ಚೆನ್ನೈ: ಕರ್ನಾಟಕದ ರಮೇಶ್ ಬೂದಿಹಾಳ ಅವರು ಇಲ್ಲಿ ನಡೆಯುತ್ತಿರುವ ಏಷ್ಯನ್ ಸರ್ಫಿಂಗ್ ಚಾಂಪಿಯನ್‌ಷಿಪ್‌ನ ಪುರುಷರ ವಿಭಾಗದಲ್ಲಿ ಫೈನಲ್ ಪ್ರವೇಶಿಸಿದರು. ಈ ಸಾಧನೆ ಮಾಡಿದ ಭಾರತದ ಮೊದಲ ಸರ್ಫರ್ ಎಂಬ ಹೆಗ್ಗಳಿಕೆಗೂ ಅವರು ಪಾತ್ರವಾದರು.
25 ವರ್ಷದ ರಮೇಶ್ ತಮ್ಮ ಕ್ವಾರ್ಟರ್ ಫೈನಲ್ ಹೀಟ್ ರೇಸ್‌ನಲ್ಲಿ 14.84 ಅಂಕಗಳೊಂದಿಗೆ ಫಿಲಿಪೀನ್ಸ್‌ನ ತಾರೆ ನೀಲ್ ಸ್ಯಾಂಚೆಸ್ (12.80 ಅಂಕ) ಅವರನ್ನು ಹಿಂದಿಕ್ಕಿ ಅಗ್ರಸ್ಥಾನದೊಂದಿಗೆ ದಿನದ ಸ್ಪರ್ಧೆ ಪ್ರಾರಂಭಿಸಿದರು.
ಸೆಮಿಫೈನಲ್‌ನಲ್ಲಿ ರಮೇಶ್ 11.43 ಅಂಕ ಗಳಿಸಿ ಎರಡನೇ ಸ್ಥಾನದೊಂದಿಗೆ ಫೈನಲ್ ಸ್ಥಾನ ಖಚಿತಪಡಿಸಿಕೊಂಡರು. ಇಂಡೊನೇಷ್ಯಾದ ಪಜರ್ ಅರಿಯಾನಾ (13.83) ಅಗ್ರಸ್ಥಾನ ಪಡೆದರು.
ಭಾರತದ ಮತ್ತೊಬ್ಬ ಸ್ಪರ್ಧಿ ಕಿಶೋರ್ ಕುಮಾರ್ (8.03) ಕೂಡ ಸೆಮಿಫೈನಲ್ ಪ್ರವೇಶಿಸಿದ್ದರು. ಅವರು ನಾಲ್ಕನೇ ಸ್ಥಾನದೊಂದಿಗೆ ಅಭಿಯಾನ ಮುಗಿಸಿದರು. ಚೀನಾದ ಶಿಡಾಂಗ್ ವು (9.10) ಮೂರನೇ ಸ್ಥಾನ ಪಡೆದರು. ಇದಕ್ಕೂ ಮೊದಲು ಕಿಶೋರ್ (10.50) ಕ್ವಾರ್ಟರ್ ಫೈನಲ್ ಹೀಟ್‌ನಲ್ಲಿ ಎರಡನೇ ಸ್ಥಾನ ಗಳಿಸಿದ್ದರು.
ಭಾರತದ ಇನ್ನೊಬ್ಬ ಸರ್ಫರ್ ಡಿ. ಶ್ರೀಕಾಂತ್ (10.90) ಕ್ವಾರ್ಟರ್ ಫೈನಲ್‌ನಲ್ಲಿ ಉತ್ತಮ ಪ್ರದರ್ಶನ ತೋರಿದರೂ ಕೂದಲೆಳೆಯ ಅಂತರದಲ್ಲಿ ಸೆಮಿಫೈನಲ್ ಅವಕಾಶದಿಂದ ವಂಚಿತರಾದರು.
18 ವರ್ಷದೊಳಗಿನ ಬಾಲಕರ ಕ್ವಾರ್ಟರ್ ಫೈನಲ್‌ನಲ್ಲಿ ಹರೀಶ್ ಪಿ. ಮತ್ತು ಆದ್ಯ ಸಿಂಗ್ ಅವರ ಸೋಲಿನೊಂದಿಗೆ ಭಾರತದ ಅಭಿಯಾನ ಕೊನೆಗೊಂಡಿತು. ಬಾಲಕಿಯರ ವಿಭಾಗದಲ್ಲಿ ಧಮಯಂತಿ ಶ್ರೀರಾಮ್ ಕೂಡ ಎಂಟರ ಘಟ್ಟದಲ್ಲಿ ಹೊರಬಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.