ADVERTISEMENT

ಅವಿ, ಓಂ ಮುನ್ನಡೆ

​ಪ್ರಜಾವಾಣಿ ವಾರ್ತೆ
Published 4 ಜುಲೈ 2019, 19:32 IST
Last Updated 4 ಜುಲೈ 2019, 19:32 IST

ಉಡುಪಿ: ಕರ್ನಾಟಕದ ಅವಿ ಬಸಕ್‌ ಮತ್ತು ಓಂ ಮಾಕಾ, ಅಖಿಲ ಭಾರತ ಸಬ್‌ ಜೂನಿಯರ್ (13 ವರ್ಷದೊಳಗಿನವರ) ರ‍್ಯಾಂಕಿಂಗ್‌ ಬ್ಯಾಡ್ಮಿಂಟನ್‌ ಟೂರ್ನಿಯ ಬಾಲಕರ ಸಿಂಗಲ್ಸ್‌ ಎರಡನೇ ಸುತ್ತನ್ನು ಪ್ರವೇಶಿಸಿದರು. ಗುರುವಾರ ಪ್ರಧಾನ ಸುತ್ತಿನ ಪಂದ್ಯಗಳು ಆರಂಭವಾಗಿದ್ದು, ಕೆಲವು ಶ್ರೇಯಾಂಕ ಆಟಗಾರರು ಮೊದಲ ಸುತ್ತಿನಲ್ಲೇ ಹೊರಬಿದ್ದರು.

ಅಜ್ಜರಕಾಡು ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಟೂರ್ನಿಯಲ್ಲಿ ಅವಿ ಬಸಕ್‌, ಉತ್ತರ ಪ್ರದೇಶದ ಕೌಸ್ತುಭ್ ತ್ಯಾಗಿ ವಿರುದ್ಧ 21–19, 15–21, 21–19ರಲ್ಲಿ ಜಯಗಳಿಸಿದರೆ, ಓಂ ಮಾಕಾ 11–21, 21–12, 21–17ರಲ್ಲಿ ಪ್ರಶಾಂತ್‌ ಕೋಟ್ಯಾನ್‌ ವಿರುದ್ಧ ಗೆದ್ದರು.

ಅಗ್ರ ಶ್ರೇಯಾಂಕದ ಅನ್ಷ್‌ ನೇಗಿ 21–,12, 21–7ರಲ್ಲಿ ಹರಿಯಾಣದ ಮೋಹಿತ್‌ ದುಹಾನ್‌ ವಿರುದ್ಧ, ಪ್ರಣವು ರಾಮ್‌ (ತೆಲಂಗಾಣ) 21–8, 21–9 ರಲ್ಲಿ ರಮೇಶ್‌ ಆದೀಶ್‌ (ತಮಿಳುನಾಡು) ವಿರುದ್ಧ ಜಯಗಳಿಸಿದರು.

ADVERTISEMENT

ರಾಜ್ಯದ ಪ್ರತೀಕ್‌ ಕೌಂಡಿಲ್ಯ, ಅನ್ಶುಲ್‌, ಪ್ರಣವ್‌ ವೆಂಪತಿ, ಲಕ್ಷ್ಯ್ ಚೆಂಗಪ್ಪ ಎಂ.ಎ., ಮಯೂಖ್‌ ಗೌಡ ಎದುರಾಳಿಗಳಿಗೆ ನೇರ ಸೆಟ್‌ಗಳಲ್ಲಿ ಮಣಿದರು.

ಬಾಲಕಿಯರ ಸಿಂಗಲ್ಸ್‌ ಮೊದಲ ಸುತ್ತಿನಲ್ಲಿ ಕರ್ನಾಟಕದ ರಾಜುಲಾ ರಾಮು, ಮೌನಿತಾ ಎ.ಎಸ್‌., ಅನುಷ್ಕಾ ಬರೈ ಎರಡನೇ ಸುತ್ತಿಗೆ ಮುನ್ನಡೆದರು.

ರಾಜುಲಾ 21–23, 21–16, 21–17ರಲ್ಲಿ ಅನ್ಮೋಲ್‌ ಖಾರ್ಬ್‌ ವಿರುದ್ಧ, ಮೌನಿತಾ 21–18, 21–8ರಲ್ಲಿ ಶ್ರವಂತಿ ದೇವನಬೊಯಿನ (ಆಂಧ್ರಪ್ರದೇಶ) ವಿರುದ್ಧ, ಅನುಷ್ಕಾ 21–18, 21–13ರಲ್ಲಿ ಪುದುಚೇರಿಯ ನೇತ್ರಾ ಜೆ. ವಿರುದ್ಧ ಜಯಗಳಿಸಿದರು.

ಅಗ್ರ ಶ್ರೇಯಾಂಕದ ನವ್ಯಾ ಕಂಡೇರಿ (ಆಂಧ್ರಪ್ರದೇಶ) 21–3, 21–7ರಲ್ಲಿ ಮಧ್ಯಪ್ರದೇಶದ ಅನುಷ್ಕಾ ಶಹಾಪುರಕರ್‌ ವಿರುದ್ಧ, ಎರಡನೇ ಶ್ರೇಯಾಂಕದ ಉನ್ನತಿ ಹೂಡಾ (ಹರಿಯಾಣ) 21–8, 21–7ರಲ್ಲಿ ಆಂಧ್ರಪ್ರದೇಶದ ದೀಪಿಕಾ ವಿರುದ್ಧ ಜಯಗಳಿಸಿದರು. ಹೆಚ್ಚಿನ ಶ್ರೇಯಾಂಕ ಆಟಗಾರ್ತಿಯರು ನೇರ ಸೆಟ್‌ಗಳಲ್ಲಿ ಮುನ್ನಡೆದರು. ಆದರೆ ಹತ್ತನೇ ಶ್ರೇಯಾಂಕದ ಕೃಷ್ಣಾ ಸೋನಿ ಮೊದಲ ಸುತ್ತು ದಾಟಲು ಆಗಲಿಲ್ಲ.

ಕರ್ನಾಟಕದ ದಿಶಾ ಸಂತೋಷ್‌, ಮೇಘಶ್ರೀ ಜಿ.ಎಸ್‌., ನೀತಿ ಎಂ., ಆರ್‌.ಪ್ರೀತಿ ರಾವ್‌ ಮೊದಲ ಸುತ್ತಿನಲ್ಲೇ ನಿರ್ಗಮಿಸಿದರು.

ಬಾಲಕಿಯರ ಡಬಲ್ಸ್‌ ಮೊದಲ ಸುತ್ತಿನಲ್ಲಿ ಜಿ.ಎಸ್‌.ಮೇಘಶ್ರೀ– ರುಜುಲಾ ರಾಮು ಜೋಡಿ 21–4, 21–12 ನೇರ ಸೆಟ್‌ಗಳಿಂದ ಮಹಾರಾಷ್ಟ್ರದ ಅನನ್ಯ ಅಗರ್‌ವಾಲ್ ಹಾಗೂ ಖುಷಿ ಸಿಂಗ್ ವಿರುದ್ಧ ಗೆಲುವು ಸಾಧಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.