ADVERTISEMENT

ಏಷ್ಯನ್‌ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌: ಎಂಟರಘಟ್ಟಕ್ಕೆ ಪ್ರಣಯ್, ಸಿಂಧು

ಪಿಟಿಐ
Published 28 ಏಪ್ರಿಲ್ 2023, 7:10 IST
Last Updated 28 ಏಪ್ರಿಲ್ 2023, 7:10 IST
ಎಚ್‌.ಎಸ್‌.ಪ್ರಣಯ್
ಎಚ್‌.ಎಸ್‌.ಪ್ರಣಯ್   

ದುಬೈ: ಭಾರತದ ಎಚ್‌.ಎಸ್‌.ಪ್ರಣಯ್‌ ಮತ್ತು ಪಿ.ವಿ. ಸಿಂಧು ಅವರು ಏಷ್ಯನ್‌ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ನ ಸಿಂಗಲ್ಸ್‌ ವಿಭಾಗದ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದರು. ಆದರೆ ಕೆ.ಶ್ರೀಕಾಂತ್‌ ಹೋರಾಟಕ್ಕೆ ತೆರೆಬಿತ್ತು.

ಗುರುವಾರ ನಡೆದ ಪುರುಷರ ವಿಭಾಗದ ಪಂದ್ಯದಲ್ಲಿ 8ನೇ ಶ್ರೇಯಾಂಕದ ಪ್ರಣಯ್ 21–16, 5–21, 21–18 ರಲ್ಲಿ ಇಂಡೊನೇಷ್ಯಾದ ಚಿಕೊ ಔರಾ ದ್ವಿ ವರ್ದೊಯೊ ಅವರನ್ನು ಮಣಿಸಿದರು. ಈ ಪಂದ್ಯ 1 ಗಂಟೆ 2 ನಿಮಿಷ ನಡೆಯಿತು. ಅವರು ಮುಂದಿನ ಪಂದ್ಯದಲ್ಲಿ ಜಪಾನ್‌ನ ಕಾಂತಾ ಸುನೆಯೆಮ ವಿರುದ್ಧ ಪೈಪೋಟಿ ನಡೆಸುವರು.

ಮಹಿಳೆಯರ ವಿಭಾಗದ ಪಂದ್ಯದಲ್ಲಿ ಸಿಂಧು 21-12, 21-15 ರಲ್ಲಿ ಚೀನಾದ ಹಾನ್‌ ಯುಯೆ ವಿರುದ್ಧ ಗೆದ್ದರು. ಚುರುಕಿನ ಪ್ರದರ್ಶನ ನೀಡಿದ ಹೈದರಾಬಾದ್‌ನ ಆಟಗಾರ್ತಿ 33 ನಿಮಿಷಗಳಲ್ಲಿ ಜಯಿಸಿದರು.

ADVERTISEMENT

ಶ್ರೀಕಾಂತ್‌ 14-21, 22-20, 9-21 ರಲ್ಲಿ ನಾಲ್ಕನೇ ಶ್ರೇಯಾಂಕದ ಆಟಗಾರ ಜಪಾನ್‌ನ ಕೊದೈ ನರವೊಕ ಎದುರು ಪರಾಭವಗೊಂಡರು. 1 ಗಂಟೆ 12 ನಿಮಿಷ ಪಡೆದ ಪಂದ್ಯದಲ್ಲಿ ಭಾರತದ ಆಟಗಾರ ಎದುರಾಳಿಗೆ ತಕ್ಕ ಪೈಪೋಟಿ ನೀಡಿದರಾದರೂ, ಗೆಲುವು ದಕ್ಕಲಿಲ್ಲ.

ಪುರುಷರ ಡಬಲ್ಸ್‌ ವಿಭಾಗದ ಪ್ರೀ ಕ್ವಾರ್ಟರ್‌ ಫೈನಲ್‌ನಲ್ಲಿ ಸಾತ್ವಿಕ್‌ ಸಾಯಿರಾಜ್‌ ರಣಕಿ ರೆಡ್ಡಿ– ಚಿರಾಗ್‌ ಶೆಟ್ಟಿ ಜೋಡಿ 21–13, 21–11 ರಲ್ಲಿ ಕೊರಿಯದ ಜಿನ್‌ ಯಾಂಗ್‌– ಸುನ್‌ ಸಾಂಗ್‌ ವಿರುದ್ಧ ಜಯಿಸಿತು.

ಮಿಶ್ರ ಡಬಲ್ಸ್‌ನಲ್ಲಿ ರೋಹನ್‌ ಬೋಪಣ್ಣ ಮತ್ತು ಸಿಕ್ಕಿ ರೆಡ್ಡಿ ಜೋಡಿ ವಾಕ್‌ಓವರ್‌ ಪಡೆದು ಎಂಟರಘಟ್ಟ ಪ್ರವೇಶಿಸಿತು.

ಅಶ್ವಿನಿ ಪೊನ್ನಪ್ಪ ಮತ್ತು ಸುಮೀತ್‌ ಬಿ. ರೆಡ್ಡಿ ಜೋಡಿ 15–21, 17–21 ರಲ್ಲಿ ಚೀನಾ ತೈಪೆಯ ಚಾಂಗ್‌ ಕೊ ಚಿ– ಲೀ ಚೆನ್‌ ಎದುರು ಪರಾಭವಗೊಂಡಿತು.

ಮಹಿಳೆಯರ ಡಬಲ್ಸ್‌ನಲ್ಲಿ ಕಣದಲ್ಲಿದ್ದ ತ್ರಿಷಾ ಜೋಲಿ ಮತ್ತು ಗಾಯತ್ರಿ ಗೋಪಿಚಂದ್‌ ಜೋಡಿ ಎದುರಾಳಿಗೆ ‘ವಾಕ್‌ ಓವರ್‌’ ನೀಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.