ADVERTISEMENT

ಪ್ರೊ ಕಬಡ್ಡಿ ಲೀಗ್: ಪುಣೇರಿ, ಪ್ಯಾಂಥರ್ಸ್‌ಗೆ ಜಯ

ಮಿಂಚಿದ ಅಸ್ಲಂ ಇನಾಮದಾರ್

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2024, 13:52 IST
Last Updated 8 ಫೆಬ್ರುವರಿ 2024, 13:52 IST
<div class="paragraphs"><p>ಪ್ರೊ ಕಬಡ್ಡಿ ಲೀಗ್‌ನಲ್ಲಿ ಪುಣೇರಿ ಪಲ್ಟನ್‌ ಮತ್ತು ಬೆಂಗಳೂರು ಬುಲ್ಸ್‌ ತಂಡಗಳ ನಡುವೆ ಹಣಾಹಣಿ</p></div>

ಪ್ರೊ ಕಬಡ್ಡಿ ಲೀಗ್‌ನಲ್ಲಿ ಪುಣೇರಿ ಪಲ್ಟನ್‌ ಮತ್ತು ಬೆಂಗಳೂರು ಬುಲ್ಸ್‌ ತಂಡಗಳ ನಡುವೆ ಹಣಾಹಣಿ

   

ನವದೆಹಲಿ: ಈಗಾಗಲೇ ಪ್ಲೇ ಆಫ್‌ಗೆ ಅರ್ಹತೆ ಪಡೆದಿರುವ ಪುಣೇರಿ ಪಲ್ಟನ್‌ ತಂಡವು ಯಶಸ್ಸಿನ ನಾಗಾಲೋಟವನ್ನು ಮುಂದುವರಿಸಿ 40–31 ರಿಂದ ಬೆಂಗಳೂರು ಬುಲ್ಸ್ ತಂಡವನ್ನು ಸೋಲಿಸಿತು. ತ್ಯಾಗರಾಜ ಒಳಾಂಗಣ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಪಲ್ಟನ್‌ ನಾಯಕ ಅಸ್ಲಂ ಇನಾಮದಾರ್ ಅವರ ಆಲ್‌ರೌಂಡ್ ಪ್ರದರ್ಶನ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತು.

ಕನ್ನಡಿಗ ಬಿ.ಸಿ.ರಮೇಶ್ ತರಬೇತಿಯಲ್ಲಿರುವ, ಕಳೆದ ಬಾರಿಯ ರನ್ನರ್ ಅಪ್‌ ಪುಣೇರಿ ತಂಡ ಮೊದಲ ಎರಡು ಸ್ಥಾನಗಳಲ್ಲಿ ಒಂದನ್ನು ಪಡೆಯುವ ಹುಮ್ಮಸ್ಸಿನಲ್ಲಿದೆ. ಅಸ್ಲಂ (11 ಪಾಯಿಂಟ್ಸ್‌) ಅವರಿಗೆ ರೈಡಿಂಗ್‌ನಲ್ಲಿ ಮೋಹಿತ್‌ ಗೋಯತ್‌ (7 ಅಂಕ) ಅವರಿಂದ ಉತ್ತಮ ಬೆಂಬಲ  ದೊರೆಯಿತು. ವಿರಾಮದ ವೇಳೆ ಸ್ಕೋರ್ 18-13 ಆಗಿತ್ತು. ಬೆಂಗಳೂರು ಪರ ರೈಡರ್ ಸುಶೀಲ್ 9 ಪಾಯಿಂಟ್ಸ್ ಗಳಿಸಿದರೆ, ಡಿಫೆನ್ಸ್‌ನಲ್ಲಿ ಪ್ರತೀಕ್ 6 ಪಾಯಿಂಟ್ಸ್ ಪಡೆದರು.

ADVERTISEMENT

18 ಪಂದ್ಯಗಳನ್ನಾಡಿರುವ ಪುಣೇರಿ ತಂಡ 13ನೇ ಗೆಲುವಿನೊಡನೆ (ಜೊತೆಗೆ 3 ಟೈ, 2 ಸೋಲು) ಒಟ್ಟಾರೆ 76 ಪಾಯಿಂಟ್ಸ್ ಸಂಗ್ರಹಿಸಿ ಎರಡನೇ ಸ್ಥಾನದಲ್ಲಿದೆ. ಬುಲ್ಸ್‌ 19 ಪಂದ್ಯಗಳಲ್ಲಿ ಹತ್ತನೇ ಸೋಲು ಕಂಡಿದ್ದು (ಜೊತೆಗೆ 7 ಗೆಲುವು, 2 ಟೈ) 48 ಪಾಯಿಂಟ್ಸ್ ಗಳಿಸಿ ಏಳನೇ ಸ್ಥಾನದಲ್ಲಿ ಮುಂದುವರಿದಿದೆ.

ಹಾಲಿ ಚಾಂಪಿಯನ್ ಜೈಪುರ ಪಿಂಕ್‌ ಪ್ಯಾಂಥರ್ಸ್ ಇನ್ನೊಂದು ಪಂದ್ಯದಲ್ಲಿ 27–22 ಪಾಯಿಂಟ್‌ಗಳಿಂದ ದಬಾಂಗ್ ಡೆಲ್ಲಿ ತಂಡವನ್ನು ಸೋಲಿಸಿ ಅಗ್ರಸ್ಥಾನದಲ್ಲಿ ಮುಂದುವರಿದಿದೆ.

ಜೈಪುರ ಪರ ಪ್ರಮುಖ ರೈಡರ್ ಅರ್ಜುನ್ ದೇಶ್ವಾಲ್ 10 ಪಾಯಿಂಟ್ಸ್ ಗಳಿಸಿದರೆ, ದೆಹಲಿಯ ಸ್ಟಾರ್ ರೈಡರ್ ಆಶು ಮಲಿಕ್ 9 ಪಾಯಿಂಟ್ಸ್ ಕಲೆಹಾಕಿ ಗಮನ ಸೆಳೆದರು. ಜೈಪುರದ ತಂಡ 19 ಪಂದ್ಯಗಳಿಂದ (13 ಗೆಲುವು, 3 ಟೈ, 3 ಸೋಲು) 77 ಪಾಯಿಂಟ್ಸ್ ಕಲೆಹಾಕಿದೆ. ದೆಹಲಿಯ ತಂಡ (20 ಪಂದ್ಯಗಳಿಂದ 69 ಪಾಯಿಂಟ್ಸ್‌) ಮೂರನೇ ಸ್ಥಾನದಲ್ಲಿ ಮುಂದುವರಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.