ಮಂಗಳೂರು: ಆರಂಭದಿಂದ ಕೊನೆಯ ವರೆಗೆ ತುರುಸಿನ ಆಟವಾಡಿದ ಕಾರ್ಕಳದ ನಿಟ್ಟೆ ಕ್ಯಾಂಪಸ್ ಮಹಿಳಾ ತಂಡ ಮತ್ತು ಸುರತ್ಕಲ್‌ನ ಎನ್‌ಐಟಿಕೆ ಕಾಲೇಜು ಪುರುಷರ ತಂಡ ಇಲ್ಲಿ ನಡೆಯುತ್ತಿರುವ ಜೇಮ್ಸ್ ನೈಸ್ಮಿತ್ ಕಪ್ ಬ್ಯಾಸ್ಕೆಟ್‌ಬಾಲ್ ಟೂರ್ನಿಯ ಎರಡನೇ ದಿನವಾದ ಶನಿವಾರ ಲೀಗ್ ಹಂತದ ಪಂದ್ಯಗಳಲ್ಲಿ ಭರ್ಜರಿ ಜಯ ಸಾಧಿಸಿದವು.
ದಕ್ಷಿಣ ಕನ್ನಡ ಜಿಲ್ಲಾ ಬ್ಯಾಸ್ಕೆಟ್‌ಬಾಲ್ ಸಂಸ್ಥೆಯ ಸಹಯೋಗದಲ್ಲಿ ಮಂಗಳೂರು ಬ್ಯಾಸ್ಕೆಟ್‌ಬಾಲ್ ಕ್ಲಬ್ ಯು.ಶ್ರೀನಿವಾಸ ಮಲ್ಯ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಿರುವ ಟೂರ್ನಿಯಲ್ಲಿ ನಿಟ್ಟೆ ಕ್ಯಾಂಪಸ್ ತಂಡ 35–16ರಲ್ಲಿ ಯೆನೆಪೋಯ ವಿಶ್ವವಿದ್ಯಾಲಯ ತಂಡವನ್ನು ಮಣಿಸಿತು. ಮೊದಲಾರ್ಧದಲ್ಲಿ 21–12ರ ಮುನ್ನಡೆಯಲ್ಲಿದ್ದ ತಂಡ ನಂತರವೂ ಭರ್ಜರಿ ಆಟವಾಡಿತು.
ಪುರುಷರ ವಿಭಾಗದಲ್ಲಿ ಎನ್‌ಐಟಿಕೆ ತಂಡ ಮಂಗಳೂರಿನ ಪ್ರೆಸಿಡೆನ್ಸಿ ಪಿಯು ಕಾಲೇಜು ವಿರುದ್ಧ 34–16ರಲ್ಲಿ ಗೆದ್ದಿತು. ಮೊದಲಾರ್ಧದಲ್ಲಿ 17–10ರ ಮುನ್ನಡೆ ಗಳಿಸಿದ್ದ ತಂಡ ದ್ವಿತೀಯಾರ್ಧದಲ್ಲಿ ಮತ್ತೆ 17 ಪಾಯಿಂಟ್ ಕಲೆ ಹಾಕಿತು. ಎದುರಾಳಿ ತಂಡಕ್ಕೆ ಆರು ಪಾಯಿಂಟ್ ಮಾತ್ರ ಬಿಟ್ಟುಕೊಟ್ಟಿತು. ಪುರುಷರ ವಿಭಾಗದ ಮತ್ತೊಂದು ಪಂದ್ಯದಲ್ಲಿ ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು ತಂಡ ನಿಟ್ಟೆ ಕ್ಯಾಂಪಸ್ ವಿರುದ್ಧ ರೋಚಕ ಜಯ ಸಾಧಿಸಿತು. ವಿರಾಮದ ವೇಳೆ 11–6ರ ಮುನ್ನಡೆಯಲ್ಲಿದ್ದ ತಂಡ ಅಂತಿಮವಾಗಿ 22–20ರಲ್ಲಿ ಜಯ ಗೆಲುವು ತನ್ನದಾಗಿಸಿಕೊಂಡಿತು.
ಅಂತರ ಶಾಲೆ ಬಾಲಕರ ವಿಭಾಗದ ಪಂದ್ಯಗಳಲ್ಲಿ ಮಂಗಳೂರಿನ ಲೂರ್ದ್ಸ್ ಬಿ ತಂಡ ಬೆಂಗಳೂರಿನ ಸೇಂಟ್ ಪೀಟರ್ಸ್ ವಿರುದ್ಧ 22–12ರಲ್ಲಿ, ಬೆಂಗಳೂರಿನ ನ್ಯಾಷನಲ್ ಹಿಲ್ ವ್ಯೂ ಮಂಗಳೂರಿನ ಮೌಂಟ್ ಕಾರ್ಮೆಲ್ ಬಿ ತಂಡವನ್ನು 31–8ರಲ್ಲಿ, ಕೇಂಬ್ರಿಜ್ ವಿರುದ್ಧ ನ್ಯಾಷನಲ್ ಹಿಲ್ ವ್ಯೂ 17–6ರಲ್ಲಿ, ಕೆನರಾ ಸಿಬಿಎಸ್‌ಇ 24–6ರಲ್ಲಿ ಮೌಂಟ್ ಕಾರ್ಮಿಲ್ ವಿರುದ್ಧ, ಶಾರದಾ ವಿದ್ಯಾನಿಕೇತನ ವಿರುದ್ಧ ಲೂರ್ದ್ಸ್ 42–8ರಲ್ಲಿ, ಮಣಿಪಾಲ್ ವಿರುದ್ಧ ಸೇಂಟ್ ಪೀಟರ್ಸ್ 11–9ರಲ್ಲಿ ಜಯ ಸಾಧಿಸಿತು.
ಬಾಲಕಿಯರ ವಿಭಾಗದಲ್ಲಿ ಸೇಂಟ್ ಪೀಟರ್ಸ್ ವಿರುದ್ಧ ಮೌಂಟ್ ಕಾರ್ಮೆಲ್ 29–14ರಲ್ಲಿ, ಕೇಂಬ್ರಿಜ್ ಎ ವಿರುದ್ಧ ಸೇಂಟ್ ತೆರೆಸಾಸ್ 8–2ರಲ್ಲಿ, ಕೇಂಬ್ರಿಜ್ ವಿರುದ್ಧ ಲೂರ್ದ್ಸ್ ವಿರುದ್ಧ ಕೇಂಬ್ರಿಜ್ 7–1ರಲ್ಲಿ, ಮಣಿಪಾಲ್ ವಿರುದ್ಧ ಸೇಂಟ್ ಪೀಟರ್ಸ್ 14–7ರಲ್ಲಿ ಜಯ ಸಾಧಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.