ADVERTISEMENT

ತಾಯಿ, ಪತ್ನಿಯ ಹತ್ಯೆ ಆರೋಪ: ಅಥ್ಲೀಟ್‌ ಇಕ್ಬಾಲ್‌ ಸಿಂಗ್‌ ಬಂಧನ

ಘಟನೆಗೆ ಆಘಾತ ವ್ಯಕ್ತಪಡಿಸಿದ ಅಥ್ಲೆಟಿಕ್ಸ್ ವಲಯ

ಪಿಟಿಐ
Published 26 ಆಗಸ್ಟ್ 2020, 14:37 IST
Last Updated 26 ಆಗಸ್ಟ್ 2020, 14:37 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಭಾರತದ ಶಾಟ್‌ಪಟ್‌ ಪಟು ಇಕ್ಬಾಲ್‌ ಸಿಂಗ್‌ ಅವರು ಅಮೆರಿಕದಲ್ಲಿ ತಮ್ಮ ತಾಯಿ ಹಾಗೂ ಪತ್ನಿಯನ್ನು ಕೊಲೆಗೈದ ಆರೋಪದಲ್ಲಿ ಬಂಧನಕ್ಕೊಳಗಾಗಿದ್ದಾರೆ. ಘಟನೆ ಕುರಿತು ಅಥ್ಲೆಟಿಕ್ಸ್ ವಲಯ ಆಘಾತ ವ್ಯಕ್ತಪಡಿಸಿದೆ.

62 ವರ್ಷದ ಇಕ್ಬಾಲ್‌ ಅವರು ಸೋಮವಾರ ಅಮೆರಿಕದ ಪೆನ್ಸಿಲ್ವೇನಿಯಾದ ತಮ್ಮ ನಿವಾಸದಲ್ಲಿ ತಾಯಿ ನಸೀಬ್‌ ಕೌರ್‌ ಹಾಗೂ ಪತ್ನಿ ಜಸ್ಪಾಲ್‌ ಕೌರ್‌ ಅವರ ಕೊಲೆ ಮಾಡಿದ್ದನ್ನು ಒಪ್ಪಿಕೊಂಡಿದ್ದರು. ಅಲ್ಲಿಯ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದರು.

‘ಹತ್ಯೆಯ ಬಳಿಕ ಸಿಂಗ್‌, ಪೊಲೀಸರಿಗೆ ಕರೆ ಮಾಡಿ ಮನೆಗೆ ಕರೆಸಿಕೊಂಡಿದ್ದರು. ಪೊಲೀಸರು ಅಲ್ಲಿ ತಲುಪಿದಾಗ, ತಾವಾಗಿಯೇ ಇರಿದುಕೊಂಡಿದ್ದಸಿಂಗ್‌‌ ಅವರ ಬಟ್ಟೆಗಳು ರಕ್ತಸಿಕ್ತವಾಗಿದ್ದವು. ಗಾಯಗಳಿಂದ ನರಳುತ್ತಿದ್ದರು. ಮನೆಯೊಳಗೆ ಅವರ ತಾಯಿ ಹಾಗೂ ಪತ್ನಿಯ ಶವಗಳು ಕತ್ತು ಸೀಳಿದ ಸ್ಥಿತಿಯಲ್ಲಿದ್ದವು‘ ಎಂದು ಮಾಧ್ಯಮಗಳು ವರದಿ ಮಾಡಿದ್ದವು. ಹತ್ಯೆಯ ಉದ್ದೇಶ ಸ್ಷಷ್ಟವಾಗಿಲ್ಲ.

ADVERTISEMENT

ಇಕ್ಬಾಲ್‌ ಅಮೆರಿಕದಲ್ಲಿ ಟ್ಯಾಕ್ಸಿಕ್ಯಾಬ್‌ ಚಾಲಕನಾಗಿ ಕೆಲಸ ಮಾಡುತ್ತಿದ್ದರೆಂದು ಅಮೆರಿಕ ಮಾಧ್ಯಮಗಳು ಹೇಳಿವೆ.

1983ರಲ್ಲಿ ಕುವೈಟ್‌ನಲ್ಲಿ ನಡೆದ ಏಷ್ಯನ್‌ ಚಾಂಪಿಯನ್‌ಷಿಪ್‌ನಲ್ಲಿ ಇಕ್ಬಾಲ್‌ ಕಂಚಿನ ಪದಕ ಗೆದ್ದುಕೊಂಡಿದ್ದರು.

ಘಟನೆ ಕುರಿತು ದಿಗ್ಭ್ರಮೆ ವ್ಯಕ್ತಪಡಿಸಿರುವ ಅವರ ಸಮಕಾಲೀನ ಅಥ್ಲೀಟ್‌ವೊಬ್ಬರು ‘1998ರ ಸೋಲ್‌ ಒಲಿಂಪಿಕ್ಸ್‌ಗೆ ತಮ್ಮನ್ನು ಆಯ್ಕೆ ಮಾಡದ್ದಕ್ಕೆ ಇಕ್ಬಾಲ್‌ ಸಿಂಗ್‌ ಹಾಗೂ ಇನ್ನೊಬ್ಬರು, ಭಾರತದ ಅಮೆಚೂರ್‌ ಅಥ್ಲೆಟಿಕ್ಸ್ ಫೆಡರೇಷನ್‌ಅನ್ನು ನ್ಯಾಯಾಲಯಕ್ಕೆಳೆಯುವ ಬೆದರಿಕೆಯನ್ನು ಹಾಕಿದ್ದರು‘ ಎಂದು ನೆನಪಿಸಿಕೊಂಡಿದ್ದಾರೆ.

‘1980ರ ದಶಕದಲ್ಲಿ ಇಕ್ಬಾಲ್‌ಸಿಂಗ್‌ ಖ್ಯಾತ ಅಥ್ಲೀಟ್‌ ಆಗಿದ್ದರು‘ ಎಂದೂ ಅವರು ಹೇಳಿದರು.

‘ಇಕ್ಬಾಲ್‌ ಸ್ಪರ್ಧಾತ್ಮಕ ಮನೋಭಾವ, ಉತ್ತಮ ವ್ಯಕ್ತಿತ್ವ ಹೊಂದಿದವರು. ಪ್ರಕರಣ ಈಗ ವಿಚಾರಣೆಯ ಹಂತದಲ್ಲಿದೆ. ಹೀಗಾಗಿ ನಾನು ಅದರ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ. ಆದರೆ ನನ್ನ ತಿಳುವಳಿಕೆಯಂತೆ ಆತ ಕೊಲೆ ಮಾಡುವಂತಹ ವ್ಯಕ್ತಿಯಲ್ಲ ಎಂದೆನಿಸುತ್ತದೆ‘ ಎಂದು ಹಿರಿಯ ಅಥ್ಲೀಟ್‌ ಬಲ್ವಿಂದರ್‌ ಸಿಂಗ್‌ ಧಲಿವಾಲ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.