರ
ಅಮಿತ್ ಪಂಘಾಲ್ –ಟ್ವಿಟರ್ ಚಿತ್ರ   

ದುಬೈ: ಭಾರತದ ಅಮಿತ್ ಪಂಘಾಲ್ ಮತ್ತು ಶಿವ ಥಾಪಾ ಏಷ್ಯನ್ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಪದಕಕ್ಕೆ ಸಮಾಧಾನಪಟ್ಟುಕೊಂಡಿದ್ದಾರೆ. ಕಳೆದ ಬಾರಿ ಚಾಂಪಿಯನ್ ಆಗಿದ್ದ ಅಮಿತ್ ಸೋಮವಾರ ನಡೆದ 52 ಕೆಜಿ ವಿಭಾಗದ ಫೈನಲ್ ಬೌಟ್‌ನಲ್ಲಿ ಉಜ್ಬೆಕಿಸ್ತಾನದ ಶಖೋಬಿದಿನ್ ಜೈರೊವ್‌ಗೆ ಮಣಿದರು.

64 ಕೆಜಿ ವಿಭಾಗದಲ್ಲಿ ಶಿವ ಥಾಪಾ ಮಂಗೋಲಿಯಾದ ಬಾತಾರ್‌ಸುಖ್ ಚಿನ್‌ಜೊರಿಂಗ್‌ ವಿರುದ್ಧ ಸೋತರು. ಈ ಮೂಲಕ ಸತತ ಐದು ಭಾರಿ ಪದಕ ಗೆದ್ದ ಸಾಧನೆ ಮಾಡಿದರು. ಈ ಮೂರು ಬಾರಿ ಚಾಂಪಿಯನ್ ಆಗಿದ್ದಾರೆ.

2019ರ ವಿಶ್ವ ಚಾಂಪಿಯನ್‌ಷಿಪ್ ಫೈನಲ್‌ನ ಪ್ರತಿಫಲನ ಎಂಬಂತೆ ಕಂಡುಬಂದ ಹಣಾಹಣಿಯಲ್ಲಿ ಅಮಿತ್ 2–3ರಲ್ಲಿ ಸೋತರು. ವಿಶ್ವ ಚಾಂಪಿಯನ್‌ಷಿಪ್‌ನಲ್ಲೂ ಜೈರೊವ್‌ ಇದೇ ಅಂತರದಲ್ಲಿ ಜಯಿಸಿದ್ದರು. ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಿರುವ ಇಬ್ಬರೂ ಬಾಕ್ಸರ್‌ಗಳು ಆರಂಭದಿಂದಲೇ ಪ್ರಬಲ ಪೈಪೋಟಿ ನಡೆಸಿದರು. ಮೊದಲ ಸುತ್ತಿನಲ್ಲೇ ಬಲಶಾಲಿ ಪಂಚ್‌ಗಳ ಮೂಲಕ ಮಿಂಚಿದರು. ಮೊದಲ ಸುತ್ತಿನಲ್ಲಿ ಜೈರೊವ್ ಜಯ ಸಾಧಿಸಿದರು.

ADVERTISEMENT

ಎರಡನೇ ಸುತ್ತಿನಲ್ಲಿ ಅಮಿತ್ ತಿರುಗೇಟು ನೀಡಿದರು. ಜೈರೊವ್‌ ದಾಳಿಯನ್ನು ಸಮರ್ಥವಾಗಿ ಎದುರಿಸಿದ ಅವರು ಶಕ್ತಿಶಾಲಿ ಪಂಚ್‌ಗಳ ಮೂಲಕ ಕಂಗೆಡಿಸಿದರು. ಮೂರನೇ ಸುತ್ತಿನಲ್ಲೂ ಅಮಿತ್ ಪ್ರಾಬಲ್ಯ ಮುಂದುವರಿಯಿತು. ಕಣ್ಣಿಗೆ ಗಾಯವಾದರೂ ಲೆಕ್ಕಿಸದೆ ಎದುರಾಳಿಯನ್ನು ಮಣಿಸಿದರು. ಮುಂದಿನ ಎರಡು ಸುತ್ತುಗಳಲ್ಲಿ ಜಯ ಜೈರೊವ್ ಪಾಲಾಯಿತು.

ಒಟ್ಟು 15 ಪದಕಗಳನ್ನು ಗಳಿಸಿದ ಭಾರತ ಚಾಂಪಿಯನ್‌ಷಿಪ್‌ನಲ್ಲಿ ಗರಿಷ್ಠ ಪದಕಗಳ ಸಾಧನೆ ಮಾಡಿತು. 2019ರಲ್ಲಿ ಎರಡು ಚಿನ್ನ ಸೇರಿದಂತೆ ಒಟ್ಟು 13 ಪದಕಗಳು ಲಭಿಸಿದ್ದವು. ಅಮಿತ್ ಪಂಘಾಲ್ ಮತ್ತುಜೈರೊವ್‌ ಬೌಟ್‌ನ ತೀರ್ಪು ಮರುಪರಿಶೀಲನೆಗೆ ಭಾರತ ತಂಡ ಮೊರೆ ಹೋಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.