ADVERTISEMENT

ಭಾರತ ಮಹಿಳಾ ಬ್ಯಾಸ್ಕೆಟ್ ಬಾಲ್ : ಒಲಿಯುವುದೇ ಒಲಿಂಪಿಕ್ಸ್ ಅರ್ಹತಾ ಟಿಕೆಟ್?

ವಿಕ್ರಂ ಕಾಂತಿಕೆರೆ
Published 22 ಸೆಪ್ಟೆಂಬರ್ 2019, 19:30 IST
Last Updated 22 ಸೆಪ್ಟೆಂಬರ್ 2019, 19:30 IST
   

ಮೂರು ವರ್ಷಗಳಿಂದ ಭಾರತದ ಮಹಿಳಾ ಬ್ಯಾಸ್ಕೆಟ್‌ಬಾಲ್ ಹೊಸ ದಿಶೆಯಲ್ಲಿ ಹೆಜ್ಜೆ ಹಾಕಿದೆ. ಏಷ್ಯಾದ ಬ್ಯಾಸ್ಕೆಟ್‌ಬಾಲ್ ಶಕ್ತಿಯಾದ ದಕ್ಷಿಣ ಕೊರಿಯಾ, ಚೀನಾ, ಜಪಾನ್ ಮುಂತಾದ ದೇಶಗಳಿಗೆ ಸವಾಲೊಡ್ಡಬಲ್ಲ ಬಲವನ್ನು ಭಾರತದ ನಾರಿಯರು ಗಳಿಸಿಕೊಂಡಿದ್ದಾರೆ.16 ಮತ್ತು 18 ವರ್ಷದೊಳಗಿನವರ ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ಉತ್ತಮ ಸಾಧನೆ ಮಾಡಿರುವ ಭಾರತದ ಕಿರಿಯರ ತಂಡದವರ ಸಾಲಿನಲ್ಲೇ ಸಾಗಿರುವ ಹಿರಿಯರು ಕಳೆದ ಬಾರಿ ಬೆಂಗಳೂರಿನಲ್ಲಿ ಗಮನ ಸೆಳೆದಿದ್ದರು. ‘ಬಿ’ ಡಿವಿಷನ್‌ನ ಚಾಂಪಿಯನ್ ಆದ ತಂಡ ಮೊದಲ ಬಾರಿ ‘ಎ’ ಡಿವಿಷನ್‌ಗೆ ಬಡ್ತಿ ಪಡೆದಿತ್ತು.

ಇದೀಗ ಬೆಂಗಳೂರು ಮತ್ತೊಮ್ಮೆ ಮಹತ್ವದ ಟೂರ್ನಿಗೆ ಆತಿಥ್ಯ ವಹಿಸುತ್ತಿದೆ. ಏಷ್ಯಾ ಕಪ್ ಎಂದು ಮರುನಾಮಕರಣಗೊಂಡ ಏಷ್ಯನ್ ಚಾಂಪಿಯನ್‌ಷಿಪ್‌ನ ಪಂದ್ಯಗಳು ಸೆಪ್ಟೆಂಬರ್ 24ರಿಂದ 29ರವರೆಗೆ ಕಂಠೀರವ ಕ್ರೀಡಾಂಗಣದಲ್ಲಿನಡೆಯಲಿವೆ. ನೆಚ್ಚಿನ ಅಂಗಣದಲ್ಲಿ ಮತ್ತೊಮ್ಮೆ ಸಾಮರ್ಥ್ಯ ಮೆರೆಯಲು ಭಾರತದ ಮಹಿಳಾ ತಂಡದವರು ಸಜ್ಜಾಗಿದ್ದಾರೆ.

ಈ ಬಾರಿ ‘ಎ’ ಡಿವಿಷನ್ ಟೂರ್ನಿಯಲ್ಲಿ ಎರಡು ಗುಂಪುಗಳಲ್ಲಿ ಒಟ್ಟು ಎಂಟು ತಂಡಗಳು ಪಾಲ್ಗೊಳ್ಳುತ್ತಿದ್ದು ಕೊನೆಯ ಸ್ಥಾನ ಗಳಿಸುವ ತಂಡ ‘ಬಿ’ ಡಿವಿಷನ್‌ಗೆ ಹಿಂಬಡ್ತಿ ಪಡೆಯಲಿದೆ. ಇಲ್ಲಿ ಉಳಿದ ತಂಡಗಳು ಟೋಕಿಯೊ ಒಲಿಂಪಿಕ್ಸ್‌ ಅರ್ಹತಾ ಟೂರ್ನಿಗೂ ಮೊದಲು ನಡೆಯಲಿರುವ ಟೂರ್ನಿಯಲ್ಲಿ ಪಾಲ್ಗೊಳ್ಳಲು ಅವಕಾಶ ಗಳಿಸಲಿವೆ.

ADVERTISEMENT

ಭಾರತಕ್ಕೆ ಕಠಿಣ ಸವಾಲು

2017ರಲ್ಲಿ ‘ಬಿ’ ಡಿವಿಷನ್‌ನಲ್ಲಿದ್ದ ಭಾರತ ತಂಡ ಚಾಂಪಿಯನ್‌ಷಿಪ್‌ನ ಎಲ್ಲ ಪಂದ್ಯಗಳನ್ನೂ ಗೆದ್ದು 5-0 ದಾಖಲೆಯೊಂದಿಗೆ ಗುಂಪಿನ ಪಾಯಿಂಟ್ ಪಟ್ಟಿಯಲ್ಲಿ ಅಗ್ರ ಸ್ಥಾನ ಗಳಿಸಿತ್ತು. ಈ ಬಾರಿ ತಂಡ ‘ಎ’ ಗುಂಪಿನಲ್ಲಿದ್ದು ಪ್ರಬಲ ತಂಡಗಳ ಪೈಪೋಟಿ ಎದುರಿಸಬೇಕಾಗಿದೆ. 12 ಬಾರಿಯ ಚಾಂಪಿಯನ್, 11 ಸಲ ರನ್ನರ್ ಅಪ್ ಆಗಿರುವ ದಕ್ಷಿಣ ಕೊರಿಯಾ ಮತ್ತು ಸತತ ನಾಲ್ಕು ಬಾರಿ ಚಿನ್ನ ಗೆದ್ದಿರುವ ಹಾಲಿ ಚಾಂಪಿಯನ್ ಜಪಾನ್ ಇದೇ ಗುಂಪಿನಲ್ಲಿವೆ. ಯಾವುದೇ ತಂಡವನ್ನು ಮಟ್ಟ ಹಾಕಲು ಸಾಧ್ಯವಿರುವ ಚೀನಾ ತೈಪೆಯೂ ಇದೇ ಗುಂಪಿನಲ್ಲಿದೆ. ಸೆಮಿಫೈನಲ್ ಅಥವಾ ಸೆಮಿಫೈನಲ್ ಅರ್ಹತಾ ಸುತ್ತು ಪ್ರವೇಶಿಸಿದರೆ 11 ಬಾರಿಯ ಚಾಂಪಿಯನ್ ಪಟ್ಟಕ್ಕೇರಿರುವ ಚೀನಾದಂಥ ಬಲಿಷ್ಠ ತಂಡಗಳನ್ನು ಎದುರಿಸಬೇಕಾಗುತ್ತದೆ.

ಮಹಿಳಾ ಏಷ್ಯನ್ ಚಾಂಪಿಯನ್‌ಷಿಪ್ ಅಥವಾ ಏಷ್ಯಾಕಪ್‌ನಲ್ಲಿ ಈ ವರೆಗೆ ಆರು ದೇಶಗಳಿಗೆ ಮಾತ್ರ ಪದಕಗಳನ್ನು ಬಗಲಿಗೆ ಹಾಕಿಕೊಳ್ಳಲು ಸಾಧ್ಯವಾಗಿದೆ. ಆಸ್ಟ್ರೇಲಿಯಾ ಬೆಳ್ಳಿ ಪದಕ ಮಾತ್ರ ಗೆದ್ದಿದ್ದರೆ ಥಾಯ್ಲೆಂಡ್ ಕಂಚು ಮಾತ್ರ ಗಳಿಸಿದೆ. ಪದಕದ ಬರ ಅನುಭವಿಸುತ್ತಿರುವ ಭಾರತ ಇದೀಗ ಪದಕದ ಪಟ್ಟಿಗೆ ಸೇರುವ ಹುಮ್ಮಸ್ಸಿನಲ್ಲಿದೆ.

ಬೆಂಗಳೂರು ನಂಟು

ಮಹಿಳೆಯರ ಏಷ್ಯಾಕಪ್ (ಏಷ್ಯನ್ ಚಾಂಪಿಯನ್‌ಷಿಪ್) ಬ್ಯಾಸ್ಕೆಟ್‌ಬಾಲ್ ಟೂರ್ನಿ ಭಾರತದಲ್ಲಿ ಈ ವರೆಗೆ ಎರಡು ಬಾರಿ ಮಾತ್ರ ನಡೆದಿದೆ. ಮೊದಲ ಬಾರಿ 2009ರಲ್ಲಿ ಚೆನ್ನೈನಲ್ಲಿ ನಡೆದಿತ್ತು. ನಂತರ ಬೆಂಗಳೂರಿನತ್ತ ಫಿಬಾ ದೃಷ್ಟಿ ನೆಟ್ಟಿತು. 2017ರಲ್ಲಿ ಟೂರ್ನಿಗೆ ಉದ್ಯಾನ ನಗರಿ ಆತಿಥ್ಯ ವಹಿಸಿತು. ಇದೀಗ ಮತ್ತೊಮ್ಮೆ ಬೆಂಗಳೂರಿಗೇ ಅವಕಾಶ ಲಭಿಸಿದೆ. 2017ರಲ್ಲಿ 16 ವರ್ಷದೊಳಗಿನವರ ಏಷ್ಯನ್ ಚಾಂಪಿಯನ್‌ಷಿಪ್‌ಗೆ ಆತಿಥ್ಯ ವಹಿಸಿದ್ದ ಬೆಂಗಳೂರು 2018ರಲ್ಲಿ 18 ವರ್ಷದೊಳಗಿನ ಮಹಿಳೆಯರ ಚಾಂಪಿಯನ್‌ಷಿಪ್‌ಗೂ ವೇದಿಕೆಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.