ADVERTISEMENT

ಏಷ್ಯನ್‌ ಚಾಂಪಿಯನ್‌ಷಿಪ್‌: ಭಾರತದ ಶೂಟರ್‌ಗಳ ಮೇಲೆ ನಿರೀಕ್ಷೆಯ ಭಾರ

ಪಿಟಿಐ
Published 3 ಫೆಬ್ರುವರಿ 2026, 16:22 IST
Last Updated 3 ಫೆಬ್ರುವರಿ 2026, 16:22 IST
ಮನು ಭಾಕರ್‌
ಮನು ಭಾಕರ್‌   

ನವದೆಹಲಿ: ಒಲಿಂಪಿಕ್‌ ಅವಳಿ ಪದಕ ವಿಜೇತೆ ಮನು ಭಾಕರ್‌ ಮತ್ತು ವಿಶ್ವ ಚಾಂಪಿಯನ್‌ ಸಾಮ್ರಾಟ್‌ ರಾಣಾ ಸೇರಿದಂತೆ ಭಾರತದ ಶೂಟರ್‌ಗಳು ಇಲ್ಲಿ ಬುಧವಾರ ಆರಂಭವಾಗುವ ಏಷ್ಯನ್‌ ಚಾಂಪಿಯನ್‌ಷಿಪ್‌ನಲ್ಲಿ (ರೈಫಲ್‌/ಪಿಸ್ತೂಲ್‌) ಉತ್ತಮ ಆರಂಭದ ಗುರಿ ಹೊಂದಿದ್ದಾರೆ.

ಇಲ್ಲಿನ ಡಾ.ಕರ್ಣಿ ಸಿಂಗ್ ಶೂಟಿಂಗ್ ರೇಂಜ್‌ಗಳಲ್ಲಿ ನಡೆಯುವ ಸ್ಪರ್ಧೆಯಲ್ಲಿ ವಿಶ್ವಕಪ್ ಫೈನಲ್ ಚಾಂಪಿಯನ್ ಸುರುಚಿ ಸಿಂಗ್ ಮತ್ತು ಇಶಾ ಸಿಂಗ್ ಅವರೂ ಪದಕ ಬೇಟೆ ಆರಂಭಿಸುವರು.

ಮೊದಲ ದಿನವೇ ನಾಲ್ಕು ಫೈನಲ್‌ ಸ್ಪರ್ಧೆಗಳು ನಡೆಯಲಿವೆ. ಸೀನಿಯರ್‌ ಪುರುಷರ ಮತ್ತು ಮಹಿಳೆಯರ 10 ಮೀ. ಏರ್ ಪಿಸ್ತೂಲ್, ಜೂನಿಯರ್ ಮತ್ತು ಯೂತ್ ಪುರುಷರ 10 ಮೀ ಏರ್ ಪಿಸ್ತೂಲ್‌ನಲ್ಲಿ ಪದಕದ ಸ್ಪರ್ಧೆ ನಿಗದಿಯಾಗಿದೆ.

ADVERTISEMENT

ಮನು, ಇಶಾ, ಸುರುಚಿ ಅವರು ಭಾರತದ ಮಹಿಳೆಯರ ವಿಭಾಗವನ್ನು ಮುನ್ನಡೆಸಲಿದ್ದಾರೆ. ವಿಶ್ವದ ನಾಲ್ಕನೇ ಕ್ರಮಾಂಕದ ಮತ್ತು ವಿಶ್ವ ಬೆಳ್ಳಿ ಪದಕ ವಿಜೇತೆ ಹೋ ಚಿಂಗ್ ಶಿಂಗ್ (ಹಾಂಗ್‌ಕಾಂಗ್‌) ಅವರೂ ಸ್ಪರ್ಧೆಯಲ್ಲಿದ್ದಾರೆ.  

ಸಾಮ್ರಾಟ್ ಅವರೊಂದಿಗೆ ವಿಶ್ವದ ಎರಡನೇ ಕ್ರಮಾಂಕದ ಮತ್ತು ವಿಶ್ವ ಕಂಚಿನ ಪದಕ ವಿಜೇತ ವರುಣ್ ತೋಮರ್ ಮತ್ತು ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ 12ನೇ ಸ್ಥಾನ ಪಡೆದ ಶರ್ವಣ್ ಕುಮಾರ್‌ ಅವರು ಪುರುಷರ ತಂಡವನ್ನು ಮುನ್ನಡೆಸಲಿದ್ದಾರೆ.

ಟೂರ್ನಿಗಾಗಿ ಭಾರತವು 118 ಶೂಟರ್‌ಗಳ ಅತಿ ದೊಡ್ಡ ತುಕಡಿಯನ್ನು ನಿಯೋಜಿಸಿದೆ. 35 ಮಂದಿಯನ್ನು ಒಳಗೊಂಡ ಕಜಾಕಸ್ತಾನ ಎರಡನೇ ಅತಿದೊಡ್ಡ ತುಕಡಿಯನ್ನು ಕಳುಹಿಸಿದೆ.

ಶೂಟಿಂಗ್‌ ಶಕ್ತಿಕೇಂದ್ರಗಳಾದ ದಕ್ಷಿಣ ಕೊರಿಯಾ ಮತ್ತು ಜಪಾನ್‌ ಬಲಿಷ್ಠ ತಂಡಗಳನ್ನು ಕಣಕ್ಕಿಳಿಸಿವೆ. ತೈವಾನ್‌, ವಿಯೆಟ್ನಾಂ ಮತ್ತು ಹಾಂಗ್‌ಕಾಂಗ್‌ನ ಶೂಟರ್‌ಗಳೂ ಉತ್ತಮ ಪ್ರದರ್ಶನ ನೀಡುವ ನಿರೀಕ್ಷೆಯಲ್ಲಿದ್ದಾರೆ.

ಸಾಮ್ರಾಟ್‌ ರಾಣಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.