ADVERTISEMENT

ಏಷ್ಯನ್‌ ಚಾಂಪಿಯನ್ಸ್‌ ಟ್ರೋಫಿ ಹಾಕಿ ಟೂರ್ನಿ: ಪಾಕ್‌ ಎದುರು ಗೆದ್ದ ಭಾರತ

ಮನಪ್ರೀತ್‌, ಮನದೀಪ್‌ ಮಿಂಚು

ಪಿಟಿಐ
Published 21 ಅಕ್ಟೋಬರ್ 2018, 15:32 IST
Last Updated 21 ಅಕ್ಟೋಬರ್ 2018, 15:32 IST
ಭಾರತ ಮತ್ತು ಪಾಕಿಸ್ತಾನದ ಆಟಗಾರರ ಪೈಪೋಟಿಯ ಕ್ಷಣ –ಪಿಟಿಐ ಚಿತ್ರ
ಭಾರತ ಮತ್ತು ಪಾಕಿಸ್ತಾನದ ಆಟಗಾರರ ಪೈಪೋಟಿಯ ಕ್ಷಣ –ಪಿಟಿಐ ಚಿತ್ರ   

ಮಸ್ಕತ್‌: ನಾಯಕ ಮನಪ್ರೀತ್‌ ಸಿಂಗ್‌, ಮನದೀಪ್‌ ಸಿಂಗ್ ಮತ್ತು ದಿಲ್‌ಪ್ರೀತ್‌ ಸಿಂಗ್ ಅವರ ಅಮೋಘ ಆಟದ ಬಲದಿಂದ ಭಾರತ ತಂಡ ಏಷ್ಯನ್‌ ಚಾಂಪಿಯನ್ಸ್‌ ಟ್ರೋಫಿ ಹಾಕಿ ಟೂರ್ನಿಯ ‍ಪಂದ್ಯದಲ್ಲಿ ಜಯಭೇರಿ ಮೊಳಗಿಸಿದೆ.

ಶನಿವಾರ ರಾತ್ರಿ ನಡೆದ ಹೋರಾಟದಲ್ಲಿ ಭಾರತ 3–1 ಗೋಲುಗಳಿಂದ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ‍ಪರಾಭವಗೊಳಿಸಿದೆ.

ಇದರೊಂದಿಗೆ ಪಾಕ್‌ ಎದುರು ಸತತ 11 ಪಂದ್ಯಗಳನ್ನು ಗೆದ್ದ ಸಾಧನೆ ಮಾಡಿದೆ.

ADVERTISEMENT

ಹಿಂದಿನ ಸೋಲುಗಳಿಗೆ ಮುಯ್ಯಿ ತೀರಿಸಿಕೊಳ್ಳುವ ಗುರಿಯೊಂದಿಗೆ ಕಣಕ್ಕಿಳಿದಿದ್ದ ಪಾಕಿಸ್ತಾನ ತಂಡ ಮೊದಲ ನಿಮಿಷದಲ್ಲೇ ಖಾತೆ ತೆರೆಯಿತು. ಪೆನಾಲ್ಟಿ ಕಾರ್ನರ್‌ ಅವಕಾಶದಲ್ಲಿ ಮೊಹಮ್ಮದ್‌ ಇರ್ಫಾನ್‌ ಜೂನಿಯರ್‌ ಚೆಂಡನ್ನು ಗುರಿ ತಲುಪಿಸಿದರು.

ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿರುವ ಮನಪ್ರೀತ್ ಸಿಂಗ್‌ ಬಳಗ ಇದರಿಂದ ಎದೆಗುಂದಲಿಲ್ಲ. ನಂತರ ಆಟದ ವೇಗ ಹೆಚ್ಚಿಸಿಕೊಂಡ ಭಾರತದ ಆಟಗಾರರು ಚೆಂಡು ಹೆಚ್ಚು ಕಾಲ ತಮ್ಮ ಬಳಿಯೇ ಇರುವಂತೆ ನೋಡಿಕೊಂಡರು. ಜೊತೆಗೆ ಪೆನಾಲ್ಟಿ ಕಾರ್ನರ್‌ಗಳನ್ನೂ ಸೃಷ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಆದರೆ ಪಾಕಿಸ್ತಾನದ ರಕ್ಷಣಾ ವಿಭಾಗದ ಆಟಗಾರರನ್ನು ವಂಚಿಸಿ ಚೆಂಡನ್ನು ಗುರಿ ಮುಟ್ಟಿಸಲು ಮಾತ್ರ ಆಗಲಿಲ್ಲ.

ಭಾರತದ ಆಟಗಾರರ ನಿರಂತರ ಪ್ರಯತ್ನಕ್ಕೆ ಎರಡನೇ ಕ್ವಾರ್ಟರ್‌ನಲ್ಲಿ ಯಶಸ್ಸು ಲಭಿಸಿತು. 24ನೇ ನಿಮಿಷದಲ್ಲಿ ಕೈಚಳಕ ತೋರಿದ ಮಿಡ್‌ಫೀಲ್ಡರ್‌ ಮನಪ್ರೀತ್‌ 1–1ರ ಸಮಬಲಕ್ಕೆ ಕಾರಣರಾದರು.

ಸಹ ಆಟಗಾರ ತಮ್ಮತ್ತ ತಳ್ಳಿದ ಚೆಂಡಿನ ಮೇಲೆ ಚುರುಕಾಗಿ ನಿಯಂತ್ರಣ ಸಾಧಿಸಿದ ಮನಪ್ರೀತ್‌, ಎದುರಾಳಿ ತಂಡದ ರಕ್ಷಣಾ ವಿಭಾಗದ ಆಟಗಾರರ ಕಣ್ತಪ್ಪಿಸಿ ಅದನ್ನು ಗುರಿ ಸೇರಿಸುವಲ್ಲಿ ಸಫಲರಾದರು. ನಂತರ ಉಭಯ ತಂಡದವರಿಗೂ ಮುನ್ನಡೆ ಗೋಲು ಗಳಿಸುವ ಅವಕಾಶಗಳು ಲಭ್ಯವಾಗಿದ್ದವು. ಅವುಗಳನ್ನು ಸದುಪಯೋಗಪಡಿಸಿಕೊಳ್ಳಲು ಯಾರಿಗೂ ಆಗಲಿಲ್ಲ. ಹೀಗಾಗಿ ಮೊದಲಾರ್ಧದ ಆಟ 1–1ರಲ್ಲಿ ಸಮಬಲವಾಯಿತು.

ದ್ವಿತೀಯಾರ್ಧದಲ್ಲಿ ಭಾರತ ತಂಡ ಪ್ರಾಬಲ್ಯ ಮೆರೆಯಿತು. ಮೂರನೇ ಕ್ವಾರ್ಟರ್‌ನಲ್ಲಿ ಮನದೀಪ್‌ ಸಿಂಗ್‌ ಮೋಡಿ ಮಾಡಿದರು. 31ನೇ ನಿಮಿಷದಲ್ಲಿ ಆಕಾಶ್‌ದೀಪ್‌ ಸಿಂಗ್‌ ನೀಡಿದ ಪಾಸ್‌ನಲ್ಲಿ ಮನದೀಪ್‌ ತಳ್ಳಿದ ಚೆಂಡು ಪಾಕಿಸ್ತಾನದ ಗೋಲ್‌ಕೀಪರ್‌ ಇಮ್ರಾನ್‌ ಬಟ್‌ ಅವರನ್ನು ವಂಚಿಸಿ ಗೋಲು ಪೆಟ್ಟಿಗೆಯೊಳಗೆ ಸೇರುತ್ತಿದ್ದಂತೆ ಭಾರತದ ಪಾಳಯದಲ್ಲಿ ಸಂಭ್ರಮ ಗರಿಗೆದರಿತು.

42ನೇ ನಿಮಿಷದಲ್ಲಿ ದಿಲ್‌ಪ್ರೀತ್‌ ಗೋಲು ದಾಖಲಿಸಿ ಭಾರತದ ಗೆಲುವಿನ ಹಾದಿ ಸುಗಮ ಮಾಡಿದರು. ನಂತರ ರಕ್ಷಣಾ ವಿಭಾಗದಲ್ಲಿ ಎಚ್ಚರಿಕೆಯ ಆಟ ಆಡಿದ ಮನಪ್ರೀತ್‌ ಬಳಗ ಖುಷಿಯ ಕಡಲಲ್ಲಿ ತೇಲಿತು.

ಭಾರತ ತಂಡ ತನ್ನ ಮೂರನೇ ಪಂದ್ಯದಲ್ಲಿ ಜಪಾನ್‌ ಎದುರು ಆಡಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.