ADVERTISEMENT

ಎಚ್‌ಐಎಚ್‌ ಹಾಕಿ ಪ್ರೊ ಲೀಗ್‌ | ಬೆಲ್ಜಿಯಂ ಶುಭಾರಂಭ: ಭಾರತಕ್ಕೆ ನಿರಾಸೆ

ಪ್ರವಾಸಿ ತಂಡಕ್ಕೆ 3–1 ಜಯ

ಪಿಟಿಐ
Published 12 ಫೆಬ್ರುವರಿ 2026, 0:22 IST
Last Updated 12 ಫೆಬ್ರುವರಿ 2026, 0:22 IST
<div class="paragraphs"><p>ಬೆಲ್ಜಿಯಂ</p></div>

ಬೆಲ್ಜಿಯಂ

   

ರೂರ್ಕೆಲಾ: ಅಂತಿಮ ಕ್ವಾರ್ಟರ್‌ ಅವಧಿಯಲ್ಲಿ ಎರಡು ಗೋಲು ಗಳಿಸುವಲ್ಲಿ ಯಶಸ್ವಿಯಾದ ಬೆಲ್ಜಿಯಂ ತಂಡವು ಬುಧವಾರ ಆರಂಭವಾದ ಎಫ್‌ಐಎಚ್‌ ಪ್ರೊ ಲೀಗ್‌ ಪಂದ್ಯದಲ್ಲಿ 3–1 ಗೋಲುಗಳಿಂದ ಆತಿಥೇಯ ಭಾರತ ತಂಡವನ್ನು ಸೋಲಿಸಿತು. ಇದು ಈ ಋತುವಿನಲ್ಲಿ ಭಾರತಕ್ಕೆ ಮೊದಲ ಪಂದ್ಯವಾಗಿದ್ದು ಉತ್ತಮ ಆರಂಭ ಪಡೆಯುವಲ್ಲಿ ವಿಫಲವಾಯಿತು.

ಬಿರ್ಸಾ ಮುಂಡಾ ಹಾಕಿ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ನೆಲ್ಸನ್ ಒನಾನ (23ನೇ ನಿಮಿಷ), ಥಾಮಸ್‌ ಕ್ರೋಲ್ಸ್ (53ನೇ ನಿಮಿಷ) ಮತ್ತು ಅರ್ನೊ ವಾನ್ ಡೆಸೆಲ್ (57ನೇ ನಿಮಿಷ) ಅವರು ಪ್ರಬಲ ಬೆಲ್ಜಿಯಂ ತಂಡದ ಪರ ಗೋಲು ಗಳಿಸಿದರು. ಭಾರತ ತಂಡದ ಪರ ಶಿಲಾನಂದ ಲಾಕ್ರಾ ಅವರು 29ನೇ ನಿಮಿಷ ಏಕೈಕ ಗೋಲು ಗಳಿಸಿದರು.

ADVERTISEMENT

ಉಭಯ ತಂಡಗಳು ವಿರಾಮದ ವೇಳೆಗೆ 1–1 ಸಮ ಮಾಡಿಕೊಂಡಿದ್ದವು. ಮೂರನೇ ಕ್ವಾರ್ಟರ್‌ವರೆಗೂ ಇದೇ ಸ್ಕೋರ್ ಮುಂದುವರಿಯಿತು. ಆದರೆ ಬೆಲ್ಜಿಯಂ ಕೊನೆಯ 15 ನಿಮಿಷಗಳಲ್ಲಿ ಎರಡು ಗೋಲುಗಳನ್ನು ಗಳಿಸಿ ಮೇಲುಗೈ ಸಾಧಿಸಿತು.

ಮೊದಲ ಕ್ವಾರ್ಟರ್‌ ತೀವ್ರ ಹಣಾಹಣಿಹಯಿಂದ ಕೂಡಿದ್ದು, ಎರಡೂ ತಂಡಗಳಿಂದ ಗಂಭೀರ ಲೋಪಗಳೇನೂ ಕಾಣಿಸಲಿಲ್ಲ. ಬೆಲ್ಜಿಯಂ ತಂಡವು ಚೆಂಡಿನ ಮೇಲೆ ಹೆಚ್ಚಿನ ಅವಧಿಯಲ್ಲಿ ನಿಯಂತ್ರಣ ಸಾಧಿಸಿತ್ತು. ಆದರೆ ಭಾರತವೂ ದೊರೆತ ಅವಕಾಶಗಳಲ್ಲಿ ಆಕ್ರಮಣಕ್ಕೆ ಮುಂದಾಯಿತು. ಬೆಲ್ಜಿಯಂ ತಂಡಕ್ಕೆ ನಾಲ್ಕನೇ ನಿಮಿಷ ಮೊದಲ ಪೆನಾಲ್ಟಿ ಕಾರ್ನರ್ ದೊರೆಯಿತು. ಆದರೆ ಅಲೆಕ್ಸಾಂಡರ್ ಹೆಂಡ್ರಿಕ್ಸ್ ಅವರ ಡ್ರ್ಯಾಗ್‌ಫ್ಲಿಕ್‌ಅನ್ನು ವಿವೇಕ್ ಸಾಗರ್ ಪ್ರಸಾದ್ ಯಶಸ್ವಿಯಾಗಿ ತಡೆದರು. ನಾಲ್ಕು ನಿಮಿಷಗಳ ನಂತರ ಭಾರತಕ್ಕೂ ಪೆನಾಲ್ಟಿ ಕಾರ್ನರ್ ದೊರೆತರೂ ಪ್ರಯೋಜನವಾಗಲಿಲ್ಲ.

ಎರಡನೇ ಕ್ವಾರ್ಟರ್‌ನಲ್ಲಿ ಗೋಲಿಗೆ ಗಂಭೀರ ಯತ್ನಗಳು ನಡೆದವು. 21ನೇ ನಿಮಿಷ ಅಲೆಕ್ಸಾಂಡರ್ ಹೆಂಡ್ರಿಕ್ಸ್‌ ಅವರ ಉತ್ತಮ ಯತ್ನವನ್ನು ಗೋಲ್‌ಕೀಪರ್ ಪವನ್ ಅಮೋಘವಾಗಿ ಜಿಗಿದು ತಡೆಯುವಲ್ಲಿ ಯಶಸ್ವಿಯಾದರು. ಥಾಮಸ್‌ ಕ್ರೋಲ್ಸ್ ಅವರ ಯತ್ನವೂ ವಿಫಲವಾಯಿತು.

23ನೇ ನಿಮಿಷ ಕ್ರೋಲ್ಸ್ ಚೆಂಡನ್ನು ನಿಯಂತ್ರಣಕ್ಕೆ ಪಡೆದು ಒನಾನಾ ಅವರಿಗೆ ಕಳುಹಿಸಿದರು. ಒನಾನಾ ಹೆಚ್ಚಿನ ಪ್ರಯಾಸವಿಲ್ಲದೇ ಗುರಿತಲುಪಿಸಿದರು. 29ನೇ ನಿಮಿಷ ಅಮಿತ್‌ ರೋಹಿದಾಸ್ ಎದುರಾಳಿ ಗೋಲಿನತ್ತ ಕಳುಹಿಸಿದ ಚೆಂಡು, ಬೆಲ್ಜಿಯಂ ತಂಡದ ರಕ್ಷಣೆ ಆಟಗಾರನೊಬ್ಬನಿಂದ ಹಿಂದಕ್ಕೆ ಬಂದಾಗ ಲಾಕ್ರಾ ತಮಗೆ ದೊರೆತ ಅವಕಾಶದಲ್ಲಿ ಎಡವಲಿಲ್ಲ. ಸ್ಕೋರ್ ಸಮನಾಯಿತು.

ಮೂರನೇ ಕ್ವಾರ್ಟರ್‌ನಲ್ಲಿ ಬೆಲ್ಜಿಯಂ ಮೇಲುಗೈ ಸಾಧಿಸಿದರೂ ಮುನ್ನಡೆ ಪಡೆಯಲಾಗಲಿಲ್ಲ. 53ನೇ ನಿಮಿಷ ನೀಲಕಂಠ ಶರ್ಮಾ ಅವರ ಅತ್ಯುತ್ತಮ ಪಾಸ್‌ನಲ್ಲಿ ಕಾರ್ತಿ ಸೆಲ್ವಂ ಚೆಂಡನ್ನು ಗೋಲಿನತ್ತ ಬಾರಿಸಿದ್ದರು. ಆದರೆ ರಕ್ಷಣೆ ಆಟಗಾರರೊಬ್ಬರು ಅದನ್ನು ತಡೆದರು.

ಭಾರತ ತಂಡ ಗುರುವಾರ ಅರ್ಜೆಂಟೀನಾ ತಂಡವನ್ನು ಎದುರಿಸಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.