ಜ್ಯೋತಿ ಯರ್‍ರಾಜಿ
ತೈಪೆ ಸಿಟಿ: ಏಷ್ಯನ್ ಚಾಂಪಿಯನ್ ಜ್ಯೋತಿ ಯರ್‍ರಾಜಿ, ಶನಿವಾರ ಆರಂಭಗೊಂಡ ತೈವಾನ್ ಅಥ್ಲೆಟಿಕ್ಸ್ ಓಪನ್ ಕೂಟದ ಮಹಿಳೆಯರ 100 ಮೀಟರ್ ಹರ್ಡಲ್ಸ್‌ನಲ್ಲಿ ಚಿನ್ನದ ಪದಕಕ್ಕೆ ಕೊರಳೊಡ್ಡಿದರು.
ಭಾರತದ 25 ವರ್ಷ ವಯಸ್ಸಿನ ಜ್ಯೋತಿ, ತೈಪೆ ಮುನಿಸಿಪಲ್ ಸ್ಟೇಡಿಯಂನಲ್ಲಿ ನಡೆದ ಸ್ಪರ್ಧೆಯಲ್ಲಿ 12.99 ಸೆಕೆಂಡ್‌ಗಳಲ್ಲಿ ಗುರಿ ಮುಟ್ಟಿದರು. ಜಪಾನ್‌ನ ಅಸುಕಾ ಟೆರಾಡಾ (13.04 ಸೆ.) ಹಾಗೂ ಚಿಸಾತೊ ಕಿಯೊಯಾಮಾ (13.10 ಸೆ.) ಅವರು ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕ ಗೆದ್ದರು.
ಈ ಸ್ಪರ್ಧೆಯಲ್ಲಿ ಜ್ಯೋತಿ (12.78 ಸೆ.) ರಾಷ್ಟ್ರೀಯ ದಾಖಲೆಯನ್ನು ಹೊಂದಿದ್ದಾರೆ. ಮೇ ತಿಂಗಳಿನಲ್ಲಿ ದಕ್ಷಿಣ ಕೊರಿಯಾದಲ್ಲಿ ನಡೆದ ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿಯೂ ಅವರು (12.96 ಸೆ) ಚಿನ್ನ ಗೆದ್ದಿದ್ದರು.
ಪುರುಷರ 110 ಮೀ. ಹರ್ಡಲ್ಸ್‌ನಲ್ಲಿ ರಾಷ್ಟ್ರೀಯ ದಾಖಲೆ ಹೊಂದಿರುವ ಭಾರತದ ತೇಜಸ್ ಶಿರ್ಸೆ (13.52 ಸೆ.) ಚಿನ್ನದ ಪದಕ ತಮ್ಮದಾಗಿಸಿಕೊಂಡರು. ಇದು ಅವರ ಎರಡನೇ ವೈಯಕ್ತಿಕ ಶ್ರೇಷ್ಠ ಸಾಧನೆಯಾಗಿದೆ.
ಆತಿಥೇಯ ತೈಪೆಯ ಸೀಹ್ ಯುವಾನ್– ಕೈ (13.72 ಸೆ.) ಹಾಗೂ ಕುಇ– ರು ಶೆನ್ (13.75) ಕ್ರಮವಾಗಿ ಬೆಳ್ಳಿ ಹಾಗೂ ಕಂಚಿನ ಪದಕ ಜಯಿಸಿದರು.
ಟ್ರಿಪಲ್ ಜಂಪ್‌ನಲ್ಲಿ 16.21 ಮೀ. ಸಾಧನೆಯೊಂದಿಗೆ ಭಾರತದ ಅಥ್ಲೀಟ್ ಅಬ್ದುಲ್ಲಾ ಅಬೂಬಕ್ಕರ್ ಹಾಗೂ ಮಹಿಳೆಯರ 1,500 ಮೀ. ಓಟದಲ್ಲಿ ಪೂಜಾ (4 ನಿ. 11.63 ಸೆ.) ಚಿನ್ನದ ಪದಕ ಗೆದ್ದರು.
ರಿಲೆ ತಂಡಗಳಿಗೆ ಚಿನ್ನ: 4x100 ಮೀ. ರಿಲೇ ಸ್ಪರ್ಧೆಯಲ್ಲಿ 38.75 ಸೆಕೆಂಡುಗಳಲ್ಲಿ ಗುರಿ ತಲುಪಿದ ಗುರಿಂದರ್‌ವೀರ್ ಸಿಂಗ್, ಅನಿಮೇಶ್ ಕುಜುರ್, ಮಣಿಕಂಠ ಹೋಬಳಿದಾರ್ ಮತ್ತು ಅಮ್ಲಾನ್ ಬೋರ್ಗೊಹೈನ್ ಅವರನ್ನು ಒಳಗೊಂಡ ಭಾರತ ತಂಡವು ಚಿನ್ನದ ಪದಕವನ್ನು ತನ್ನದಾಗಿಸಿಕೊಂಡಿತು. ಆದಾಗ್ಯೂ, ಟೋಕಿಯೊ ವಿಶ್ವ ಚಾಂಪಿಯನ್‌ಷಿಪ್‌ಗೆ ಅರ್ಹತೆ ಪಡೆಯುವಲ್ಲಿ ವಿಫಲವಾಯಿತು.
ಮಹಿಳೆಯರ 4x100 ಮೀ. ರಿಲೇ ಸ್ಪರ್ಧೆಯಲ್ಲಿ ವಿ.ಸುಧೀಕ್ಷಾ, ಎಸ್.ಎಸ್.ಸ್ನೇಹಾ, ಅಭಿನಯಾ ರಾಜರಾಜನ್ ಮತ್ತು ನಿತ್ಯಾ ಗಂಧೆ ಅವರನ್ನೊಳಗೊಂಡ ಭಾರತ ತಂಡ 44.06 ಸೆಕೆಂಡುಗಳಲ್ಲಿ ಗುರಿ ತಲುಪಿ, ಸ್ವರ್ಣ ಪದಕ ಜಯಿಸಿತು.
ಕೂಟದಲ್ಲಿ ಆರು ಚಿನ್ನದ ಪದಕಗಳೊಂದಿಗೆ ಭಾರತವು ಪದಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.