ADVERTISEMENT

ಮರಳಿ ಮಾನ್ಯತೆ: ಕೆಬಿಎ ಪ್ರಯತ್ನ

​ಪ್ರಜಾವಾಣಿ ವಾರ್ತೆ
Published 14 ಜುಲೈ 2022, 19:56 IST
Last Updated 14 ಜುಲೈ 2022, 19:56 IST

ಬೆಂಗಳೂರು: ಭಾರತ ಬ್ಯಾಡ್ಮಿಂಟನ್‌ ಸಂಸ್ಥೆಯ (ಬಿಎಐ) ಮಾನ್ಯತೆ ಕಳೆದುಕೊಂಡಿರುವ ಕರ್ನಾಟಕ ಬ್ಯಾಡ್ಮಿಂಟನ್‌ ಸಂಸ್ಥೆ (ಕೆಬಿಎ) ಮಾನ್ಯತೆ ಮರಳಿ ಪಡೆಯುವ ಪ್ರಯತ್ನ ಆರಂಭಿಸಿದೆ.

ನಿಯಮಗಳ ತಿದ್ದುಪಡಿಗೆ ನೀಡಿದ್ದ ಗಡುವು ಮೀರಿದ ಕಾರಣ ಬಿಎಐ, ರಾಜ್ಯ ಬ್ಯಾಡ್ಮಿಂಟನ್‌ ಸಂಸ್ಥೆಯ ಮಾನ್ಯತೆಯನ್ನು ಬುಧವಾರ ರದ್ದುಗೊಳಿಸಿತ್ತು.

‘ಮಾನ್ಯತೆ ರದ್ದುಪಡಿಸಿರುವುದು ಅಚ್ಚರಿ ಉಂಟುಮಾಡಿದೆ. ಈ ಬೆಳವಣಿಗೆ ಬಗ್ಗೆ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳಲು ಕಾರ್ಯಕಾರಿ ಸಮಿತಿಯ ತುರ್ತು ಸಭೆಯನ್ನು ಶುಕ್ರವಾರ ಕರೆಯಲಾಗಿದೆ. ಮಾನ್ಯತೆಯನ್ನು ಶೀಘ್ರದಲ್ಲೇ ಮರಳಿ ಪಡೆಯಲು ಎಲ್ಲ ಪ್ರಯತ್ನ ಮಾಡಲಾಗುವುದು’ ಎಂದು ಕೆಬಿಎ ಅಧ್ಯಕ್ಷ ಮನೋಜ್‌ಕುಮಾರ್‌ ಜಿ.ಎಚ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ರಾಜ್ಯದಲ್ಲಿ ಬ್ಯಾಡ್ಮಿಂಟನ್‌ ಕ್ರೀಡೆಯ ನಿರ್ವಹಣೆಯನ್ನು ಕೆಬಿಎ ಇಷ್ಟು ವರ್ಷ ಸುಗಮವಾಗಿ ನಡೆಸುತ್ತಾ ಬಂದಿದೆ. ಹೆಚ್ಚಿನ ಜಿಲ್ಲಾ ಸಂಸ್ಥೆಗಳು ನಮ್ಮ ಈಗಿನ ನಿಯಮಗಳ ಪರವಾಗಿವೆ. ಇಂತಹ ದೊಡ್ಡ ತೀರ್ಮಾನ ತೆಗೆದುಕೊಳ್ಳುವ ಮುನ್ನ ನೋಟಿಸ್‌ ಕಳುಹಿಸಿ ಸ್ಪಷ್ಟೀಕರಣ ಕೇಳಬೇಕಿತ್ತು. ಆದರೆ ಏಕಾಏಕಿ ಮಾನ್ಯತೆ ರದ್ದುಗೊಳಿಸಲಾಗಿದೆ’ ಎಂದರು.

ಜುಲೈ 4ರ ಗಡುವು: ಜಿಲ್ಲಾ ಸಂಸ್ಥೆಗಳಿಗೆ ಪ್ರಾತಿನಿಧ್ಯ ಕಲ್ಪಿಸುವುದರ ಕುರಿತು ಈಗ ಇರುವ ನಿಯಮ ಬದಲಿಸುವಂತೆ ಬಿಎಐ, ಮಾರ್ಚ್‌ 3 ರಂದು ಕೆಬಿಎಗೆ ಸೂಚಿಸಿತ್ತು. ನಾಲ್ಕು ತಿಂಗಳು ಗಡುವು ಕೂಡಾ ವಿಧಿಸಿತ್ತು.

‘ಕೆಲ ನಿಯಮಗಳಲ್ಲಿ ತಿದ್ದುಪಡಿಗೆ ಸೂಚಿಸಿ ನಾಲ್ಕು ತಿಂಗಳ ಗಡುವು ನೀಡಲಾಗಿತ್ತು. ಜುಲೈ 4ರ ಒಳಗಾಗಿ ನಿಯಮದಲ್ಲಿ ಬದಲಾವಣೆ ತರುವ ಬದಲು, ಕೆಬಿಎ ಹೆಸರಿನಲ್ಲಿ ಮತ್ತೊಂದು ಸಂಸ್ಥೆ ರಚಿಸುವುದಾಗಿ ನೀವು ಇ–ಮೇಲ್‌ನಲ್ಲಿ ತಿಳಿಸಿದ್ದೀರಿ. ಇದು ಬಿಎಐ ನಿಯಮಗಳಿಗೆ ವಿರುದ್ಧವಾಗಿರುವ ಕಾರಣ ಮಾನ್ಯತೆ ರದ್ದುಗೊಳಿಸಲಾಗಿದೆ. ನಿಯಮಗಳಲ್ಲಿ ತಿದ್ದುಪಡಿ ತಂದು ಮತ್ತೊಮ್ಮೆ ಅರ್ಜಿ ಸಲ್ಲಿಸಿದರೆ ಮಾನ್ಯತೆ ವಾಪಸ್‌ ನೀಡಲಾಗುವುದು’ ಎಂದು ಬಿಎಐ ಕಾರ್ಯದರ್ಶಿ ಸಂಜಯ್‌ ಮಿಶ್ರಾ, ಕೆಬಿಎ ಕಾರ್ಯದರ್ಶಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.