ಚಿನ್ನದ ಪದಕಗಳೊಂದಿಗೆ ಸಿಫ್ತ್ ಕೌರ್ ಸಮ್ರಾ
ಎಸ್‌ಎಐ ಚಿತ್ರ
ಶಿಮ್ಕೆಟ್ (ಕಜಾಕಸ್ತಾನ): ಭಾರತದ ಶೂಟರ್‌ಗಳು ಇಲ್ಲಿ ನಡೆಯುತ್ತಿರುವ 16ನೇ ಏಷ್ಯನ್ ಶೂಟಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಮಂಗಳವಾರವೂ ಪ್ರಾಬಲ್ಯ ಮುಂದುವರಿಸಿದರು. ಒಲಿಂಪಿಯನ್ ಸಿಫ್ತ್ ಕೌರ್ ಸಮ್ರಾ ಅವರು ಎರಡು ಚಿನ್ನದ ಪದಕಗಳನ್ನು ಗೆದ್ದುಕೊಂಡರು.
ಮಹಿಳೆಯರ 50 ಮೀ. ರೈಫಲ್ ತ್ರೀ ಪೊಸಿಷನ್ ಸ್ಪರ್ಧೆಯಲ್ಲಿ ಸ್ವರ್ಣಕ್ಕೆ ಗುರಿಯಿಟ್ಟ ಸಮ್ರಾ, ತಂಡ ವಿಭಾಗದಲ್ಲಿಯೂ ಭಾರತಕ್ಕೆ ಚಿನ್ನದ ಪದಕ ತಂದುಕೊಟ್ಟರು.
ವಿಶ್ವದಾಖಲೆ ಹೊಂದಿರುವ 23 ವರ್ಷ ವಯಸ್ಸಿನ ಸಮ್ರಾ ಅವರು ಫೈನಲ್ ಕಣದಲ್ಲಿ 459.2 ಸ್ಕೋರ್ ಮಾಡಿದರು. ಈ ಸ್ಪರ್ಧೆಯಲ್ಲಿ ಚಿನ್ನ ಗೆದ್ದ ಭಾರತದ ಮೊದಲ ಶೂಟರ್ ಎಂಬ ಗೌರವಕ್ಕೂ ಪಾತ್ರರಾದರು. 2022ರ ಏಷ್ಯನ್ ಕ್ರೀಡಾಕೂಟದಲ್ಲಿ ಚಿನ್ನ ಗೆಲ್ಲುವ ಹಾದಿಯಲ್ಲಿ ಅವರು ವಿಶ್ವದಾಖಲೆ (469.6) ರಚಿಸಿದ್ದರು.
ಚೀನಾದ ಯಾಂಗ್ ಯುಜೀ (458.8) ಬೆಳ್ಳಿ ಗೆದ್ದರೆ, ಜಪಾನ್ ದೇಶದ ಮಿಸಾಕಿ ನೊಬಾಟಾ (448.2) ಕಂಚು ಗೆದ್ದರು. ಕಣದಲ್ಲಿದ್ದ ಭಾರತದ ಅಶಿ ಚೋಸ್ಕಿ (402.8) ಅವರು 7ನೇ ಸ್ಥಾನ ಪಡೆದರು.
ತಂಡ ವಿಭಾಗದಲ್ಲಿ ಸಮ್ರಾ, ಚೋಸ್ಕಿ ಹಾಗೂ ಒಲಿಂಪಿಯನ್ ಅಂಜುಮ್ ಮೌದ್ಗಿಲ್ ಅವರು ಒಟ್ಟು 1,753 ಪಾಯಿಂಟ್ಸ್ ಸಂಪಾದಿಸಿದರು. ಜಪಾನ್ ತಂಡವು 1,750 ಅಂಕಗಳೊಂದಿಗೆ ರಜತ ಪದಕ ಗೆದ್ದರೆ, ಕೊರಿಯಾ (1,747) ಕಂಚಿನ ಪದಕ ತಮ್ಮದಾಗಿಸಿಕೊಂಡರು.
ಟೂರ್ನಿಯಲ್ಲಿ 9 ಚಿನ್ನ ಸೇರಿ 20 ಪದಕಗಳೊಂದಿಗೆ ಭಾರತದ ಸೀನಿಯರ್ ತಂಡವು ಪದಕಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದಿದೆ. ಚೀನಾ 24 ಪದಕಗಳೊಂದಿಗೆ (13 ಚಿನ್ನ) ಅಗ್ರಸ್ಥಾನದಲ್ಲಿದೆ.
ಕಿರಿಯರ ಪದಕ ಬೇಟೆ: ಭಾರತದ ಕಿರಿಯರ ಪದಕ ಬೇಟೆಗೆ ಮಂಗಳವಾರವೂ ಯಾವುದೇ ಅಡ್ಡಿ ಎದುರಾಗಲಿಲ್ಲ. ಜೂನಿಯರ್ ಪುರುಷರ 25 ಮೀಟರ್ ರ್‍ಯಾಪಿಡ್ ಫೈರ್ ವೈಯಕ್ತಿಕ ಸ್ಪರ್ಧೆಯಲ್ಲಿ ಸಮೀರ್ ಕಂಚು ಗೆದ್ದುಕೊಂಡರು. ತಂಡ ವಿಭಾಗದಲ್ಲಿ ಸಮೀರ್, ಸೂರಜ್ ಹಾಗೂ ಅಭಿನವ್ ಒಟ್ಟು 1,724 ಪಾಯಿಂಟ್ಸ್ ಗಳಿಸಿ ಅಗ್ರಸ್ಥಾನ ಪಡೆದರು.
ಹ್ಯಾರಿಸ್ ಸಬೀರಾ ಹಾಗೂ ಆದ್ಯಾ ಕತ್ಯಾಲ್ ಜೂನಿಯರ್ ಮಹಿಳೆಯರ ಟ್ರ್ಯಾಪ್ ವೈಯಕ್ತಿಕ ಸ್ಪರ್ಧೆಯಲ್ಲಿ ಕ್ರಮವಾಗಿ ಚಿನ್ನ ಹಾಗೂ ರಜತ ಪದಕ ಜಯಿಸಿದರು. ಈ ಇಬ್ಬರು ಶೂಟರ್‌ಗಳು ಭವ್ಯಾ ತ್ರಿಪಾಠಿ ಜೊತೆ ಸೇರಿ ತಂಡ ವಿಭಾಗದಲ್ಲಿಯೂ ಚಿನ್ನಕ್ಕೆ ಮುತ್ತಿಕ್ಕಿದರು.
ತೀವ್ರ ಪೈಪೋಟಿಯಿಂದ ಕೂಡಿದ್ದ ಪುರುಷರ ಜೂನಿಯರ್ ವಿಭಾಗದ ಟ್ರ್ಯಾಪ್ ವೈಯಕ್ತಿಕ ಸ್ಪರ್ಧೆಯಲ್ಲಿ ಆರ್ಯವಂಶ ತ್ಯಾಗಿ ಬೆಳ್ಳಿ ಪದಕ ಗೆದ್ದರು. ಫೈನಲ್‌ನಲ್ಲಿ ತ್ಯಾಗಿ ಹಾಗೂ ಕಜಾಕಸ್ತಾನ ನಿಕಿಟಾ ಮೊಯ್ಸೆಯೆವ್ ತಲಾ 40 ಅಂಕ ಗಳಿಸಿದ್ದರು. ಶೂಟ್‌ಆಫ್‌ನಲ್ಲಿ ನಿಕಿಟಾ 1–0ಯಿಂದ ಚಿನ್ನವನ್ನು ತಮ್ಮದಾಗಿಸಿಕೊಂಡರು. ತಂಡ ವಿಭಾಗದಲ್ಲಿ ತ್ಯಾಗಿ, ಅರ್ಜುನ್ ಹಾಗೂ ಉದ್ಧವ್ ರಾಥೋಡ್ ಜೋಡಿ ಸ್ವರ್ಣಕ್ಕೆ ಕೊರಳೊಡ್ಡಿತು.
ಅನುಷ್ಕಾಗೆ ಚಿನ್ನ ಡಬಲ್:
ಕರ್ನಾಟಕದ ಉದಯೋನ್ಮುಖ ಶೂಟರ್ ಅನುಷ್ಕಾ ಎಚ್.ಟಿ. ಅವರು ಜೂನಿಯರ್ ಮಹಿಳೆಯರ 50 ಮೀ. ರೈಫಲ್ 3 ಪೊಸಿಷನ್ಸ್ ವೈಯಕ್ತಿಕ ಸ್ಪರ್ಧೆಯಲ್ಲಿ ಸ್ವರ್ಣಕ್ಕೆ ಕೊರಳೊಡ್ಡಿದರು. ತಂಡ ವಿಭಾಗದಲ್ಲಿ ಪ್ರಾಚಿ ಗಾಯಕವಾಡ್ ಹಾಗೂ ಮಹಿತ್ ಸಂಧು ಜೊತೆಗೆ ಚಿನ್ನದ ಪದಕವನ್ನು ಡಬಲ್ ಮಾಡಿಕೊಂಡರು. 18 ವರ್ಷ ವಯಸ್ಸಿನ ಅನುಷ್ಕಾ ವೈಯಕ್ತಿಕ ವಿಭಾಗದ ಫೈನಲ್‌ನಲ್ಲಿ ಅಮೋಘ 460.7 ಪಾಯಿಂಟ್ಸ್ ಗಳಿಸಿದರು. ಕೊರಿಯಾದ ಶೂಟರ್‌ಗಳಾದ ಒ ಸೆಹೀ (455.7) ಹಾಗೂ ಸಿಮ್ ಯಿಯೊಜಿನ್ (443.9) ಕ್ರಮವಾಗಿ ಬೆಳ್ಳಿ ಹಾಗೂ ಕಂಚಿನ ಪದಕ ಜಯಿಸಿದರು. ಮಹಿತ್ 5ನೇ ಸ್ಥಾನ ಹಾಗೂ ಪ್ರಾಚಿ 6ನೇ ಸ್ಥಾನ ಪಡೆದರು. ತಂಡ ವಿಭಾಗದ ಪ್ರಶಸ್ತಿ ಸುತ್ತಿನಲ್ಲಿ ಈ ಮೂವರು ಒಟ್ಟು 1758 ಅಂಕಗಳೊಂದಿಗೆ ಚಾಂಪಿಯನ್ ಆದರು. ಕೊರಿಯಾ (1740) ಬೆಳ್ಳಿ ಗೆದ್ದರೆ ಆತಿಥೇಯ ಕಜಾಕಸ್ತಾನ (1706) ಕಂಚಿಗೆ ತೃಪ್ತಿಪಟ್ಟಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.