ADVERTISEMENT

Paris Olympics | ಕ್ವಾರ್ಟರ್‌ ಫೈನಲ್‌ಗೆ ಲಕ್ಷ್ಯ ಸೇನ್‌

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2024, 16:21 IST
Last Updated 1 ಆಗಸ್ಟ್ 2024, 16:21 IST
<div class="paragraphs"><p>ಪುರುಷರ ಪ್ರಿ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಭಾರತದ ಲಕ್ಷ್ಯ ಸೇನ್‌</p></div>

ಪುರುಷರ ಪ್ರಿ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಭಾರತದ ಲಕ್ಷ್ಯ ಸೇನ್‌

   

ಪ್ಯಾರಿಸ್‌: ಭಾರತದ ಲಕ್ಷ್ಯ ಸೇನ್‌ ಗುರುವಾರ ಒಲಿಂಪಿಕ್ಸ್‌ನ ಪುರುಷರ ಸಿಂಗಲ್ಸ್‌ ಸ್ಪರ್ಧೆಯಲ್ಲಿ ಸ್ವದೇಶದ ಎಚ್‌.ಎಸ್‌. ಪ್ರಣಯ್‌ ಅವರನ್ನು ನೇರ ಗೇಮ್‌ಗಳಲ್ಲಿ ಮಣಿಸಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದರು. ಆದರೆ, ಡಬಲ್ಸ್‌ನಲ್ಲಿ ಪದಕದ ಭರವಸೆಯಾಗಿದ್ದ ಸಾತ್ವಿಕ್‌ ಸಾಯಿರಾಜ್‌ ರಣಕಿರೆಡ್ಡಿ ಮತ್ತು ಚಿರಾಗ್‌ ಶೆಟ್ಟಿ ನಿರಾಸೆ ಮೂಡಿಸಿದರು.

ಕಾಮನ್‌ವೆಲ್ತ್‌ ಗೇಮ್ಸ್‌ ಚಾಂಪಿಯನ್‌ ಸೇನ್‌ ಅವರು 21-12, 21-6 ರಿಂದ ವಿಶ್ವದ 13ನೇ ಕ್ರಮಾಂಕದ ಪ್ರಣಯ್‌ ಅವರನ್ನು ಸೋಲಿಸಿದರು. ನಿಖರ ಸರ್ವ್‌, ಅದ್ಭುತ ಫೋರ್‌ಹ್ಯಾಂಡ್‌ ಆಟದ ಮೂಲಕ ಸೇನ್‌ ಅವರು ಕೇವಲ 39 ನಿಮಿಷದಲ್ಲಿ ನಿರಾಯಾಸವಾಗಿ ಗೆಲುವನ್ನು ದಕ್ಕಿಸಿಕೊಂಡರು.

ADVERTISEMENT

22 ವರ್ಷ ವಯಸ್ಸಿನ ಸೇನ್‌ ಅವರು ಒಲಿಂಪಿಕ್ಸ್‌ನ ಪುರುಷರ ಸಿಂಗಲ್ಸ್‌ನಲ್ಲಿ ಎಂಟರ ಘಟ್ಟ ಪ್ರವೇಶಿಸಿದ ಭಾರತದ ಮೂರನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರವಾದರು. ಈ ಹಿಂದೆ ಪರುಪಳ್ಳಿ ಕಶ್ಯಪ್ ಮತ್ತು ಕಿದಂಬಿ ಶ್ರೀಕಾಂತ್ ಅವರು ಕ್ರಮವಾಗಿ ಲಂಡನ್‌ ಮತ್ತು ರಿಯೋ ಒಲಿಂಪಿಕ್ಸ್‌ನಲ್ಲಿ ಈ ಸಾಧನೆ ಮಾಡಿದ್ದರು.

ವಿಶ್ವ ರ‍್ಯಾಂಕಿಂಗ್‌ನಲ್ಲಿ 22ನೇ ಸ್ಥಾನದಲ್ಲಿರುವ ಸೇನ್‌ ಅವರು ಕ್ವಾರ್ಟರ್‌ ಫೈನಲ್‌ನಲ್ಲಿ 12ನೇ ಶ್ರೇಯಾಂಕದ ಚೌ ಟಿಯೆನ್ ಚೆನ್ (ಚೀನಾ ತೈಪೆ) ಅವರನ್ನು ಎದುರಿಸುವರು.

‘ಕಠಿಣ ಪಂದ್ಯವನ್ನು ಗೆದ್ದಾಗ ಆತ್ಮವಿಶ್ವಾಸ ವೃದ್ಧಿಯಾಗುತ್ತದೆ. ಅದು ಟೂರ್ನಿಯಲ್ಲಿ ಇನ್ನಷ್ಟು ತೊಡಗಲು ಪ್ರೇರಣೆಯಾಗುತ್ತದೆ. ಚೌ ವಿರುದ್ಧದ ಮುಂದಿನ ಪಂದ್ಯ ನನಗೆ ಸವಾಲಿನದು. ಶೇ 100ರಷ್ಟು ಪರಿಶ್ರಮ ಹಾಕಿ ಗೆಲ್ಲಲು ಪ್ರಯತ್ನಿಸುತ್ತೇನೆ’ ಎಂದು ಸೇನ್‌ ಪ್ರತಿಕ್ರಿಯಿಸಿದರು.

ಏಷ್ಯನ್‌ ಗೇಮ್ಸ್‌ನಲ್ಲಿ ಕಂಚಿನ ಪದಕ ಗೆದ್ದಿದ್ದ 31 ವರ್ಷ ವಯಸ್ಸಿನ ಪ್ರಣಯ್‌ ಅವರು ಈಚೆಗೆ ಚಿಕೂನ್‌ಗುನ್ಯಾಕ್ಕೆ ತುತ್ತಾಗಿದ್ದರು. ಅದರಿಂದ ಚೇತರಿಸಿಕೊಂಡು ತಮ್ಮ ಚೊಚ್ಚಲ ಒಲಿಂಪಿಕ್ಸ್‌ನಲ್ಲಿ ಕಣಕ್ಕೆ ಇಳಿದಿದ್ದರು. 

ಸ್ಟಾರ್‌ ಜೋಡಿಯ ಪದಕದ ಕನಸು ಭಗ್ನ

ಭಾರತದ ಸ್ಟಾರ್‌ ಜೋಡಿ ಸಾತ್ವಿಕ್‌ ಮತ್ತು ಚಿರಾಗ್‌ ಕಾರ್ಟರ್‌ ಫೈನಲ್‌ ಹಣಾಹಣಿಯಲ್ಲಿ ಮೂರು ಗೇಮ್‌ಗಳ ಹೋರಾಟದ ನಂತರ ಸೋತು ಹೊರಬಿದ್ದಿತು. ಈ ಮೂಲಕ ಚೊಚ್ಚಲ ಒಲಿಂಪಿಕ್ಸ್‌ ಸ್ಪರ್ಧೆಯಲ್ಲಿ ಪದಕ ಗೆಲ್ಲುವ ಅವರ ಕನಸು ಭಗ್ನಗೊಂಡಿತು.

ಮೂರನೇ ಶ್ರೇಯಾಂಕದ ಭಾರತದ ಆಟಗಾರರು ಗುರುವಾರ ನಡೆದ ಪಂದ್ಯದಲ್ಲಿ 21-13 14-21 16-21ರಿಂದ ಮಲೇಷ್ಯಾದ ಆರನ್ ಚಿಯಾ ಮತ್ತು ಸೊಹ್ ವೂಯಿ ಯಿಕ್ ಜೋಡಿಗೆ ಶರಣಾದರು. ಏಷ್ಯನ್‌ ಗೇಮ್ಸ್‌ನಲ್ಲಿ ಚಿನ್ನ ಗೆದ್ದು ಐತಿಹಾಸಿಕ ದಾಖಲೆ ನಿರ್ಮಿಸಿದ್ದ ಸಾತ್ವಿಕ್‌– ಚಿರಾಗ್‌ ಜೋಡಿಯು ಇಲ್ಲೂ ಗುಂಪು ಹಂತದಲ್ಲಿ ಅಮೋಘ ಪ್ರದರ್ಶನ ನೀಡಿ ಚಿನ್ನದ ಭರವಸೆ ಮೂಡಿಸಿದ್ದರು.

ಭಾರತದ ಆಟಗಾರರು ಇದೇ ಮಲೇಷ್ಯಾ ಜೋಡಿಯ ವಿರುದ್ಧ ಕೊನೆಯ ಮೂರು ಮುಖಾಮುಖಿಯಲ್ಲೂ ಜಯ ಸಾಧಿಸಿದ್ದರು. ಅದರೆ ಅದಕ್ಕಿಂತ ಮೊದಲು ಎಂಟು ಬಾರಿ ಸಾತ್ವಿಕ್‌– ಚಿರಾಗ್‌ ಪರಾಭವಗೊಂಡಿದ್ದರೂ ವಿಶ್ವದ ಅತಿದೊಡ್ಡ ವೇದಿಕೆ ಒಲಿಂಪಿಕ್ಸ್‌ನಲ್ಲಿ ಎದುರಾದ ಸೋಲು ಭಾರಿ ನಷ್ಟ ಉಂಟುಮಾಡಿತು. ವಿಶ್ವದ ಮಾಜಿ ಅಗ್ರಮಾನ್ಯ ಜೋಡಿಯು ಈ ಪಂದ್ಯದಲ್ಲಿ ಉತ್ತಮ ಆರಂಭ ಪಡೆದಿತ್ತು.

ಚುರುಕಿನ ಆಟ ಪ್ರದರ್ಶಿಸಿ ಮೊದಲ ಗೇಮ್‌ ಅನ್ನು ನಿರಾಯಾಸವಾಗಿ ಗೆದ್ದುಕೊಂಡಿತ್ತು. ಆದರೆ ನಂತರ ಎದುರಾಳಿಗಳ ನಿಖರ ಆಟದ ಮುಂದೆ ತಬ್ಬಿಬ್ಬಾಯಿತು. ನಿರ್ಣಾಯಕ ಗೇಮ್‌ನಲ್ಲಿ ಆರಂಭದಲ್ಲಿ ಸಮಬಲದ ಹೋರಾಟ ತೋರಿದರೂ ಕೊನೆಯಲ್ಲಿ ಮತ್ತೆ ಹಿಡಿತ ಕಳೆದುಕೊಂಡಿತು. ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಂಚು ಗೆದ್ದಿರುವ ಆರನ್ ಮತ್ತು ಸೊಹ್ ಜೋಡಿಯು ಸೆಮಿಫೈನಲ್‌ನಲ್ಲಿ ಈ ಆಟಗಾರರು ಅಗ್ರ ಶ್ರೇಯಾಂಕದ ಲಿಯಾಂಗ್ ವೀ ಕೆಂಗ್ ಮತ್ತು ವಾಂಗ್ (ಚೀನಾ) ಅವರನ್ನು ಎದುರಿಸಲಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.