ADVERTISEMENT

ಏಷ್ಯನ್ ಈಜು ಚಾಂಪಿಯನ್‌ಷಿಪ್‌: ಐದನೇ ಪದಕ ಗೆದ್ದ ಶ್ರೀಹರಿ ನಟರಾಜ್‌

ಪಿಟಿಐ
Published 30 ಸೆಪ್ಟೆಂಬರ್ 2025, 15:44 IST
Last Updated 30 ಸೆಪ್ಟೆಂಬರ್ 2025, 15:44 IST
ಶ್ರೀಹರಿ ನಟರಾಜ್‌
ಶ್ರೀಹರಿ ನಟರಾಜ್‌   

ಅಹಮದಾಬಾದ್: ಉತ್ತಮ ಪ್ರದರ್ಶನ ನೀಡುತ್ತಿರುವ ಭಾರತದ ಈಜುತಾರೆ ಶ್ರೀಹರಿ ನಟರಾಜ್‌ ಅವರು 11ನೇ ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ಮಂಗಳವಾರ 100 ಮೀ. ಫ್ರೀಸ್ಟೈಲ್‌ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದುಕೊಂಡರು. ಇದು ಅವರಿಗೆ ಈ ಕೂಟದಲ್ಲಿ ಐದನೇ ಪದಕ. 

ಪುರುಷರ 50 ಮೀ. ಬಟರ್‌ಫ್ಲೈನಲ್ಲಿ ರೋಹಿತ್ ಬಿ.ಬೆನೆಡಿಕ್ಟನ್ ಅವರು ಬೆಳ್ಳಿ ಗೆದ್ದುಕೊಂಡರು. ಇದರೊಂದಿಗೆ ಭಾರತ ಈ ಕೂಟದಲ್ಲಿ 9 ಪದಕಗಳನ್ನು ಗೆದ್ದಂತಾಗಿದೆ.

ಐದನೇ ಲೇನ್‌ನಲ್ಲಿದ್ದ ಶ್ರೀಹರಿ, ಜಾಣ್ಮೆಯಿಂದ ವೇಗ ಹೆಚ್ಚಿಸಿದರು. 50 ಮೀ. ಕಳೆಯುವಷ್ಟರಲ್ಲಿ ಅವರು ಮೂರನೇ ಸ್ಥಾನದಲ್ಲಿದ್ದರು. ಕೊನೆಯ 50 ಮೀ. ನಲ್ಲೂ ಅವರು ಅದೇ ಲಯವನ್ನು  ಉಳಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಚೀನಾದ ವಾಂಗ್‌ ಹಾವೊಯು (49.19 ಸೆ.) ಮತ್ತು ಕತಾರ್‌ನ ಅಲಿ ತಮೆರ್‌ ಹಸನ್‌ (49.46 ಸೆ.) ಕ್ರಮವಾಗಿ ಚಿನ್ನ ಮತ್ತು ಬೆಳ್ಳಿ ಗೆದ್ದರು. ಶ್ರೀಹರಿ 49.96 ಸೆ.ಗಳಲ್ಲಿ ಸ್ಪರ್ಧೆ ಪೂರೈಸಿದರು. ಅವರು ಸ್ವದೇಶದ ಆಕಾಶ್‌ ಮಣಿ (50.45 ಸೆ.) ಪೈಪೋಟಿ ಮೀರಿ ನಿಂತರು. ಆಕಾಶ್‌ ನಾಲ್ಕನೇ ಸ್ಥಾನ ಪಡೆದರು.

ADVERTISEMENT

‘ಈ ಋತುವಿನಲ್ಲಿ ನನ್ನಿಂದ ಉತ್ತಮ ಪ್ರದರ್ಶನ ಮೂಡಿಬಂದಿದೆ. ತರಬೇತಿಯೂ ಚೆನ್ನಾಗಿ ನಡೆದಿದೆ. ಹೀಟ್ಸ್‌ನಲ್ಲಿ ನಾನೇ ವೇಗವಾಗಿ ಈಜಿದ್ದೆ. ಆದರೆ ಪದಕ ಗೆದ್ದ ಇತರ ಇಬ್ಬರೂ ಅಮೋಘವಾಗಿ ಈಜಿದರು. ಪೋಡಿಯಂ ಏರಲು ಸಾಧ್ಯವಾಗಿದ್ದರಿಂದ ಸಂತಸವಾಗಿದೆ’ ಎಂದು 24 ವರ್ಷ ವಯಸ್ಸಿನ ಶ್ರೀಹರಿ ಫೈನಲ್ ನಂತರ ಪ್ರತಿಕ್ರಿಯಿಸಿದರು.

50 ಮೀ. ಬಟರ್‌ಫ್ಲೈನಲ್ಲಿ ರೋಹಿತ್ ಉತ್ತಮ ಆರಂಭ ಪಡೆದು, 23.89 ಸೆ.ಗಳಲ್ಲಿ ಗುರಿ ತಲುಪಿ ಎರಡನೇ ಸ್ಥಾನ ಪಡೆದರು. ಅವರಿಂದ ತೀವ್ರ ಪೈಪೋಟಿ ಎದುರಿಸಿದರೂ ಕಜಾಕಸ್ತಾನದ ಅದಿಲ್ಬೆಕ್‌ ಮುಸ್ಸಿನ್ 23.74 ಸೆ.ಗಳಲ್ಲಿ ಗುರಿತಲುಪಿ ಚಿನ್ನ ಗೆಲ್ಲುವಲ್ಲಿ ಯಶಸ್ವಿ ಆದರು.

ಕರ್ನಾಟಕದವರಾದ ಧಿನಿಧಿ ದೇಸಿಂಗು ಮತ್ತು ಎಸ್‌.ರುತುಜಾ ಅವರು ಮಹಿಳೆಯರ 100 ಮೀ. ಫ್ರೀಸ್ಟೈಲ್‌ನಲ್ಲಿ ಫೈನಲ್‌ಗೆ ತಲುಪಿದ್ದರು. ಆದರೆ ಪದಕ ಗೆಲ್ಲಲಾಗಲಿಲ್ಲ. ಅವರು ಕ್ರಮವಾಗಿ ಆರು ಮತ್ತು ಎಂಟನೇ ಸ್ಥಾನ ಗಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.