
ಬೆಂಗಳೂರು: ಜೈನ್ ವಿಶ್ವವಿದ್ಯಾಲಯ ತಂಡವು ಶುಕ್ರವಾರ ಮುಕ್ತಾಯಗೊಂಡ ದಕ್ಷಿಣ ವಲಯ ಅಂತರ–ವಿಶ್ವವಿದ್ಯಾಲಯ ಮಹಿಳಾ ಬಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿತು.
ಕ್ರೈಸ್ಟ್ ವಿಶ್ವವಿದ್ಯಾಲಯ ಕೇಂದ್ರೀಯ ಕ್ಯಾಂಪಸ್‌ನ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಜೈನ್ ವಿ.ವಿ ತಂಡವು 87–66ರಿಂದ ಚೆನ್ನೈನ ಎಸ್‌ಆರ್‌ಎಂ ವಿಶ್ವವಿದ್ಯಾಲಯ ತಂಡವನ್ನು ಸುಲಭವಾಗಿ ಮಣಿಸಿತು.
ಜೈನ್ ತಂಡದ ನವೊಮಿ 20 ಪಾಯಿಂಟ್ಸ್ ಪಡೆದರೆ, ಆದ್ಯಾ ಗೌಡ (17) ಹಾಗೂ ಸಿಯಾ (15) ಅವರು ಉತ್ತಮ ಬೆಂಬಲ ನೀಡಿದರು. ಎಸ್‌ಆರ್‌ಎಂ ತಂಡದ ಸಂಗಮಿತಾ (15) ಹಾಗೂ ಜೀವಿಕಾ (14) ಹೋರಾಟ ತೋರಿದರು.
ಅದರೊಂದಿಗೆ, ಈ ತಿಂಗಳ ಕೊನೆಯಲ್ಲಿ ನಡೆಯಲಿರುವ ‘ಖೇಲೊ ಇಂಡಿಯಾ’ ಅಖಿಲ ಭಾರತ ಅಂತರ–ವಿಶ್ವವಿದ್ಯಾಲಯ ಮಹಿಳಾ ಬಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್‌ಗೆ ಅರ್ಹತೆ ಪಡೆದುಕೊಂಡಿತು. ರನ್ನರ್–ಅಪ್ ಸ್ಥಾನ ಪಡೆದುಕೊಂಡ ಎಸ್‌ಆರ್‌ಎಂ ವಿಶ್ವವಿದ್ಯಾಲಯ, ದ್ವಿತೀಯ ರನ್ನರ್–ಅಪ್ ಕ್ರೈಸ್ಟ್ ವಿಶ್ವವಿದ್ಯಾಲಯ ಹಾಗೂ ತೃತೀಯ ರನ್ನರ್–ಅಪ್ ಪಡೆದ ಕೇರಳದ ಮಹಾತ್ಮ ಗಾಂಧಿ ವಿಶ್ವವಿದ್ಯಾಲಯ ತಂಡಗಳೂ ಪ್ರವೇಶ ಗಿಟ್ಟಿಸಿಕೊಂಡವು.
ಐದು ದಿನ ನಡೆದ ಈ ಟೂರ್ನಿಯಲ್ಲಿ ದಕ್ಷಿಣ ವಲಯದ ವಿವಿಧ ರಾಜ್ಯಗಳ 68 ವಿಶ್ವವಿದ್ಯಾಲಯಗಳು ಪಾಲ್ಗೊಂಡಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.