ADVERTISEMENT

ಅಂತರರಾಷ್ಟ್ರೀಯ ಹಾಕಿ ಫೆಡರೇಷನ್ ಅಧ್ಯಕ್ಷ ಸ್ಥಾನಕ್ಕೆ ಬಾತ್ರಾ ರಾಜೀನಾಮೆ

ಐಒಸಿ ಸದಸ್ಯತ್ವ ಸ್ಥಾನವನ್ನೂ ತ್ಯಜಿಸಿದ ಹಿರಿಯ ಕ್ರೀಡಾ ಆಡಳಿತಗಾರ

ಪಿಟಿಐ
Published 18 ಜುಲೈ 2022, 11:20 IST
Last Updated 18 ಜುಲೈ 2022, 11:20 IST
ನರೀಂದರ್‌ ಬಾತ್ರಾ
ನರೀಂದರ್‌ ಬಾತ್ರಾ   

ನವದೆಹಲಿ: ಹಿರಿಯ ಕ್ರೀಡಾ ಆಡಳಿತಗಾರ ನರೀಂದರ್‌ ಬಾತ್ರಾ ಅವರು ಅಂತರರಾಷ್ಟ್ರೀಯ ಹಾಕಿ ಫೆಡರೇಷನ್ (ಎಫ್‌ಐಎಚ್‌) ಅಧ್ಯಕ್ಷ ಸ್ಥಾನ ಮತ್ತು ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ) ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.

ಭಾರತ ಒಲಿಂಪಿಕ್‌ ಸಂಸ್ಥೆ (ಐಒಎ) ಅಧ್ಯಕ್ಷ ಸ್ಥಾನದಿಂದಲೂ ಅಧಿಕೃತವಾಗಿ ಕೆಳಗಿಳಿದಿದ್ದಾರೆ. ಐಒಎ ಅಧ್ಯಕ್ಷರಾಗಿ ಯಾವುದೇ ಕೆಲಸ ನಿರ್ವಹಿಸಬಾರದು ಎಂದು ದೆಹಲಿ ಹೈಕೋರ್ಟ್‌ ಈ ಹಿಂದೆಯೇ ಅವರಿಗೆ ಸೂಚಿಸಿತ್ತು.

ಐಎಒ, ಐಒಸಿ ಮತ್ತು ಎಫ್‌ಐಎಚ್‌ಗೆ ಪ್ರತ್ಯೇಕವಾಗಿ ರಾಜೀನಾಮೆ ಪತ್ರ ಬರೆದು ತಮ್ಮ ನಿರ್ಧಾರ ಪ್ರಕಟಿಸಿದ್ದಾರೆ. ‘ವೈಯಕ್ತಿಕ ಕಾರಣಗಳಿಂದಾಗಿ ರಾಜೀನಾಮೆ ನೀಡುತ್ತಿದ್ದೇನೆ’ ಎಂದೂ ಪತ್ರದಲ್ಲಿ ಹೇಳಿದ್ದಾರೆ.

ADVERTISEMENT

ಹಾಕಿ ಇಂಡಿಯಾದಲ್ಲಿ (ಎಚ್‌ಐ) ‘ಆಜೀವ ಸದಸ್ಯತ್ವ’ ಎಂಬ ಪದವಿಯನ್ನು ಕಿತ್ತುಹಾಕಿರುವುದಾಗಿ ದೆಹಲಿ ಹೈಕೋರ್ಟ್‌ ಮೇ 25 ರಂದು ತೀರ್ಪು ನೀಡಿತ್ತು. ಬಾತ್ರಾ ಅವರು ಎಚ್‌ಐ ಆಜೀವ ಸದಸ್ಯರಾಗಿದ್ದುಕೊಂಡು 2017 ರಲ್ಲಿ ಐಒಎ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದಿದ್ದರು.

ದೆಹಲಿ ಹೈಕೋರ್ಟ್‌ ತೀರ್ಪಿನ ಕಾರಣ ಅವರು ಐಒಎ ಅಧ್ಯಕ್ಷ ಸ್ಥಾನ ಕಳೆದುಕೊಂಡಿದ್ದರು. ಹಿರಿಯ ಉಪಾಧ್ಯಕ್ಷ ಅನಿಲ್‌ ಖನ್ನಾ ಅವರನ್ನು ಹಂಗಾಮಿ ಅಧ್ಯಕ್ಷರನ್ನಾಗಿ ಹೈಕೋರ್ಟ್‌ ನೇಮಕ ಮಾಡಿತ್ತು.

ಈ ತೀರ್ಪಿಗೆ ತಡೆಯಾಜ್ಞೆ ಕೋರಿ ಬಾತ್ರಾ ಸಲ್ಲಿಸಿದ್ದ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿತ್ತು. ಈ ಎಲ್ಲಾ ಬೆಳವಣಿಗೆಯ ಹಿನ್ನೆಲೆಯಲ್ಲಿ ಅವರು ವಿವಿಧ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ.

65 ವರ್ಷದ ಬಾತ್ರಾ 2017 ರಲ್ಲಿ ಮೊದಲ ಬಾರಿ ಐಒಎ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಮತ್ತೊಮ್ಮೆ ಸ್ಪರ್ಧಿಸುವ ಅರ್ಹತೆಯನ್ನೂ ಹೊಂದಿದ್ದರು. ಐಒಎ ಚುನಾವಣೆ ಕಳೆದ ಡಿಸೆಂಬರ್‌ನಲ್ಲಿ ನಡೆಯಬೇಕಿತ್ತು. ಆದರೆ ನಿಯಮಗಳಲ್ಲಿ ತಿದ್ದುಪಡಿ ಪ್ರಕ್ರಿಯೆ ನಡೆಯುತ್ತಿರುವುದರಿಂದ ಚುನಾವಣೆ ನಿಗದಿತ ವೇಳಾಪಟ್ಟಿಯಂತೆ ನಡೆದಿಲ್ಲ. ಅವರು 2019 ರಲ್ಲಿ ಐಒಸಿ ಸದಸ್ಯರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.