ADVERTISEMENT

ರ‍್ಯಾಂಕಿಂಗ್ ಪಾಯಿಂಟ್‌ಗಿಂತ ತರಬೇತಿ ಅಗತ್ಯ: ಬಜರಂಗ್‌

ಪಿಟಿಐ
Published 29 ಮೇ 2021, 17:27 IST
Last Updated 29 ಮೇ 2021, 17:27 IST
ಬಜರಂಗ್ ಪೂನಿಯಾ–ಪಿಟಿಐ ಚಿತ್ರ
ಬಜರಂಗ್ ಪೂನಿಯಾ–ಪಿಟಿಐ ಚಿತ್ರ   

ನವದೆಹಲಿ: ಪೋಲೆಂಡ್‌ನಲ್ಲಿ ನಡೆಯಲಿರುವ ರ‍್ಯಾಂಕಿಂಗ್ ಸಿರೀಸ್ ಕುಸ್ತಿ ಟೂರ್ನಿಯಲ್ಲಿ ಭಾಗವಹಿಸದಿರಲು ಭಾರತದ ಬಜರಂಗ್ ಪೂನಿಯಾ ನಿರ್ಧರಿಸಿದ್ದಾರೆ. ರ‍್ಯಾಂಕಿಂಗ್ ಪಾಯಿಂಟ್ಸ್‌ಗಿಂತ ಟೋಕಿಯೊ ಒಲಿಂಪಿಕ್ಸ್‌ ಸಿದ್ಧತೆಗೆ ತರಬೇತಿ ಅಗತ್ಯವಾಗಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.

ಅವರು ಸ್ಪರ್ಧಿಸುವ 65 ಕೆಜಿ ವಿಭಾಗವು ಹೆಚ್ಚು ಪೈಪೋಟಿಯಿಂದ ಕೂಡಿರುತ್ತದೆ. ಆದ್ದರಿಂದ ಉತ್ತಮ ತರಬೇತಿ ಜೊತೆಗಾರನೊಂದಿಗೆ ತಾಲೀಮು ನಡೆಸಲು ಬಜರಂಗ್ ಉದ್ದೇಶಿಸಿದ್ದಾರೆ.

‘ಕೋವಿಡ್‌ನಿಂದಾಗಿ ತರಬೇತಿಯಲ್ಲಿ ವ್ಯತ್ಯಯವಾಗಿದೆ. ಅಂತರರಾಷ್ಟ್ರೀಯ ಪ್ರಯಾಣ ನಿರ್ಬಂಧದಿಂದಾಗಿ ಬೇರೆ ದೇಶಗಳಿಗೆ ತರಬೇತಿಗೆ ತೆರಳಲು ಸಾಧ್ಯವಾಗಿಲ್ಲ‘ ಎಂದು 27 ವರ್ಷದ ಬಜರಂಗ್ ಹೇಳಿದ್ದಾರೆ.

ADVERTISEMENT

ಜೂನ್‌ 8ರಿಂದ 13ರವರೆಗೆ ಪೋಲೆಂಡ್‌ನ ವಾರ್ಸಾದಲ್ಲಿ ರ‍್ಯಾಂಕಿಂಗ್ ಸಿರೀಸ್ ಟೂರ್ನಿ ನಡೆಯಲಿದ್ದು, ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಿರುವ ಭಾರತದ ಕುಸ್ತಿಪಟುಗಳು ಭಾಗವಹಿಸಲಿದ್ದಾರೆ. ಸ್ಪರ್ಧೆಯ ಬಳಿಕ ತಂಡದ ತರಬೇತಿ ಶಿಬಿರವೂ ಅಲ್ಲಿ ನಡೆಯಲಿದೆ. ಬಜರಂಗ್ ಅವರು ತಮ್ಮ ಕೋಚ್‌ ಶಾಕೊ ಬೆಂಟಿನಿಡಿಸ್‌ ಜೊತೆ ತರಬೇತಿಗಾಗಿ ರಷ್ಯಾಕ್ಕೆ ತೆರಳಲಿದ್ದಾರೆ.

‘ಒಲಿಂಪಿಕ್ಸ್ ಆರಂಭಕ್ಕೂ ಮೊದಲು ನನಗೆ ಹೆಚ್ಚಿನ ತರಬೇತಿ ಅಗತ್ಯವಿದೆ. ಕಳೆದ 18 ತಿಂಗಳುಗಳು ಕಷ್ಟದ ದಿನಗಳಾಗಿದ್ದವು. ಈ ಅವಧಿಯಲ್ಲಿ ಸ್ಪರ್ಧೆ ಹಾಗೂ ತರಬೇತಿ ಶಿಬಿರಗಳಿರಲಿಲ್ಲ. ತರಬೇತಿಗೆ ಜೊತೆಗಾರರನ್ನು ಹುಡುಕುವುದು, ಫಿಟ್ ಆಗಿರುವುದು ದೊಡ್ಡ ಸವಾಲು‘ ಎಂದು ಭಾರತ ಕ್ರೀಡಾ ಪ್ರಾಧಿಕಾರದೊಂದಿಗೆ ನಡೆಸಿದ ಸಂವಾದದಲ್ಲಿ ಬಜರಂಗ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.