ADVERTISEMENT

ಬ್ಯಾಸ್ಕೆಟ್‌ಬಾಲ್‌ ಸ್ಪರ್ಧಿಗಳಿಗೆ ವಿಮಾನ ಯಾನ ಸೌಲಭ್ಯ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2018, 18:24 IST
Last Updated 23 ಡಿಸೆಂಬರ್ 2018, 18:24 IST

ಬೆಂಗಳೂರು: ಮುಂದಿನ ವರ್ಷದಿಂದ ರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಭಾಗವಹಿಸುವ ಎಲ್ಲಾ ವಯೋಮಾನದ ಕರ್ನಾಟಕದ ಸ್ಪರ್ಧಿಗಳಿಗೆ ವಿಮಾನ ಯಾನ ಸೌಲಭ್ಯ ಕಲ್ಪಿಸಲು ಕರ್ನಾಟಕ ರಾಜ್ಯ ಬ್ಯಾಸ್ಕೆಟ್‌ಬಾಲ್‌ ಸಂಸ್ಥೆ (ಕೆಎಸ್‌ಬಿಬಿಎ) ನಿರ್ಧರಿಸಿದೆ.

ಭಾನುವಾರ ನಡೆದ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಕೆಎಸ್‌ಬಿಬಿಎ ಮಹಾ ಕಾರ್ಯದರ್ಶಿ ಕೆ.ಗೋವಿಂದ ರಾಜ್‌ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಈ ಹಿಂದೆ ರಾಜ್ಯದ ಸ್ಪರ್ಧಿಗಳು ಬಸ್‌ ಅಥವಾ ರೈಲಿನ ಮೂಲಕ ರಾಷ್ಟ್ರೀಯ ಚಾಂಪಿಯನ್‌ಷಿಪ್‌ ನಡೆಯುವ ಸ್ಥಳಗಳಿಗೆ ಹೋಗುತ್ತಿದ್ದರು. ಎರಡು ಇಲ್ಲವೇ ಮೂರು ದಿನ ನಿರಂತರವಾಗಿ ಪ್ರಯಾಣ ಮಾಡಬೇಕಾಗಿದ್ದರಿಂದ ಸಾಕಷ್ಟು ದಣಿಯುತ್ತಿದ್ದರು. ವಿಶ್ರಾಂತಿ ಇಲ್ಲದೆಯೇ ಪಂದ್ಯಗಳನ್ನು ಆಡುವ ಅನಿವಾರ್ಯತೆಯೂ ಎದುರಾಗಿತ್ತು. ಹೀಗಾಗಿ ಮುಂದಿನ ವರ್ಷದಿಂದ ದೂರದ ರಾಜ್ಯಗಳಿಗೆ ಹೋಗುವ ಎಲ್ಲರಿಗೂ ವಿಮಾನ ಯಾನ ಸೌಕರ್ಯ ಕಲ್ಪಿಸಲು ತೀರ್ಮಾನಿಸಿದ್ದೇವೆ’ ಎಂದು ಅವರು ಹೇಳಿದರು.

ADVERTISEMENT

‘ಮುಂದಿನ ವರ್ಷದಿಂದ ಪೊಲೀಸ್‌ ಇಲಾಖೆಯಲ್ಲಿ ಕ್ರೀಡಾ ಕೋಟಾದ ಅಭ್ಯರ್ಥಿಗಳನ್ನು ನೇರವಾಗಿ ನೇಮಕ ಮಾಡಲಾಗುತ್ತದೆ. ಈ ಸಂಬಂಧ ನಾವು ಮಾಡಿದ್ದ ಮನವಿಯನ್ನು ರಾಜ್ಯ ಸರ್ಕಾರ ಪುರಸ್ಕರಿಸಿದೆ. ಬಡ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಲೂ ತೀರ್ಮಾನಿಸಿದ್ದೇವೆ’ ಎಂದರು.

ಈ ವರ್ಷ ನಡೆದ ವಿವಿಧ ಚಾಂಪಿಯನ್‌ಷಿಪ್‌ಗಳಲ್ಲಿ ಉತ್ತಮ ಸಾಧನೆ ಮಾಡಿದ ರಾಜ್ಯದ ಬಾಲಕರ ಮತ್ತು ಬಾಲಕಿಯರ ತಂಡದವರಿಗೆ ಒಟ್ಟು ₹ 5 ಲಕ್ಷ ಬಹುಮಾನ ನೀಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.