ADVERTISEMENT

ಚಳಿಗಾಲದ ಒಲಿಂಪಿಕ್ಸ್ ಮೇಲೆಯೂ ಕೊರೊನಾ ಕಾರ್ಮೋಡ

ಏಜೆನ್ಸೀಸ್
Published 17 ಜುಲೈ 2020, 13:08 IST
Last Updated 17 ಜುಲೈ 2020, 13:08 IST
ಒಲಿಂಪಿಕ್ಸ್
ಒಲಿಂಪಿಕ್ಸ್   

ಬೀಜಿಂಗ್: ಕೊರೊನಾ ವೈರಾಣು ಹಾವಳಿಯಿಂದಾಗಿ ಒಂದು ವರ್ಷ ಮುಂದೂಡಿರುವ ಟೋಕಿಯೊ ಒಲಿಂಪಿಕ್ಸ್ ಮುಂದಿನ ವರ್ಷವೂ ನಡೆಯುವುದರ ಬಗ್ಗೆ ಅನುಮಾನಗಳು ಉಳಿದಿವೆ. ಈ ನಡುವೆ ಬೀಜಿಂಗ್‌ನಲ್ಲಿ 2022ರಲ್ಲಿ ನಡೆಯಬೇಕಾಗಿರುವ ಚಳಿಗಾಲದ ಒಲಿಂಪಿಕ್ಸ್ ಮೇಲೆಯೂ ಕಾರ್ಮೋಡ ಕವಿದಿದೆ.

ಕೊರೊನಾ ನಿಯಂತ್ರಣಕ್ಕೆ ಬಾರದೇ ಇದ್ದರೆ ಚಳಿಗಾಲದ ಒಲಿಂಪಿಕ್ಸ್ ಕೂಡ ಮುಂದೂಡಬೇಕಾಗಬಹುದು ಎಂದು ಅಂತರರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿಯ ಮಾಜಿ ಅಧಿಕಾರಿಯೊಬ್ಬರು ಹೇಳಿದ್ದರು. ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಸಂಘಟಕರು ಒತ್ತಡದಲ್ಲೇ ಸಿದ್ಧತೆಗಳನ್ನು ನಡೆಸುತ್ತಿದ್ದಾರೆ.

ಬೀಜಿಂಗ್‌ನಲ್ಲಿ ಚಳಿಗಾಲದ ಒಲಿಂಪಿಕ್ಸ್ ನಡೆಸಲು ಆಗದೇ ಇದ್ದರೆ ಬೇರೆ ಎಲ್ಲ ಸಾಧ್ಯತೆಗಳ ಬಗ್ಗೆ ಚಿಂತನೆ ನಡೆಸಲಾಗುವುದು ಎಂದು ಅಂತರರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿಯ ಮಾಜಿ ಉಪಾಧ್ಯಕ್ಷ ಡಿಕ್ ಪೌಂಡ್ ಹೇಳಿದ್ದರು. ಇದು ಆಯೋಜಕರ ನಿದ್ದೆಗೆಡಿಸಿದೆ.

ADVERTISEMENT

ಟೋಕಿಯೊದಲ್ಲಿ ಈ ವರ್ಷ ನಡೆಯಬೇಕಾಗಿದ್ದ ಒಲಿಂಪಿಕ್ಸ್‌ನ ಆರು ತಿಂಗಳ ನಂತರ ಬೀಜಿಂಗ್‌ನಲ್ಲಿ ಚಳಿಗಾಲದ ಕೂಡ ನಡೆಯಬೇಕಾಗಿತ್ತು. ಒಲಿಂಪಿಕ್ಸ್‌ ಕೂಟವನ್ನು 2021ರ ಜುಲೈ–ಆಗಸ್ಟ್‌ಗೆ ಮುಂದೂಡಲಾಗಿದೆ. ಹೀಗಾಗಿ ಚಳಿಗಾಲದ ಒಲಿಂಪಿಕ್ಸ್ ಕೂಡ ಮುಂದಕ್ಕೆ ಹೋಗಿದೆ.

ಕೊರೊನಾ ಹಾವಳಿ ಹೆಚ್ಚುತ್ತಿದ್ದಂತೆ ಟೋಕಿಯೊ ಒಲಿಂಪಿಕ್ಸ್ ಬಗ್ಗೆ ಆತಂಕ ಆರಂಭವಾಗಿತ್ತು. ಆದರೆ ಕೂಟವನ್ನು ಒಂದು ವರ್ಷ ಮುಂದೂಡಿದಾಗ ಎಲ್ಲರೂ ನಿಟ್ಟುಸಿರು ಬಿಟ್ಟಿದ್ದರು. ಇದಾಗಿ ಕೆಲವು ತಿಂಗಳ ನಂತರವೂ ವೈರಸ್ ಹಾವಳಿ ಕಡಿಮೆಯಾಗದ ಕಾರಣ ಒಲಿಂಪಿಕ್ಸ್ ಮುಂದಿನ ವರ್ಷವೂ ನಡೆಯುವುದು ಅನುಮಾನ ಎಂಬ ಮಾತುಗಳು ಕೇಳಿಬಂದಿದ್ದವು.

ಕಳೆದ ವರ್ಷದ ಅಂತ್ಯದಲ್ಲಿ ಚೀನಾದಲ್ಲಿ ಕೊರೊನಾ ವೈರಾಣುವಿನ ಸೋಂಕು ಮೊತ್ತಮೊದಲು ಕಾಣಿಸಿಕೊಂಡಿತ್ತು. ನಂತರ ಜಗತ್ತಿನ ವಿವಿಧ ದೇಶಗಳಿಗೆ ವ್ಯಾಪಿಸಿತ್ತು. ಚೀನಾವು ಸೋಂಕನ್ನು ತಡೆಯುವಲ್ಲಿ ತಕ್ಕಮಟ್ಟಿಗೆ ಯಶಸ್ವಿಯಾಗಿದೆ. ಆದರೂ ಈ ವರ್ಷ ಯಾವುದೇ ಕ್ರೀಡಾಕೂಟಗಳನ್ನು ನಡೆಸದೇ ಇರಲು ನಿರ್ಧರಿಸಿದೆ. ಚಳಿಗಾಲದ ಒಲಿಂಪಿಕ್ಸ್‌ನ ಸಿದ್ಧತೆಗಳನ್ನು ಮಾತ್ರ ನಡೆಸುತ್ತಿದೆ.

’ವೈರಾಣು ಸೋಂಕಿನ ಹಿನ್ನೆಲೆಯಲ್ಲಿ ಚಳಿಗಾಲದ ಒಲಿಂಪಿಕ್ಸ್‌ಗೆ ಸಂಬಂಧಿಸಿ ಕಠಿಣ ನಿಯಂತ್ರಣಗಳನ್ನು ಏರ್ಪಡಿಸಲಾಗಿದೆ. ಆದರೆ ಸಿದ್ಧತೆಗಳಿಗೆ ಯಾವುದೇ ಕೊರತೆಯಾಗದಂತೆ ನೋಡಿಕೊಳ್ಳಲಾಗುತ್ತಿದೆ‘ ಎಂದು ಸಂಘಟಕರು ತಿಳಿಸಿದ್ದಾರೆ.

’ಸ್ಪರ್ಧೆಗಳನ್ನು ಆಯೋಜಿಸಲು ಉದ್ದೇಶಿಸಿರುವ ಜಾಗಗಳಲ್ಲಿ ಕ್ರೀಡಾಂಗಣಗಳ ನಿರ್ಮಾಣ ಕಾರ್ಯವನ್ನು ನಿಗದಿಯಂತೆ ಈ ವರ್ಷಾಂತ್ಯದಲ್ಲಿ ಮುಗಿಸಲಾಗುವುದು. ಅಥ್ಲೀಟ್‌ಗಳ ಸುರಕ್ಷತೆ ಮತ್ತು ಆರೋಗ್ಯರಕ್ಷಣೆಗೆ ಸಂಬಂಧಿಸಿ ಎಲ್ಲ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ‘ ಎಂದು ಸಂಘಟಕರು ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.