ADVERTISEMENT

16ನೇ ಏಷ್ಯನ್‌ ಶೂಟಿಂಗ್‌ ಚಾಂಪಿಯನ್‌ಷಿಪ್‌: ಐಶ್ವರಿ ಪ್ರತಾಪ್‌ಗೆ ಚಿನ್ನ

ಪಿಟಿಐ
Published 24 ಆಗಸ್ಟ್ 2025, 21:47 IST
Last Updated 24 ಆಗಸ್ಟ್ 2025, 21:47 IST
ಐಶ್ವರಿ ಪ್ರತಾಪ್ ಸಿಂಗ್‌ ತೋಮಾರ್
ಐಶ್ವರಿ ಪ್ರತಾಪ್ ಸಿಂಗ್‌ ತೋಮಾರ್   

ಶಿಮ್ಕೆಟ್‌ (ಕಜಾಕಸ್ತಾನ) (ಪಿಟಿಐ): ಭಾರತದ ತಾರಾ ಶೂಟರ್‌ ಐಶ್ವರಿ ಪ್ರತಾಪ್ ಸಿಂಗ್‌ ತೋಮಾರ್ ಅವರು ಇಲ್ಲಿ ನಡೆಯುತ್ತಿರುವ 16ನೇ ಏಷ್ಯನ್‌ ಶೂಟಿಂಗ್‌ ಚಾಂಪಿಯನ್‌ಷಿಪ್‌ನ ಪುರುಷರ 50 ಮೀ. ರೈಫಲ್ 3 ಪೊಸಿಷನ್ಸ್‌ (3ಪಿ) ವಿಭಾಗದಲ್ಲಿ ಚಿನ್ನದ ಪದಕ ಗೆದ್ದರು.

24 ವರ್ಷ ವಯಸ್ಸಿನ ಐಶ್ವರಿ ಅವರು ಭಾನುವಾರ ನಡೆದ ಫೈನಲ್‌ ಸ್ಪರ್ಧೆಯಲ್ಲಿ 462.5 ಅಂಕಗಳನ್ನು ಗಳಿಸಿ ಪ್ರಶಸ್ತಿಗೆ ಮುತ್ತಿಕ್ಕಿದರು. ಅವರು 2023ರ ಟೂರ್ನಿಯ ಇದೇ ಸ್ಪರ್ಧೆಯಲ್ಲಿ ಚಿನ್ನದ ಪದಕ ಜಯಿಸಿದ್ದರು.

ಚೀನಾದ ವೆನ್ಯು ಝಾಒ (462) ಬೆಳ್ಳಿ ಗೆದ್ದರೆ, ಜಪಾನ್‌ನ ನಯೊಕಾ ಒಕಾಡಾ (445.8) ಕಂಚಿನ ಪದಕ ಜಯಿಸಿದರು. ಸ್ಪರ್ಧೆಯಲ್ಲಿದ್ದ ಮತ್ತಿಬ್ಬರು ಭಾರತೀಯರಾದ ಚೈನ್‌ ಸಿಂಗ್‌ (435.7) ಹಾಗೂ ಅಖಿಲ್‌ ಶಿಯೊರಾಣ್‌ (424.9) ಅವರು ಕ್ರಮವಾಗಿ ನಾಲ್ಕು ಮತ್ತು ಐದನೇ ಸ್ಥಾನ ಪಡೆದು, ಪದಕ ಗೆಲ್ಲುವಲ್ಲಿ ವಿಫಲರಾದರು.

ADVERTISEMENT

ಪುರುಷರ 50 ಮೀ. ರೈಫಲ್ 3 ಪೊಸಿಷನ್ಸ್‌ ಸ್ಪರ್ಧೆಯ ತಂಡ ವಿಭಾಗದಲ್ಲಿ ಐಶ್ವರಿ, ಚೈನ್‌ ಸಿಂಗ್‌ ಹಾಗೂ ಶಿಯೊರಾಣ್‌ ಅವರು ಒಟ್ಟು 1,747 ಅಂಕಗಳೊಡನೆ ಬೆಳ್ಳಿ ಪದಕ ಗೆದ್ದುಕೊಂಡರು. 1,750 ಅಂಕ ಗಳಿಸಿದ್ದ ಚೀನಾ ಚಿನ್ನದ ಪದಕವನ್ನು ತನ್ನದಾಗಿಸಿಕೊಂಡಿತು.

ಅದ್ರಿಯಾನ್‌ಗೆ ಸ್ವರ್ಣ: ಉದಯೋನ್ಮುಖ ಶೂಟರ್‌ ಅದ್ರಿಯಾನ್‌ ಕರ್ಮಾಕರ್‌ ಅವರು (463.8 ಅಂಕ) ಜೂನಿಯರ್‌ ಪುರುಷರ 3 ಪೊಸಿಷನ್ಸ್‌ ಸ್ಪರ್ಧೆಯಲ್ಲಿ ಏಷ್ಯನ್‌ ಜೂನಿಯರ್‌ ದಾಖಲೆಯೊಂದಿಗೆ ಚಿನ್ನದ ಪದಕ ಗೆದ್ದುಕೊಂಡರು. ಚೀನಾದ ಹಾನ್‌ ಯಿನಾನ್‌ (459.6) ಬೆಳ್ಳಿ ಗೆದ್ದರೆ, ಕಣದಲ್ಲಿದ್ದ ಮತ್ತೊಬ್ಬ ಭಾರತೀಯ ವೇದಾಂತ್‌ ನಿತಿನ್‌ (448.8) ಕಂಚಿಗೆ ತೃಪ್ತಿಪಟ್ಟರು.

ಅದ್ರಿಯಾನ್‌ ಹಾಗೂ ವೇದಾಂತ್‌ ಅವರು ರೋಹಿತ್‌ ಕನ್ಯಾನ್‌ ಜೊತೆಗೂಡಿ ಜೂನಿಯರ್‌ ಪುರುಷರ 50 ಮೀ. ರೈಫಲ್ 3 ಪೊಸಿಷನ್ಸ್‌ ಸ್ಪರ್ಧೆಯ ತಂಡ ವಿಭಾಗದಲ್ಲಿ ಸ್ವರ್ಣ ಪದಕ ಜಯಿಸಿದರು. ಭಾರತ ತಂಡ 1,733 ಅಂಕ ಗಳಿಸಿದರೆ, ಕೊರಿಯಾ 1,722 ಅಂಕಗಳೊಂದಿಗೆ ಬೆಳ್ಳಿ ಪದಕವನ್ನು ತನ್ನದಾಗಿಸಿಕೊಂಡಿತು.

ಹೃದ್ಯಾ ಶ್ರೀ ಕೊಂಡೂರು

ಕನ್ನಡತಿ ಹೃದ್ಯಾಗೆ ಚಿನ್ನ

ಕನ್ನಡತಿ ಹೃದ್ಯಾ ಶ್ರೀ ಕೊಂಡೂರು ಶಾಂಭವಿ ಶ್ರವಣ್‌ ಹಾಗೂ ಇಶಾ ಅನಿಲ್‌ ಅವರು ಜೂನಿಯರ್‌ ಮಹಿಳೆಯರ 10 ಮೀ. ಏರ್‌ ರೈಫಲ್ ಸ್ಪರ್ಧೆಯ ತಂಡ ವಿಭಾಗದಲ್ಲಿ ಸ್ವರ್ಣ ಪದಕ ಜಯಿಸಿದರು. ಪ್ರಶಸ್ತಿ ಸುತ್ತಿನಲ್ಲಿ ಒಟ್ಟು 1896.2 ಅಂಕಗಳನ್ನು ಸಂಪಾದಿಸಿದ ಅವರು ಜೂನಿಯರ್‌ ವಿಶ್ವದಾಖಲೆ ಹಾಗೂ ಏಷ್ಯನ್‌ ದಾಖಲೆಯನ್ನು ನಿರ್ಮಿಸಿದರು. ಚೀನಾ (1884.9) ಮತ್ತು ಕೊರಿಯಾ (1879) ತಂಡಗಳು ಕ್ರಮವಾಗಿ ಬೆಳ್ಳಿ ಮತ್ತು ಕಂಚು ಗೆದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.