ADVERTISEMENT

ಪ್ಯಾರಿಸ್ ಓಪನ್ ಬ್ಯಾಡ್ಮಿಂಟನ್ | ಶ್ರೀಕಾಂತ್, ಸಮೀರ್‌ಗೆ ಗೆಲುವು; ಹೊರಬಿದ್ದ ಸೇನ್

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2022, 16:45 IST
Last Updated 27 ಅಕ್ಟೋಬರ್ 2022, 16:45 IST
ಸಮೀರ್ ವರ್ಮಾ –ಸಂಗ್ರಹ ಚಿತ್ರ
ಸಮೀರ್ ವರ್ಮಾ –ಸಂಗ್ರಹ ಚಿತ್ರ   

ಪ್ಯಾರಿಸ್‌: ಭಾರತದ ಕೆ.ಶ್ರೀಕಾಂತ್‌ ಮತ್ತು ಸಮೀರ್‌ ವರ್ಮಾ ಅವರು ಇಲ್ಲಿ ನಡೆಯುತ್ತಿರುವ ಫ್ರೆಂಚ್‌ ಓಪನ್‌ ಸೂಪರ್‌ 750 ಬ್ಯಾಡ್ಮಿಂಟನ್‌ ಟೂರ್ನಿಯ ಎರಡನೇ ಸುತ್ತು ಪ್ರವೇಶಿಸಿದರು.

ಬುಧವಾರ ನಡೆದ ಪುರುಷರ ಸಿಂಗಲ್ಸ್‌ ವಿಭಾಗದ ಮೊದಲ ಸುತ್ತಿನ ಪಂದ್ಯದಲ್ಲಿ ಶ್ರೀಕಾಂತ್‌ 21-18, 21-18 ರಲ್ಲಿ ಭಾರತದವರೇ ಆದ ಲಕ್ಷ್ಯ ಸೇನ್‌ ಅವರನ್ನು ಮಣಿಸಿದರು. ಈ ಪಂದ್ಯ 46 ನಿಮಿಷಗಳಲ್ಲಿ ಕೊನೆಗೊಂಡಿತು.

ಶ್ರೀಕಾಂತ್ ಮತ್ತು ಸೇನ್‌ ನಡುವಿನ ಎರಡನೇ ಹಣಾಹಣಿ ಇದಾಗಿತ್ತು. 2021ರ ವಿಶ್ವ ಚಾಂಪಿಯನ್‌ಷಿಪ್‌ನ ಸೆಮಿಫೈನಲ್‌ನಲ್ಲಿ ಇವರಿಬ್ಬರು ಎದುರಾಗಿದ್ದಾಗ, ಶ್ರೀಕಾಂತ್‌ ಗೆದ್ದಿದ್ದರು. ಇದೀಗ ತಮ್ಮ ಗೆಲುವಿನ ದಾಖಲೆಯನ್ನು 2–0ಗೆ ಹೆಚ್ಚಿಸಿಕೊಂಡರು.

ADVERTISEMENT

ಸಮೀರ್‌ ವರ್ಮಾ ಅವರು ಆರನೇ ಶ್ರೇಯಾಂಕದ ಆಟಗಾರ ಇಂಡೊನೇಷ್ಯಾದ ಆಂಥೋನಿ ಸಿನಿಸುಕ ಗಿಂಟಿಂಗ್‌ಗೆ ಆಘಾತ ನೀಡಿದರು. ಒಂದು ಗಂಟೆ 17 ನಿಮಿಷ ನಡೆದ ರೋಚಕ ಹೋರಾಟದಲ್ಲಿ ಭಾರತದ ಆಟಗಾರ 21-15, 21-23, 22-20 ರಲ್ಲಿ ಗೆದ್ದರು.

ನಿರ್ಣಾಯಕ ಗೇಮ್‌ನಲ್ಲಿ ವರ್ಮಾ 18–20 ರಲ್ಲಿ ಹಿನ್ನಡೆಯಲ್ಲಿದ್ದರು. ಆದರೆ ಎದುರಾಳಿಗೆ ದೊರೆತ ಎರಡು ಮ್ಯಾಚ್‌ಪಾಯಿಂಟ್‌ ಅವಕಾಶಗಳನ್ನು ವಿಫಲಗೊಳಿಸಿದರಲ್ಲದೆ, ಸತತ ನಾಲ್ಕು ಪಾಯಿಂಟ್ಸ್‌ ಕಲೆಹಾಕಿ ಪಂದ್ಯ ತಮ್ಮದಾಗಿಸಿಕೊಂಡರು.

ಮಾರ್ಚ್‌ನಲ್ಲಿ ಸ್ವಿಸ್‌ ಓಪನ್‌ ಟೂರ್ನಿಯಲ್ಲಿ ವರ್ಮಾ ಅವರು ಗಿಂಟಿಂಗ್‌ ಕೈಯಲ್ಲಿ ಪರಾಭವಗೊಂಡಿದ್ದರು. ಆ ಸೋಲಿಗೆ ಮುಯ್ಯಿ ತೀರಿಸಲು ಯಶಸ್ವಿಯಾದರು.

ಎಚ್.ಎಸ್‌.ಪ್ರಣಯ್‌ 21-16, 16-21, 21-16 ರಲ್ಲಿ ಮಲೇಷ್ಯಾದ ಲೆವ್ ಡರೆನ್‌ ಎದುರು ಪ್ರಯಾಸದಿಂದ ಗೆದ್ದರು. ರ‍್ಯಾಂಕಿಂಗ್‌ನಲ್ಲಿ ತನಗಿಂತ ಕೆಳಗಿನ ಕ್ರಮಾಂಕದಲ್ಲಿರುವ ಆಟಗಾರನನ್ನು ಮಣಿಸಲು ಅವರು ಒಂದು ಗಂಟೆ 13 ನಿಮಿಷಗಳನ್ನು ತೆಗೆದುಕೊಂಡರು.

ಪುರುಷರ ಡಬಲ್ಸ್‌ನಲ್ಲಿ ಎಂ.ಆರ್‌.ಅರ್ಜುನ್‌– ಧ್ರುವ್‌ ಕಪಿಲಾ ಜೋಡಿ 15–21, 16–21 ರಲ್ಲಿ ಇಂಡೊನೇಷ್ಯಾದ ಫಜರ್‌ ಅಲ್‌ಫಿಯಾನ್– ಮುಹಮ್ಮದ್‌ ರಿಯಾನ್ ಅದ್ರಿಯಂತ್ ಎದುರು ಸೋತಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.