ADVERTISEMENT

ಮಂಗಳೂರು: ಕ್ರೀಡಾಪಟುಗಳಿಗೆ ಆಯುಷ್‌ ಚಿಕಿತ್ಸಾ ಸ್ಪರ್ಶ

ಮಂಗಳೂರಿನಲ್ಲಿ ದೇಶದ 2ನೇ ರಾಷ್ಟ್ರೀಯ ಆಯುಷ್‌ ಕ್ರೀಡಾ ಔಷಧ ಕೇಂದ್ರ

ಮಹೇಶ ಕನ್ನೇಶ್ವರ
Published 7 ಏಪ್ರಿಲ್ 2022, 19:30 IST
Last Updated 7 ಏಪ್ರಿಲ್ 2022, 19:30 IST
ಡಾ. ಇಕ್ಬಾಲ್‌
ಡಾ. ಇಕ್ಬಾಲ್‌   

ಮಂಗಳೂರು: ರಾಷ್ಟ್ರೀಯ ಆಯುಷ್‌ ಅಭಿಯಾನ ಯೋಜನೆಯಡಿ ಮಂಗಳೂರಿನಲ್ಲಿ ಕ್ರೀಡಾಪಟುಗಳಿಗಾಗಿಯೇ ಪ್ರತ್ಯೇಕ ರಾಷ್ಟ್ರೀಯ ಆಯುಷ್‌ ಕ್ರೀಡಾ ಔಷಧ ಕೇಂದ್ರ (ಆಯುಷ್‌ ಸ್ಪೋರ್ಟ್ಸ್ ಮೆಡಿಸಿನ್‌ ಸೆಂಟರ್‌) ಶೀಘ್ರದಲ್ಲೇ ಆರಂಭವಾಗಲಿದೆ.

ಇದು ರಾಜ್ಯದ ಮೊದಲ ಮತ್ತು ದೇಶದ ಎರಡನೇ ಕೇಂದ್ರವಾಗಲಿದೆ. ಕೇರಳದ ತ್ರಿಶೂರ್‌ನಲ್ಲಿ ಈಗಾಗಲೇ ಇಂಥ ಕೇಂದ್ರವೊಂದು ಕಾರ್ಯಾರಂಭ ಮಾಡಿದೆ.

ರಾಷ್ಟ್ರೀಯ ಆಯುಷ್‌ ಕ್ರೀಡಾ ಔಷಧ ಕೇಂದ್ರ ಆರಂಭಕ್ಕೆ ಜಿಲ್ಲಾ ಆಯುಷ್‌ ಇಲಾಖೆ ಸಲ್ಲಿಸಿದ ಪ್ರಸ್ತಾವಕ್ಕೆ ಕೇಂದ್ರ ಆಯುಷ್‌ ಸಚಿವಾಲಯವು ಹಸಿರು ನಿಶಾನೆ ನೀಡಿದೆ. ಇದಕ್ಕಾಗಿ ₹2.50 ಕೋಟಿ ಅನುದಾನ ಬಿಡುಗಡೆ ಆದೇಶವೂ ಬಂದಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರದ ಸಹಭಾಗಿತ್ವದಲ್ಲಿ ಈ ಕೇಂದ್ರ ಕಾರ್ಯ ನಿರ್ವಹಿಸಲಿದೆ. ಇದು ಕ್ರೀಡಾಪಟುಗಳಿಗಾಗಿಯೇ ಇರುವ ಕೇಂದ್ರವಾಗಿದ್ದು, ಅವರ ದೈಹಿಕ ಕ್ಷಮತೆ (ಫಿಟ್‌ನೆಸ್) ಕಾಪಾಡುವುದು ಮತ್ತು ರೋಗನಿರೋಧಕ ಶಕ್ತಿ ಹೆಚ್ಚಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಲಿದೆ. ಕ್ರೀಡಾಪಟುಗಳ ಕಾರ್ಯಕ್ಷಮತೆ ಹಾಗೂ ಆತ್ಮವಿಶ್ವಾಸ ಹೆಚ್ಚಿಸಿ, ಉತ್ತಮ ಸಾಧನೆ ಮಾಡಲು ನೆರವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಕ್ರೀಡಾಪಟುಗಳ ಆರೋಗ್ಯ ರಕ್ಷಣೆಗೆ ಬೇಕಾದ ಮಾಹಿತಿ, ಮಾರ್ಗದರ್ಶನ, ಅನುಸರಿಸಬೇಕಾದ ದಿನಚರಿ ಸೇರಿದಂತೆ ವಿವಿಧ ಮಾಹಿತಿಗಳನ್ನು ತಜ್ಞ ವೈದ್ಯರು ನೀಡುವರು. ಆಹಾರ ಕ್ರಮ, ಅಭ್ಯಾಸ, ದೈಹಿಕ, ಮಾನಸಿಕ ಆರೋಗ್ಯ ಕಾಪಾಡುವುದು ಈ ಕೇಂದ್ರದ ಹೊಣೆ ಆಗಿದೆ. ಮಂಗಳೂರಿನ ಹ್ಯಾಟ್‌ಹಿಲ್‌ ಆಯುಷ್‌ ಕೇಂದ್ರ ಅಥವಾ ವೆನ್ಲಾಕ್‌ ಆಯುಷ್‌ ಆಸ್ಪತ್ರೆ ವಿಭಾಗದಲ್ಲಿ ಶೀಘ್ರವೇ ಕೇಂದ್ರ ಕಾರ್ಯಾರಂಭ ಮಾಡಲಿದೆ.

ಆಯುರ್ವೇದ, ಯುನಾನಿ, ಹೋಮಿಯೊಪಥಿ ವೈದ್ಯರು ಫಿಸಿಯೊಥೆರಪಿಸ್ಟ್ ಹಾಗೂ ಆಪ್ತ ಸಮಾಲೋಚಕರನ್ನು ನೇಮಕ ಮಾಡಿಕೊಳ್ಳಲು ಸರ್ಕಾರ ಸೂಚನೆ ನೀಡಿದೆ. ಆಯುರ್ವೇದ ಪದ್ಧತಿಯ ಡಯಟ್‌ ಜತೆಗೆ ಬೇರೆ ಬೇರೆ ಪದ್ಧತಿಯ ಔಷಧಗಳೂ ಲಭ್ಯವಾಗಲಿವೆ. ಕ್ರೀಡಾಪಟುಗಳು ಗಾಯಗೊಂಡರೆ, ಚಿಕಿತ್ಸಾ ಸೌಲಭ್ಯ ಈ ಕೇಂದ್ರದಲ್ಲಿ ಲಭ್ಯವಿರುತ್ತದೆ ಎಂದು ಜಿಲ್ಲಾ ಆಯುಷ್‌ ಅಧಿಕಾರಿ ಡಾ. ಇಕ್ಬಾಲ್‌ ಹೇಳಿದರು.

‘ಎಲ್ಲ ಥೆರಪಿ, ಚಿಕಿತ್ಸೆ ಲಭ್ಯ’

‘ಎರಡು ವರ್ಷಗಳಿಂದ ಪಟ್ಟ ಶ್ರಮಕ್ಕೆ ಫಲ ಸಿಕ್ಕಿದೆ. ಜಿಲ್ಲೆಯ ಸಂಸದ ಹಾಗೂ ಶಾಸಕರ ಪ್ರಯತ್ನದಿಂದ ಮಂಗಳೂರಿಗೆ ಈ ಕೇಂದ್ರ ಮಂಜೂರಾಗಿದೆ. ಬೇರೆ ರಾಜ್ಯಗಳ ಕ್ರೀಡಾಪಟುಗಳೂ ಇಲ್ಲಿ ಚಿಕಿತ್ಸೆ ಪಡೆಯಬಹುದು. ಕಟ್ಟಡ, ಸಿಬ್ಬಂದಿ ನೇಮಕಾತಿ, ಸಂಬಳ, ಸೇರಿದಂತೆ ಮೂಲಸೌಕರ್ಯಗಳಿಗೆ ಸರ್ಕಾರ ₹2.50 ಕೋಟಿ ಅನುದಾನ ನೀಡಿದೆ. ಇನ್ನೂ ಅನುದಾನ ಬಿಡುಗಡೆ ಆಗಲಿದೆ.

ಪಂಚಕರ್ಮ, ಯುನಾನಿ, ನ್ಯಾಚುರೋಪತಿ ವಿವಿಧ ಥೆರಪಿಗಳು ಈ ಕೇಂದ್ರದಲ್ಲಿ ಸಿಗಲಿವೆ. ಬೇರೆ ಬೇರೆ ಕ್ರೀಡಾಪಟುಗಳನ್ನು ಆಹ್ವಾನಿಸಿ ಅವರು ಯಾವ ಚಿಕಿತ್ಸಾ ಕ್ರಮಗಳನ್ನು ಇಷ್ಟ ಪಡುತ್ತಾರೆ ಎಂಬುದನ್ನು ನೋಡಿಕೊಂಡು, ಅಂತಹ ಕ್ರಮವನ್ನು ಅನುಸರಿಸುತ್ತೇವೆ ಎಂದು ಜಿಲ್ಲಾ ಅಯುಷ್‌ ಅಧಿಕಾರಿ ಡಾ. ಇಕ್ಬಾಲ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.