
ಮಂಗಳೂರು: ಅಗ್ರ ಶ್ರೇಯಾಂಕಿತೆಯನ್ನು ಕ್ವಾರ್ಟರ್ ಫೈನಲ್‌ನಲ್ಲಿ ಮಣಿಸಿ ಆತ್ಮವಿಶ್ವಾಸದಲ್ಲಿದ್ದ ಒಡಿಶಾದ ತನ್ವಿ ಪತ್ರಿ ಎದುರು ಅಮೋಘ ಆಟವಾಡಿದ ಲಖನೌದ ಮಾನಸಿ ಸಿಂಗ್ ಅವರಲ್ಲಿ ಮೊದಲ ಅಂತರರಾಷ್ಟ್ರೀಯ ಪ್ರಶಸ್ತಿಯ ಕನಸು ಚಿಗುರಿತು.
ನಗರದ ಉರ್ವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಚೀಫ್ ಮಿನಿಸ್ಟರ್ಸ್ ಮಂಗಳೂರು ಇಂಡಿಯಾ ಇಂಟರ್‌ನ್ಯಾಷನಲ್ ಬ್ಯಾಡ್ಮಿಂಟನ್ ಚಾಲೆಂಜ್ ಟೂರ್ನಿಯ ಮಹಿಳೆಯರ ಸಿಂಗಲ್ಸ್‌ನಲ್ಲಿ ಅವರು ಈ ವರ್ಷದ ವರ್ಷದ ಮೊದಲ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿರುವ ಅಸ್ಸಾಂನ ಅಸ್ಮಿತಾ ಚಾಲಿಹ ಎದುರು ಭಾನುವಾರ ಎದುರಿಸಲಿದ್ದಾರೆ.
ಶನಿವಾರ ನಡೆದ ಸೆಮಿಫೈನಲ್‌ನಲ್ಲಿ ಮಾನಸಿ 22–20, 21–9ರಲ್ಲಿ ತನ್ವಿ ಪತ್ರಿ ವಿರುದ್ಧ ಗೆದ್ದರೆ, ಅಸ್ಮಿತಾ, 21–12, 21–15ರಿಂದ ಆಂಧ್ರಪ್ರದೇಶದ ವಿಜಯವಾಡದ ಸೂರ್ಯ ಚರಿಸ್ಮಾ ತಾಮಿರಿ ವಿರುದ್ಧ ಗೆಲುವು ದಾಖಲಿಸಿದರು.
ಪುರುಷರ ವಿಭಾಗದಲ್ಲಿ ತಮಿಳುನಾಡಿನ ಋತ್ವಿಕ್ ಸತೀಶ್ ಕುಮಾರ್ ಮತ್ತು ಛತ್ತೀಸಘಡದ 18ರ ಹರೆಯದ ರೌನಕ್ ಚೌಹಾನ್ ಪ್ರಶಸ್ತಿಗಾಗಿ ಮುಖಾಮುಖಿಯಾಗಲಿದ್ದಾರೆ. ಅಗ್ರ ಶ್ರೇಯಾಂಕದ ಸತೀಶ್ 21–12, 21–17ರಲ್ಲಿ ತೆಲಂಗಾಣದ ರೋಹನ್ ಆನಂದರಾಜ್ ಎದುರು ಮತ್ತು ರೌನಕ್ ಮಹಾರಾಷ್ಟ್ರದ ಥಾಣೆಯ ಪ್ರಣಯ್ ಶೆಟ್ಟಿಗಾರ್ ಎದುರು 21–17, 21–16ರಲ್ಲಿ ಗೆದ್ದರು. ಸತೀಶ್ ಈ ವರ್ಷದ ಮೊದಲ ಪ್ರಶಸ್ತಿಯ ನಿರೀಕ್ಷೆಯಲ್ಲಿದ್ದಾರೆ. ರೌನಕ್ ಸೀನಿಯರ್ ವಿಭಾಗದ ಮೊದಲ ಪ್ರಶಸ್ತಿಯ ವಿಶ್ವಾಸದಲ್ಲಿದ್ದಾರೆ.
ನಾಲ್ಕರ ಘಟ್ಟದ ಪಂದ್ಯದಲ್ಲಿ ತನ್ವಿ ವಿರುದ್ಧ ಮೂರನೇ ಶ್ರೇಯಾಂಕದ ಮಾನಸಿ ಆರಂಭದಿಂದಲೇ ಪಾರಮ್ಯ ಸಾಧಿಸಿದರು. ತನ್ವಿ ಮೊದಲ ಗೇಮ್‌ನ ಕೊನೆಯಲ್ಲಿ ಚೇತರಿಕೆಯ ಆಟವಾಡಿ ಭರವಸೆ ಮೂಡಿಸಿದರು. ಆದರೆ ಮಾನಸಿ ಪಟ್ಟು ಬಿಡಲಿಲ್ಲ. 17–20ರ ಹಿನ್ನಡೆಯಲ್ಲಿದ್ದ ಸಂದರ್ಭದಲ್ಲಿ ಸತತ 5 ಪಾಯಿಂಟ್ ಗಳಿಸಿ ಗೇಮ್ ತಮ್ಮದಾಗಿಸಿಕೊಂಡರು. ಎರಡನೇ ಗೇಮ್‌ನ ಆರಂಭದಲ್ಲಿ ಸಮಬಲದ ಹೋರಾಟ ಕಂಡುಬಂದರೂ ಮಾನಸಿ ನಿಧಾನಕ್ಕೆ ಆಧಿಪತ್ಯ ಸ್ಥಾಪಿಸಿದರು. 11–9ರ ಮುನ್ನಡೆಯೊಂದಿಗೆ ವಿರಾಮಕ್ಕೆ ತೆರಳಿದ ಅವರು ನಂತರ ಒಂದು ಪಾಯಿಂಟ್ ಕೂಡ ಬಿಟ್ಟುಕೊಡದೆ ಪಂದ್ಯ ಗೆದ್ದುಕೊಂಡರು. 2002ರಲ್ಲಿ ಡಚ್ ಚಾಲೆಂಜ್‌ನಲ್ಲಿ ಮೂರನೇ ಸ್ಥಾನ ಗಳಿಸಿರುವ ಅವರು ಈ ವರ್ಷ ಮೂರು ಅಂತರರಾಷ್ಟ್ರೀಯ ಟೂರ್ನಿಗಳ ಕ್ವಾರ್ಟರ್ ಫೈನಲ್‌ನಲ್ಲಿ ಮುಗ್ಗರಿಸಿದ್ದಾರೆ.
ಮಿಶ್ರ ಡಬಲ್ಸ್‌ನ ಫೈನಲ್‌ನಲ್ಲಿ ಥಾಯ್ಲೆಂಡ್‌ನ ತನಾವಿನ್ ಮಡೀ–ನಪಪಾಕನ್ ತುಂಕಸತಾನ್ ಜೋಡಿ ಭಾರತದ ಧ್ರುವ್ ರಾವತ್–ಮನೀಷಾ ಕೆ ವಿರುದ್ಧ ಆಡಲಿದೆ. ಪುರುಷರ ಡಬಲ್ಸ್‌ನಲ್ಲಿ ನಪಪಾಕನ್ ತುಂಕಸತಾನ್–ಹತೈತಿಪ್ ಮಿಜಾದ್ ಜೋಡಿ, ಭಾರತದ ಶ್ರೀನಿಧಿ ನಾರಾಯಣನ್–ಉದಯಸೂರ್ಯನ್ ವಿರುದ್ಧ ಸೆಣಸಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.