ಶೈಮ್ಕೆಂಟ್: ಭಾರತದ ಪುರುಷರ ಸೀನಿಯರ್ ತಂಡವು ಇಲ್ಲಿ ಸೋಮವಾರ ಆರಂಭವಾದ ಏಷ್ಯನ್ ಶೂಟಿಂಗ್ ಚಾಂಪಿಯನ್‌ಷಿಪ್‌ನ (ರೈಫಲ್/ಪಿಸ್ತೂಲ್/ಶಾಟ್‌ಗನ್) 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಬೆಳ್ಳಿಪದಕ ಗೆದ್ದುಕೊಂಡಿತು. ಆದರೆ, ಅನ್ಮೋಲ್ ಜೈನ್ ಅವರು ವೈಯಕ್ತಿಕ ಸ್ಪರ್ಧೆಯಲ್ಲಿ ನಿರಾಸೆ ಮೂಡಿಸಿದರು.
ಅನ್ಮೋಲ್ (580), ಆದಿತ್ಯ ಮಲ್ರಾ (579) ಮತ್ತು ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತ ಸೌರಭ್ ಚೌಧರಿ (576) ಅವರನ್ನು ಒಳಗೊಂಡ ಪುರುಷರ ತಂಡವು ಒಟ್ಟು 1,735 ಅಂಕಗಳನ್ನು ಗಳಿಸಿತು. ಚೀನಾ ತಂಡವು 1,744 ಅಂಕಗಳೊಂದಿಗೆ ಚಿನ್ನ ಗೆದ್ದಿತು. ಇರಾನ್ (1733) ಕಂಚಿನ ಪದಕ ತಮ್ಮದಾಗಿಸಿಕೊಂಡಿತು.
10 ಮೀ. ಏರ್ ಪಿಸ್ತೂಲ್ ವೈಯಕ್ತಿಕ ವಿಭಾಗದ ಅರ್ಹತಾ ಸುತ್ತಿನಲ್ಲಿ ಅನ್ಮೋಲ್ 580 ಅಂಕಗಳೊಂದಿಗೆ ಏಳನೇ ಸ್ಥಾನದೊಂದಿಗೆ ಫೈನಲ್ ತಲುಪಿದ್ದರು. ಪದಕ ಸುತ್ತಿನಲ್ಲಿ ಒಟ್ಟು 155.1 ಪಾಯಿಂಟ್ಸ್ ಗಳಿಸಿ ಆರನೇ ಸ್ಥಾನ ಪಡೆದರು.
ಚೀನಾದ ಹು ಕೈ (241.6) ಚಾಂಪಿಯನ್ ಆಗಿ ಹೊರಹೊಮ್ಮಿದರು. ದಕ್ಷಿಣ ಕೊರಿಯಾದ ಹಾಂಗ್ ಸುಹಿಯೋನ್ (239.0) ಮತ್ತು ಇರಾನ್‌ನ ಅಮೀರ್ ಜೊಹರಿಖೌ (216.8) ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕವನ್ನು ಗಳಿಸಿದರು. ಭಾರತದ ಇನ್ನಿಬ್ಬರು ಶೂಟರ್‌ಗಳಾದ ಆದಿತ್ಯ (579) ಮತ್ತು ಸೌರಭ್ (576) ಅರ್ಹತಾ ಸುತ್ತಿನಲ್ಲಿ ಕ್ರಮವಾಗಿ 13ನೇ ಮತ್ತು 21ನೇ ಸ್ಥಾನ ಪಡೆದರು.
ಕುತೂಹಲದ ಸಂಗತಿಯೆಂದರೆ 2023ರಲ್ಲಿ ಜೂನಿಯರ್ ಆಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸಲು ಪ್ರಾರಂಭಿಸಿದ್ದ 20 ವರ್ಷದ ಅಮಿತ್ ಶರ್ಮಾ ಅರ್ಹತಾ ಸುತ್ತಿನಲ್ಲಿ 48 ಮಂದಿಯನ್ನು ಹಿಂದಿಕ್ಕಿ 588 ಅಂಕಗಳೊಂದಿಗೆ ಅಗ್ರಸ್ಥಾನ ಪಡೆದರು. ಆದರೆ, ಅವರು ‘ರ‍್ಯಾಂಕಿಂಗ್ ಪಾಯಿಂಟ್ಸ್ ಓನ್ಲಿ’ (ಆರ್‌ಪಿಒ) ವಿಭಾಗದಲ್ಲಿ ಸ್ಪರ್ಧಿಸಿದ್ದ ಕಾರಣ ಅವರಿಗೆ ಫೈನಲ್‌ಗೆ ತಲುಪಲು ಸಾಧ್ಯವಾಗಲಿಲ್ಲ. ಆರ್‌ಪಿಒ ಶೂಟರ್‌ಗಳು ರ‍್ಯಾಂಕಿಂಗ್‌ಗಾಗಿ ಸ್ಪರ್ಧಿಸುತ್ತಾರೆ, ಅವರಿಗೆ ಪದಕ ಸುತ್ತಿಗೆ ಮುನ್ನಡೆಯಲು ಅವಕಾಶವಿಲ್ಲ. ಭಾರತದ ಮತ್ತೊಬ್ಬ ಆರ್‌ಪಿಒ ಶೂಟರ್ ವರುಣ್ ತೋಮರ್ (584 ಅಂಕ) ಅರ್ಹತಾ ಸುತ್ತನ್ನು ನಾಲ್ಕನೇ ಸ್ಥಾನದೊಂದಿಗೆ ಮುಗಿಸಿದರು.
ಜೂನಿಯರ್ ವಿಭಾಗದಲ್ಲಿ ಮೂರು ಪದಕ:
ಜೂನಿಯರ್ ಪುರುಷರ 10 ಮೀಟರ್ ವೈಯಕ್ತಿಕ ಏರ್ ಪಿಸ್ತೂಲ್‌ನಲ್ಲಿ ಹರಿಯಾಣದ ಕಪಿಲ್ ಬೈಂಸಲಾ 243.0 ಅಂಕಗಳೊಂದಿಗೆ ಚಿನ್ನ ಗೆದ್ದರು. ಅವರು ಅರ್ಹತಾ ಸುತ್ತಿನಲ್ಲಿ 579 ಅಂಕ ಗಳಿಸಿ ನಾಲ್ಕನೇ ಸ್ಥಾನ ಪಡೆದಿದ್ದರು. ಭಾರತದ ಮತ್ತೊಬ್ಬ ಶೂಟರ್ ಗೆವಿನ್ ಆ್ಯಂಟನಿ (220.7) ಕಂಚಿನ ಪದಕ ಗೆದ್ದರು.
ಆ್ಯಂಟನಿ (582), ಕಪಿಲ್ ಮತ್ತು ವಿಜಯ್ ತೋಮರ್ (562) ಅವರ ತಂಡವು ಒಟ್ಟು 1,723 ಅಂಕ ಸಂಪಾದಿಸಿ ಬೆಳ್ಳಿ ಪದಕವನ್ನು ಗೆದ್ದುಕೊಂಡಿತು. ದಕ್ಷಿಣ ಕೊರಿಯಾ (1,734) ಚಾಂಪಿಯನ್ ಆಯಿತು.
ಸೀನಿಯರ್, ಜೂನಿಯರ್ ಮತ್ತು ಯೂತ್ ವಿಭಾಗಗಳಲ್ಲಿ ಭಾರತವು ಒಟ್ಟು 182 ಶೂಟರ್‌ಗಳನ್ನು ಕಣಕ್ಕಿಳಿಸಿದೆ. ಚಾಂಗ್‌ವಾನ್‌ನಲ್ಲಿ ನಡೆದ ಹಿಂದಿನ ಆವೃತ್ತಿಯಲ್ಲಿ ಭಾರತ 59 ಪದಕ (21 ಚಿನ್ನ, 22 ಬೆಳ್ಳಿ ಮತ್ತು 16 ಕಂಚು) ಗೆದ್ದುಕೊಂಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.