ADVERTISEMENT

ಪದಕ ಹರಾಜಿಗಿಟ್ಟು ಆ ದೇಶದ ಆಡಳಿತಕ್ಕೆ ಪೆಟ್ಟು ನೀಡಿದ ಕ್ರೀಡಾಪಟು

ರಾಯಿಟರ್ಸ್
Published 9 ಆಗಸ್ಟ್ 2021, 12:02 IST
Last Updated 9 ಆಗಸ್ಟ್ 2021, 12:02 IST
ಕ್ರಿಸ್ಟಿನಾ ತಿಮನೊಸ್ಕಯ –ರಾಯಿಟರ್ಸ್ ಚಿತ್ರ
ಕ್ರಿಸ್ಟಿನಾ ತಿಮನೊಸ್ಕಯ –ರಾಯಿಟರ್ಸ್ ಚಿತ್ರ   

ವಾರ್ಸೊ, ಪೋಲೆಂಡ್‌: ಕೋಚ್‌ಗಳ ಮೇಲೆ ಟೀಕಾಸ್ತ್ರ ಪ್ರಯೋಗಿಸಿ ಆಡಳಿತದ ಕೆಂಗಣ್ಣಿಗೆ ಗುರಿಯಾಗಿರುವ ಬೆಲಾರಸ್‌ನ ಸ್ಪ್ರಿಂಟರ್ ಕ್ರಿಸ್ಟಿನಾ ತಿಮನೊಸ್ಕಯ ಇದೀಗ ಪದಕ ಹರಾಜಿಗಿಟ್ಟು ಮತ್ತೊಂದು ರೀತಿಯಲ್ಲಿ ಹೋರಾಟಕ್ಕೆ ಮುಂದಾಗಿದ್ದಾರೆ.

ಕ್ರೀಡಾ ಆಡಳಿತಗಾರರಿಂದ ಶೋಷಣೆಗೆ ಒಳಗಾಗುತ್ತಿರುವ ದೇಶದ ಅಥ್ಲೀಟ್‌ಗಳಿಗೆ ಬೆಂಬಲ ಸೂಚಿಸುವ ಸಲುವಾಗಿ ಈ ‘ಪ್ರಯೋಗ’ಕ್ಕೆ ಮುಂದಾಗಿರುವುದಾಗಿ ಅವರು ಹೇಳಿದ್ದಾರೆ. 2019ರ ಯುರೋಪಿಯನ್ ಗೇಮ್ಸ್‌ನಲ್ಲಿ ಗಳಿಸಿದ ಪದಕವನ್ನು ಹರಾಜಿಗೆ ಇರಿಸಲಾಗಿದೆ.

ಟೋಕಿಯೊ ಒಲಿಂಪಿಕ್ಸ್‌ನ 200 ಮೀಟರ್ಸ್ ಓಟದಲ್ಲಿ ಪಾಲ್ಗೊಳ್ಳಲು ಕ್ರಿಸ್ಟಿನಾ ತೆರಳಿದ್ದರು. ಆದರೆ ಅವರ ದೇಶದ ನಿಯೋಗದಲ್ಲಿದ್ದ ಅಧಿಕಾರಿಗಳು ಸ್ಪರ್ಧೆಯ ಹಿಂದಿನ ದಿನ ಅವರನ್ನು ಅಲ್ಲಿಂದ ವಾಪಸ್ ಕಳುಹಿಸಿದ್ದರು. ಇದರಿಂದ ಬೇಸರಗೊಂಡು ತವರಿಗೆ ಮರಳದೆ ಪೋಲೆಂಡ್‌ನಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ. ಬೆಲಾರಸ್‌ಗೆ ತೆರಳಿದರೆ ಜೀವಕ್ಕೆ ಅಪಾಯ ಇದೆ ಎಂದೂ ಹೇಳಿದ್ದಾರೆ.

ADVERTISEMENT

‘4x400 ಮೀಟರ್ಸ್ ರಿಲೆಯಲ್ಲಿ ಪಾಲ್ಗೊಳ್ಳಬೇಕಾಗಿದ್ದ ಕೆಲವರು ಸಮರ್ಪಕವಾಗಿ ಡೋಪಿಂಗ್ ಪರೀಕ್ಷೆ ಮಾಡಿಸಿಕೊಳ್ಳದ ಕಾರಣ ಅನರ್ಹಗೊಂಡಿದ್ದರು. ಹೀಗಾಗಿ ನನಗೆ ತಿಳಿಸದೇ ನನ್ನನ್ನು ರಿಲೆ ತಂಡದಲ್ಲಿ ಸೇರಿಸಲಾಗಿತ್ತು’ ಎಂದು ಕ್ರಿಸ್ಟಿನಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಅಲೆಕ್ಸಾಂಡರ್ ಲುಕಾಶೆಂಕೊ ಅವರ ಆಡಳಿತದ ಕ್ರೌರ್ಯಕ್ಕೆ ಒಳಗಾಗಿರುವವರಿಗೆ ನೆರವಾಗಲು ಕ್ರಿಸ್ಟಿನಾ ಬಯಸಿದ್ದಾರೆ. ಆವರ ಮನವಿಯಂತೆ ಪದಕವನ್ನು ಹರಾಜಿಗೆ ಇರಿಸಲಾಗಿದೆ’ ಎಂದು ರಾಜಕೀಯ ಕಾರಣದಿಂದ ಬದಿಗೆ ಸರಿಸಲಾಗಿರುವ ಅಥವಾ ಜೈಲುಪಾಲಾಗಿರುವ ಕ್ರೀಡಾಪಟುಗಳಿಗಾಗಿ ಹೋರಾಡುತ್ತಿರುವ ಬೆಲಾರಸ್‌ನ ಕ್ರೀಡಾ ಸೌಹಾರ್ದ ಫೌಂಡೇಷನ್‌ ತಿಳಿಸಿದೆ.

ಕಳೆದ ವರ್ಷ ನಡೆದಿದ್ದ ಚುನಾವಣೆಯ ಸಂದರ್ಭದಲ್ಲಿ ತಮ್ಮ ವಿರುದ್ಧ ನಿಂತವರ ಮತ್ತು ವಿರೋಧ ಪಕ್ಷದವರ ಮೇಲೆ ಅಧ್ಯಕ್ಷ ಅಲೆಕ್ಸಾಂಡರ್ ಲುಕಾಶೆಂಕೊ ಈಗ ಹಗೆ ತೀರಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಆದರೆ ಚುನಾವಣೆಗೆ ಸಂಬಂಧಿಸಿ ಯಾವ ರೀತಿಯಲ್ಲೂ ಅಕ್ರಮ ನಡೆದಿಲ್ಲ ಎಂದೂ ಈಗ ಪ್ರತೀಕಾರ ತೀರಿಸುವ ಅಗತ್ಯವಿಲ್ಲ ಎಂದೂ ಲುಕಾಶೆಂಕೊ ಹೇಳಿದ್ದಾರೆ.

ಕ್ರಿಸ್ಟಿನಾ ಪ್ರಕರಣದ ಹಿನ್ನೆಲೆಯಲ್ಲಿ ಬೆಲಾರಸ್‌ ಅಥ್ಲೆಟಿಕ್ಸ್ ತಂಡದ ಮುಖ್ಯ ಕೋಚ್ ಯೂರಿ ಮೊಯ್ಸೆವಿಚ್ ಮತ್ತು ತಂಡದ ವ್ಯವಸ್ಥಾಪಕ ಆರ್ಥರ್ ಶುಮಕ್ ಅವರ ಮಾನ್ಯತೆಯನ್ನು ಕಳೆದ ಶುಕ್ರವಾರ ರದ್ದುಪಡಿಸಿರುವ ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ ಟೋಕಿಯೊ ಒಲಿಂಪಿಕ್ಸ್‌ನಿಂದ ಅವರಿಬ್ಬರನ್ನು ಹೊರಗೆ ಕಳುಹಿಸಿತ್ತು.

ಅತಿಭಾವುಕತೆ ಮತ್ತು ಮಾನಸಿಕ ಕ್ಷೋಭೆಯಿಂದ ಬಳಲುತ್ತಿದ್ದ ಕ್ರಿಸ್ಟಿನಾ ಅವರನ್ನು ವೈದ್ಯರ ಸಲಹೆ ಹಿನ್ನೆಲೆಯಲ್ಲಿ ಕ್ರೀಡಾಕೂಟದಿಂದ ವಾಪಸ್ ಕಳುಹಿಸಲಾಗಿತ್ತು ಎಂದು ಬೆಲಾರಸ್‌ ಒಲಿಂಪಿಕ್ ಸಮಿತಿ ಸ್ಪಷ್ಟನೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.