ADVERTISEMENT

ಒಲಿಂಪಿಕ್ಸ್ ಸಿದ್ಧತೆಗೆ ಏಷ್ಯನ್ ಚಾಂಪಿಯನ್‌ಷಿಪ್ ನಿರ್ಣಾಯಕ: ಮೇರಿ ಕೋಮ್‌

ಪಿಟಿಐ
Published 19 ಮೇ 2021, 13:08 IST
Last Updated 19 ಮೇ 2021, 13:08 IST
ಮೇರಿ ಕೋಮ್‌–ಎಎಫ್‌ಪಿ ಚಿತ್ರ
ಮೇರಿ ಕೋಮ್‌–ಎಎಫ್‌ಪಿ ಚಿತ್ರ   

ನವದೆಹಲಿ: ಈ ಬಾರಿಯ ಏಷ್ಯನ್ ಚಾಂಪಿಯನ್‌ಷಿಪ್‌ ತನಗೆ ಕೇವಲ ಪದಕ ಗೆಲ್ಲುವ ಕೂಟವಾಗಿರದೆ, ಒಲಿಂಪಿಕ್ಸ್ ಸಿದ್ಧತೆಗೆ ನಿರ್ಣಾಯಕವಾಗಿರಲಿದೆ ಎಂದು ಭಾರತದ ಮಹಿಳಾ ಬಾಕ್ಸಿಂಗ್‌ ಪಟು ಎಂ.ಸಿ.ಮೇರಿ ಕೋಮ್‌ ಅಭಿಪ್ರಾಯಪಟ್ಟಿದ್ದಾರೆ.

ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ಇದುವರೆಗೆ ಐದು ಬಾರಿ ಸ್ಪರ್ಧಿಸಿರುವ ಮೇರಿ (51 ಕೆಜಿ ವಿಭಾಗ) ಅವರು ಐದು ಚಿನ್ನ ಮತ್ತು ಒಂದು ಬೆಳ್ಳಿ ಪದಕ ತಮ್ಮದಾಗಿಸಿಕೊಂಡಿದ್ದಾರೆ.

ಆರು ಬಾರಿ ವಿಶ್ವ ಚಾಂಪಿಯನ್ ಆಗಿರುವ ಅವರು, ದುಬೈನಲ್ಲಿ ಇದೇ 24ರಿಂದ ನಡೆಯಲಿರುವ ಈ ಬಾರಿ ಏಷ್ಯನ್ ಕೂಟದಲ್ಲಿ ಪಾಲ್ಗೊಳ್ಳಲು ಕಾತರರಾಗಿದ್ದಾರೆ.

ADVERTISEMENT

‘ಕೋವಿಡ್‌ ಕಾರಣದಿಂದ ಭಾರತದಲ್ಲಿ ತರಬೇತಿಗೆ ತೊಂದರೆಯಾಗಿದೆ. ಹೀಗಾಗಿ ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ಸ್ಪರ್ಧಿಸಲು ಉತ್ಸುಕಳಾಗಿದ್ದು, ನನ್ನ ಸಾಮರ್ಥ್ಯದ ಮೌಲ್ಯಮಾಪನ ಮಾಡಲು ಅನುಕೂಲವಾಗಲಿದೆ‘ ಎಂದು ಮಣಿಪುರದ 38 ವರ್ಷದ ಮೇರಿ ನುಡಿದರು. ಸದ್ಯ ಅವರು ಪುಣೆಯಲ್ಲಿ ತರಬೇತಿ ನಿರತರಾಗಿದ್ದಾರೆ.

ಕೋವಿಡ್ ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಲ್ಲಿ, ದೆಹಲಿಯಲ್ಲಿ ನಡೆಯುತ್ತಿದ್ದ ರಾಷ್ಟ್ರೀಯ ಬಾಕ್ಸಿಂಗ್ ಶಿಬಿರವನ್ನು ಸ್ಥಗಿತಗೊಳಿಸಲಾಗಿತ್ತು. ಹೀಗಾಗಿ ಒಲಿಂಪಿಕ್ಸ್ ಅರ್ಹತೆ ಪಡೆದಿರುವ ಮಹಿಳಾ ಬಾಕ್ಸರ್‌ಗಳಿಗೆ ಪುಣೆಯಲ್ಲಿ ತರಬೇತಿಗೆ ಅವಕಾಶ ಕಲ್ಪಿಸಲಾಗಿದೆ.

‘ಇದು ಕಷ್ಟದ ಸಮಯ. ಮಾರ್ಚ್‌ನಲ್ಲಿ ನಡೆದ ಸ್ಪೇನ್ ಟೂರ್ನಿಯಲ್ಲಿ ಪಾಲ್ಗೊಂಡ ನಂತರದಿಂದ ನಾನು ಮನೆಯಲ್ಲೇ ಇದ್ದೇನೆ. ನನ್ನ ಮಕ್ಕಳ ಆರೋಗ್ಯ ಚೆನ್ನಾಗಿಲ್ಲ. ಅವರನ್ನು ಸಂಭಾಳಿಸಬೇಕು. ಅಲ್ಲದೆ ದೆಹಲಿಯಲ್ಲಿ ಶಿಬಿರ ಕೂಡ ಸ್ಥಗಿತಗೊಂಡಿತ್ತು‘ ಎಂದು ಮೇರಿ ನುಡಿದರು.

ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಿರುವ ಮೇರಿ ಕೋಮ್, ಸಿಮ್ರನ್‌ಜೀತ್ ಕೌರ್‌ (60 ಕೆಜಿ ವಿಭಾಗ), ಲವ್ಲಿನಾ ಬೊರ್ಗೊಹೈನ್‌ (69 ಕೆಜಿ) ಹಾಗೂ ಪೂಜಾ ರಾಣಿ (75 ಕೆಜಿ) ಸೇರಿ ಇನ್ನುಳಿದ ಆರು ಮಂದಿ ಮಹಿಳಾ ಬಾಕ್ಸರ್‌ಗಳು ಏಷ್ಯನ್ ಕೂಟದಲ್ಲಿ ಅದೃಷ್ಟ ಪರೀಕ್ಷಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.