ಬಿಹಾರದ ರಾಜಗೀರ್‌ನಲ್ಲಿ ಭಾನುವಾರ ನಡೆದ ಏಷ್ಯಾ ಕಪ್ ಹಾಕಿ ಫೈನಲ್‌ನಲ್ಲಿ ಜಯಿಸಿದ ಭಾರತ ಪುರುಷರ ತಂಡವು ಟ್ರೋಫಿಯೊಂದಿಗೆ ಸಂಭ್ರಮಿಸಿತು
ಪಿಟಿಐ ಚಿತ್ರ
ರಾಜಗೀರ್, ಬಿಹಾರ: ದಿಲ್‌ಪ್ರೀತ್ ಸಿಂಗ್ ಅವರು ಹೊಡೆದ ಎರಡು ಗೋಲುಗಳ ಬಲದಿಂದ ಭಾರತ ಹಾಕಿ ತಂಡವು ಏಷ್ಯಾ ಕಪ್ ಗೆದ್ದುಕೊಂಡಿತು. ಇದರೊಂದಿಗೆ ಮುಂದಿನ ವರ್ಷ ನಡೆಯಲಿರುವ ವಿಶ್ವಕಪ್ ಟೂರ್ನಿಗೆ ಅರ್ಹತೆ ಗಳಿಸಿಕೊಂಡಿತು.
ಭಾನುವಾರ ಇಲ್ಲಿ ನಡೆದ ಫೈನಲ್‌ನಲ್ಲಿ ಭಾರತ ತಂಡವು 4–1ರಿಂದ ಹಾಲಿ ಚಾಂಪಿಯನ್ ದಕ್ಷಿಣ ಕೊರಿಯಾದ ವಿರುದ್ಧ ಗೆದ್ದಿತು. ಇದು ಭಾರತಕ್ಕೆ ನಾಲ್ಕನೇ ಏಷ್ಯನ್ ಟ್ರೋಫಿ ಆಗಿದೆ. ಈ ಟೂರ್ನಿಯ ಇತಿಹಾಸದಲ್ಲಿ ಅತ್ಯಧಿಕ ಟ್ರೋಫಿಗಳನ್ನು ಜಯಿಸಿದ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಐದು ಬಾರಿ ಗೆದ್ದಿರುವ ದಕ್ಷಿಣ ಕೊರಿಯಾ ಮೊದಲ ಸ್ಥಾನದಲ್ಲಿದೆ. ಭಾರತ ತಮಡವು 2003 (ಕೌಲಾಲಂಪುರ), 2007 (ಚೆನ್ನೈ) ಮತ್ತು 2017ರಲ್ಲಿ ಢಾಕಾದಲ್ಲಿ ಏಷ್ಯಾ ಕಪ್ ಜಯಿಸಿತ್ತು.
ಮುಂದಿನ ವರ್ಷದ ಆಗಸ್ಟ್ 14ರಿಂದ 30ರವರೆಗೆ ಬೆಲ್ಜಿಯಂ ಮತ್ತು ನೆದರ್ಲೆಂಡ್ಸ್ ಜಂಟಿ ಆತಿಥ್ಯದಲ್ಲಿ ನಡೆಯಲಿರುವ ಎಫ್‌ಐಎಚ್ ವಿಶ್ವಕಪ್ ಟೂರ್ನಿಗೆ ಭಾರತವು ನೇರಪ್ರವೇಶ ಪಡೆಯಿತು.
ಭಾರತ ತಂಡದ ದಿಲ್‌ಪ್ರೀತ್ ಅವರು 28ನೇ ನಿಮಿಷ ಮತ್ತು 45ನೇ ನಿಮಿಷದಲ್ಲಿ ಗೋಲು ಗಳಿಸಿದರು. ಸುಖಜೀತ್ ಸಿಂಗ್ ಅವರು ಮೊದಲ ನಿಮಿಷದಲ್ಲಿಯೇ ಗೋಲು ಹೊಡೆದು ತಂಡದಕ್ಕೆ ಉತ್ತಮ ಆರಂಭ ನೀಡಿದ್ದರು. ಅಮಿತ್ ರೋಹಿದಾಸ್ (50ನೇ ನಿ) ಒಂದು ಗೋಲು ಹೊಡೆದು ಮುನ್ನಡೆ ಒದಗಿಸಿದರು.
ಕೊರಿಯಾ ತಂಡದ ಏಕೈಕ ಗೋಲನ್ನು ಡಯಾನ್ ಸನ್ (51ನೇ ನಿ) ದಾಖಲಿಸಿದರು.
ಭಾರತದ ಆಟಗಾರರು ಪಂದ್ಯದ ಆರಂಭದಿಂದಲೇ ಚೆಂಡಿನ ಮೇಲೆ ನಿಯಂತ್ರಣ ಸಾಧಿಸಿದರು. ಡಿಫೆನ್ಸ್, ಮಿಡ್‌ಫೀಲ್ಡ್ ಮತ್ತು ಫಾರ್ವರ್ಡ್ ಆಟಗಾರರ ನಡುವೆ ಉತ್ತಮ ಹೊಂದಾಣಿಕೆ ಇತ್ತು. ಇದರಿಂದಾಗಿ ಎದುರಾಳಿಯ ಗೋಲು ವೃತ್ತಕ್ಕೆ ಭಾರತದ ಆಟಗಾರರು ಹಲವು ಬಾರಿ ಪ್ರವೇಶಿಸಿದರು. ಗೋಲು ದಾಖಲಿಸುವ ಪ್ರಯತ್ನ ಮಾಡಿದರು.
ಇನ್ನೊಂದೆಡೆ ಕೊರಿಯಾ ತಂಡವು ಭಾರತದ ದಾಳಿಯನ್ನು ತಡೆಯಲು ರಕ್ಷಣಾತ್ಮಕ ಆಟಕ್ಕೆ ಒತ್ತು ನೀಡಿತು. ಆದರೆ ಅವರಿಗೆ ಈ ಯೋಜನೆ ಕೈಕೊಟ್ಟಿತು. ಇದರಿಂದಾಗಿ ಕೊರಿಯಾ ಆಟಗಾರರು ಗೋಲು ಗಳಿಸುವ ಅವಕಾಶಗಳನ್ನು ಪಡೆಯುವಲ್ಲಿ ವಿಫಲರಾದರು. ಮೊದಲೆರಡೂ ಕ್ವಾರ್ಟರ್‌ಗಳಲ್ಲಿ ಭಾರತದ ರಕ್ಷಣಾ ಪಡೆಯು ಬಂಡೆಗಲ್ಲಿನಂತೆ ಎದುರಾಳಿ ಆಟಗಾರರಿಗೆ ತಡೆಯೊಡ್ಡಿತು.
ಪಂದ್ಯದ ಮೊದಲ 30 ಸೆಕೆಂಡುಗಳಲ್ಲಿಯೇ ಗೋಲು ದಾಖಲಿಸುವಲ್ಲಿ ಭಾರತ ಸಫಲವಾಯಿತು. ಲೆಫ್ಟ್ ಫ್ಲ್ಯಾಂಕ್‌ನಿಂದ ನಾಯಕ ಹರ್ಮನ್‌ಪ್ರೀತ್ ಸಿಂಗ್ ಅವರು ಚುರುಕಾದ ಪಾಸ್ ನೀಡಿದರು. ಸುಖಜೀತ್ ಚೆಂಡನ್ನು ರಿವರ್ಸ್ ಹಿಟ್ ಮಾಡುವ ಮೂಲಕ ಎಡ ಮೇಲ್ಭಾಗದ ಮೂಲಕ ಗೋಲುಪೆಟ್ಟಿಗೆ ಸೇರಿಸಿದರು.
ಎಂಟನೇ ನಿಮಿಷದಲ್ಲಿ ದಿಲ್‌ಪ್ರೀತ್ ಸಿಂಗ್ ಅವರ ಗೋಲು ಹೊಡೆಯುವ ಪ್ರಯತ್ನ ಫಲಿಸಲಿಲ್ಲ. ಆದರೆ ನಂತರದ ಅವಧಿಯಲ್ಲಿ ಎರಡು ಗೋಲು ದಾಖಲಿಸಿ ದೊಡ್ಡ ಮುನ್ನಡೆ ಒದಗಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.