ನವದೆಹಲಿ: ಬ್ಯಾಡ್ಮಿಂಟನ್ ಕ್ರೀಡೆಯ ಜೀವನಾಡಿಯಾಗಿರುವ ಶಟಲ್ ತಯಾರಿಕೆಗೆ ಅಗತ್ಯವಿರುವ ಕಚ್ಚಾ ಸಾಮಗ್ರಿಗಳಿಗೆ ಚೀನಾದಲ್ಲಿ ತೀವ್ರ ಕೊರತೆ ಉಂಟಾಗಿದ್ದು, ಕಳೆದ ಒಂದು ವರ್ಷದಿಂದ ಇದರ ಬೆಲೆ ದುಬಾರಿಯಾಗಿದೆ. ಇದು ಆಟಗಾರರನ್ನು ಚಿಂತೆಗೀಡು ಮಾಡಿದೆ.
‘ಚೀನಾದಲ್ಲಿ ಬಾತು ಕೋಳಿಯ ಮಾಂಸದ ಬದಲು ಇತ್ತೀಚಿನ ದಿನಗಳಲ್ಲಿ ಹಂದಿ ಮಾಂಸ ಸೇವನೆ ಹೆಚ್ಚಾಗಿರುವುದರಿಂದ ಕುಕ್ಕುಟೋದ್ಯಮ ನೆಲಕಚ್ಚಿದೆ. ಇದರ ಪರಿಣಾಮ ಜಾಗತಿಕ ಮಟ್ಟದಲ್ಲಿ ಬ್ಯಾಡ್ಮಿಂಟನ್ ಕ್ರೀಡೆಯೂ ದುಬಾರಿಯಾಗಿದೆ’ ಎಂದು ಫ್ರೆಂಚ್ ಸುದ್ದಿಪತ್ರಿಕೆ ‘ಲಾ ಎಕ್ವಿಪ್’ ಇತ್ತೀಚೆಗೆ ವರದಿ ಮಾಡಿತ್ತು.
ಈ ಬೆಳವಣಿಗೆಯಿಂದಾಗಿ ಬಾತುಕೋಳಿ ಅಥವಾ ಹೆಬ್ಬಾತುಗಳ ಪುಕ್ಕಗಳನ್ನೇ ಅವಲಂಬಿಸುವ ಬದಲು ಪರ್ಯಾಯ ಚಿಂತನೆ ಅಗತ್ಯ ಎಂದು ಭಾರತದ ಮುಂಚೂಣಿಯ ಶೆಟಲ್ ತಯಾರಕರು ಅಭಿಪ್ರಾಯಪಟ್ಟಿದ್ದಾರೆ.
‘ಈಕ್ಷಣಕ್ಕಾಗಲೀ ಅಥವಾ ಭವಿಷ್ಯದಲ್ಲಾಗಲಿ ನೈಸರ್ಗಿಕ ಉತ್ಪನ್ನಗಳಿಂದ ತಯಾರಾಗುವ ಪುಕ್ಕಗಳ ಮೇಲಿನ ಅವಲಂಬನೆ ತಗ್ಗಬೇಕು. ಬ್ಯಾಡ್ಮಿಂಟನ್ ಕ್ರೀಡೆಯು ಅಗಾಧವಾಗಿ ಬೆಳೆದಿದೆ. ಚೀನಾ, ಇಂಡೊನೇಷ್ಯಾ ಹಾಗೂ ಭಾರತದಲ್ಲಿ ಜಗತ್ತಿನ ಒಟ್ಟು ಬಳಕೆಯ ಐದನೇ ಎರಡರಷ್ಟು ಶೆಟಲ್ ಬಳಕೆಯಾಗುತ್ತಿದೆ’ ಎಂದು ರಾಷ್ಟ್ರೀಯ ತಂಡದ ಮುಖ್ಯ ಕೋಚ್ ಪುಲ್ಲೇಲ ಗೋಪಿಚಂದ್ ಹೇಳಿದ್ದಾರೆ.
'ಇಲ್ಲಿ ಹಕ್ಕಿ ಸಾಕಾಣಿಕೆ ಕಡಿಮೆಯಾಗಿದೆ ಅಥವಾ ಬಾತುಗಳ ಮತ್ತು ಹೆಬ್ಬಾತುಗಳ ಗರಿಗಳು ಸಿಗುತ್ತಿಲ್ಲ ಎನ್ನುವುದು ಮುಖ್ಯವಲ್ಲ. ಆದರೆ ಬ್ಯಾಡ್ಮಿಂಟನ್ ಆಡುವವರ ಸಂಖ್ಯೆ ಹೆಚ್ಚಳವಾಗಿದೆ. ಅದಕ್ಕೆ ತಕ್ಕಂತೆ ಶೆಟಲ್‌ಗೆ ಬೇಡಿಕೆಯೂ ಹೆಚ್ಚಳವಾಗಿದೆ. ಪ್ರಯೋಗಾಲಯದಲ್ಲಿ ತಯಾರಾಗುವ ಪುಕ್ಕಗಳು ಅಥವಾ ಸಿಂಥೆಟಿಕ್ ಆಯ್ಕೆಗಳು ಇಲ್ಲದಿದ್ದಲ್ಲಿ ಸಮಸ್ಯೆ ಇನ್ನಷ್ಟು ಜಟಿಲವಾಗಲಿದೆ. ಬಹುಶಃ ಮುಂದಿನ ಐದು ವರ್ಷಗಳಲ್ಲಿ ಹೊಸ ಆವಿಷ್ಕಾರವಾಗುವ ವಿಶ್ವಾಸವಿದೆ’ ಎಂದಿದ್ದಾರೆ.
‘ಶೆಟಲ್ ಬೆಲೆಯಿಂದಾಗಿ ಬ್ಯಾಡ್ಮಿಂಟನ್ ಕ್ರೀಡೆ ದುಬಾರಿಯಾಗಿದೆ. ಇದನ್ನು ತಗ್ಗಿಸಿದಲ್ಲಿ ಈ ಕ್ರೀಡೆ ಇನ್ನಷ್ಟು ಬೆಳವಣಿಗೆ ಕಾಣಲಿದೆ’– ಪುಲ್ಲೇಲ ಗೋಪಿಚಂದ್, ರಾಷ್ಟ್ರೀಯ ತಂಡದ ಮುಖ್ಯ ಕೋಚ್
’ಶೆಟಲ್‌ಗಾಗಿ ಚೀನಾದವರಂತೆ ನಾವು ಬಾತುಕೋಳಿ ತಿನ್ನಬೇಕಾಗಿಲ್ಲ ಅಥವಾ ಬಾತುಕೋಳಿಯ ಪುಕ್ಕಗಳನ್ನು ಸಿದ್ಧಪಡಿಸಬೇಕಿಲ್ಲ. ಬದಲಿಗೆ ಐಐಟಿಯಂಥ ಶ್ರೇಷ್ಠ ಸಂಸ್ಥೆಗಳು ಇದಕ್ಕೆ ಪರ್ಯಾಯವನ್ನು ನೀಡಿದಲ್ಲಿ ಕ್ರೀಡೆ ಬೆಳೆಯಲಿದೆ. ಒಂದು ರಾಷ್ಟ್ರದ ಆಹಾರ ಕ್ರಮದ ಮೇಲೆ ಇಡೀ ಕ್ರೀಡೆ ಅವಲಂಬನೆ ಸರಿಯಲ್ಲ. ಹಿಂದೊಮ್ಮೆ ಹಕ್ಕಿ ಜ್ವರ ಈ ಕ್ರೀಡೆಯನ್ನು ಬಾಧಿಸಿತ್ತು. ಈಗ ಪುಕ್ಕಗಳ ಕೊರತೆ ಬಾಧಿಸುತ್ತಿದೆ. ಹೀಗಾಗಿ ಶೀಘ್ರದಲ್ಲಿ ಪರ್ಯಾಯ ಕಚ್ಚಾ ಸಾಮಗ್ರಿಯ ಅಭಿವೃದ್ಧಿಯಾಗಬೇಕಿದೆ’ ಎಂದು ಗೋಪಿಚಂದ್ ಹೇಳಿದ್ದಾರೆ.
ಹೈದರಾಬಾದ್‌ನಲ್ಲಿರುವ ಗೋಪಿಚಂದ್ ಅವರ ಅಕಾಡೆಮಿಯಲ್ಲಿ ಕೇವಲ ಎರಡು ವಾರಗಳಿಗೆ ಸಾಕಾಗುವಷ್ಟು ಶೆಟಲ್ ಮಾತ್ರ ಇದೆ ಎಂದು ವರದಿಯಾಗಿದೆ.
‘ರಾಷ್ಟ್ರೀಯ ಕ್ಯಾಂಪ್‌ನಲ್ಲಿ ಸದ್ಯಕ್ಕೆ ಶೆಟಲ್ ಲಭ್ಯ. ಆದರೆ ದೀರ್ಘ ಕಾಲದಲ್ಲಿ ಸಮಸ್ಯೆ ಎದುರಾಗಲಿದೆ. ಯೊನೆಕ್ಸ್ ಕಂಪನಿಯು ಆ. 20ರೊಳಗೆ ಶೆಟಲ್ ಪೂರೈಕೆ ಮಾಡುವುದಾಗಿ ಹೇಳಿದೆ. ಹೆಬ್ಬಾತು ಮತ್ತು ಬಾತುಕೋಳಿಗಳ ಪುಕ್ಕಗಳಿಂದ ತಯಾರಾಗುವ ಶೆಟಲ್‌ಗೆ ಜಾಗತಿಕ ಮಟ್ಟದಲ್ಲಿ ಬೇಡಿಕೆ ಇರುವುದರಿಂದ ಭವಿಷ್ಯದಲ್ಲಿ ಕೊರತೆ ಉಂಟಾಗಲಿದೆ. ಇದಕ್ಕೆ ಪರ್ಯಾಯವನ್ನು ನಾವು ಹುಡಿಕೊಳ್ಳಬೇಕಿದೆ’ ಎಂದು ಭಾರತೀಯ ಬ್ಯಾಡ್ಮಿಂಟನ್ ಒಕ್ಕೂಟದ ಕಾರ್ಯದರ್ಶಿ ಸಂಜಯ್ ಮಿಶ್ರಾ ಹೇಳಿದ್ದಾರೆ.
‘ವಿಶ್ವ ಬ್ಯಾಡ್ಮಿಂಟನ್ ಒಕ್ಕೂಟದ ಸಭೆಯಲ್ಲೂ ಈ ವಿಷಯ ಚರ್ಚೆಯಾಯಿತು. ಪ್ಲಾಸ್ಟಿಕ್ ಶೆಟಲ್ ಬಳಕೆ ಕುರಿತು ಪ್ರಯೋಗಗಳು ನಡೆಯುತ್ತಿವೆ. ಆದರೆ ಪುಕ್ಕಗಳಿಂದ ತಯಾರಾದ ಶೆಟಲ್‌ನಷ್ಟು ನಿಯಂತ್ರಣ ಹಾಗೂ ನಿಖರತೆ ಸಿಗುತ್ತಿಲ್ಲ’ ಎಂದಿದ್ದಾರೆ.
‘ಪುಕ್ಕಗಳ ಪೂರೈಕೆ ತಗ್ಗಿದೆ. ಇದರಿಂದ ಶೆಟಲ್‌ಗಳ ಬೆಲೆಯೂ ಏರಿಕೆಯಾಗಿದೆ. ಬೇಡಿಕೆಯೂ ಹೆಚ್ಚಳವಾಗಿರುವುದರಿಂದ ಬ್ಯಾಡ್ಮಿಂಟನ್ ಕ್ರೀಡೆಯೇ ದುಬಾರಿಯಾಗಲಿದೆ. ಈ ಬೆಲೆಯನ್ನು ಕೊಡಲಾಗದವರು ಕ್ರೀಡೆಯನ್ನೇ ಕೈಬಿಡಬೇಕಾಗುವ ಅನಿವಾರ್ಯತೆಯೂ ಸೃಷ್ಟಿಯಾದರೆ ಅನುಮಾನವಿಲ್ಲ’ ಎಂದು ಯೋನೆಕ್ಸ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಕರಣ್ ಆತಂಕ ವ್ಯಕ್ತಪಡಿಸಿದ್ದಾರೆ.
ಶ್ರೇಷ್ಠ ಗುಣಮಟ್ಟದ ಶೆಟಲ್ ಒಂದು ಟ್ಯೂಬ್‌ಗೆ 2023ರಲ್ಲಿ ₹1,200 ಇತ್ತು ಈಗ ಅದರ ಬೆಲೆ ₹3 ಸಾವಿರಕ್ಕೆ ಏರಿಕೆಯಾಗಿದೆ. ಇದಕ್ಕೆ ಶೇ 12ರಷ್ಟು ಜಿಎಸ್‌ಟಿ ಮತ್ತು ಆಮದು ಸುಂಕವೂ ಸೇರಿ ಇನ್ನಷ್ಟು ದುಬಾರಿಯಾಗಿದೆ. ಸರ್ಕಾರ ಮಧ್ಯಪ್ರವೇಶಿಸಬೇಕು ಎಂದು ಬ್ಯಾಡ್ಮಿಂಟನ್ ಆಟಗಾರರು ಕೋರಿದ್ದಾರೆ.
ಭಾರತದಲ್ಲೂ ಪುಕ್ಕಗಳ ಶೆಟಲ್ ತಯಾರಿಕೆ ಇದ್ದರೂ ಅದು ಅಲ್ಪ ಪ್ರಮಾಣದಲ್ಲಿದೆ. ಕೇರಳ ಮತ್ತು ಪಶ್ಚಿಮ ಬಂಗಾಳದಲ್ಲಿ ಶೆಟಲ್ ತಯಾರಾಗುತ್ತಿದೆ. ದೊಡ್ಡ ಪ್ರಮಾಣದಲ್ಲಿ ಶೆಟಲ್ ಉತ್ಪಾದಿಸಿ ರಫ್ತು ಮಾಡುವ ಚೀನಾ ಮೇಲೆಯೇ ಬಹುತೇಕ ರಾಷ್ಟ್ರಗಳು ಅವಲಂಬಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.