ADVERTISEMENT

ಕೆನಡಾ ಎದುರು ಬೆಲ್ಜಿಯಂ ಶುಭಾರಂಭ

ಪಿಟಿಐ
Published 28 ನವೆಂಬರ್ 2018, 19:35 IST
Last Updated 28 ನವೆಂಬರ್ 2018, 19:35 IST
ಗೋಲು ಗಳಿಸಿ ಸಂಭ್ರಮಿಸಿದ ಬೆಲ್ಜಿಯಂ ಆಟಗಾರರು –ಎಫ್‌ಐಎಚ್‌ ವೆಬ್‌ಸೈಟ್ ಚಿತ್ರ
ಗೋಲು ಗಳಿಸಿ ಸಂಭ್ರಮಿಸಿದ ಬೆಲ್ಜಿಯಂ ಆಟಗಾರರು –ಎಫ್‌ಐಎಚ್‌ ವೆಬ್‌ಸೈಟ್ ಚಿತ್ರ   

ಭುವನೇಶ್ವರ: ಮೊದಲಾರ್ಧದಲ್ಲಿ ಗಳಿಸಿದ ಎರಡು ಗೋಲುಗಳ ಬಲದಿಂದ ಬೆಲ್ಜಿಯಂ ತಂಡ ವಿಶ್ವಕಪ್‌ನಲ್ಲಿ ಶುಭಾರಂಭ ಮಾಡಿತು. ಕಳಿಂಗ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಕೆನಡಾ ವಿರುದ್ಧ ಬೆಲ್ಜಿಯಂ 2–1 ಅಂತರದಿಂದ ಗೆದ್ದಿತು.

ವಿಶ್ವಕಪ್‌ನಲ್ಲಿ ಈ ತಂಡಗಳು ಈ ಹಿಂದೆ ಒಮ್ಮೆ ಮಾತ್ರ ಮುಖಾಮುಖಿಯಾಗಿದ್ದವು. ಆ ಪಂದ್ಯ 2–2ರಿಂದ ಡ್ರಾ ಆಗಿತ್ತು. ಹೀಗಾಗಿ ಗೆಲುವಿನ ಖಾತೆ ತೆರೆಯುವ ಹಂಬಲದೊಂದಿಗೆ ಉಭಯ ತಂಡಗಳು ಕಣಕ್ಕೆ ಇಳಿದಿದ್ದವು.

ಬುಧವಾರ ಆರಂಭದಲ್ಲೇ ಆಕ್ರಮಣಕ್ಕೆ ಮುಂದಾದ ಬೆಲ್ಜಿಯಂ ತಂಡಕ್ಕೆ ಮೂರನೇ ನಿಮಿಷದಲ್ಲೇ ಯಶಸ್ಸು ದೊರೆಯಿತು. ಕೆನಡಾ ಆವರಣಕ್ಕೆ ನುಗ್ಗಿದ ಡೆನಯರ್ ಫೆಲಿಕ್ಸ್ ಗೋಲು ಗಳಿಸಿ ಸಂಭ್ರಮಿಸಿದರು. ಈ ಮುನ್ನಡೆಯಿಂದಾಗಿ ತಂಡದ ಹುಮ್ಮಸ್ಸು ಹೆಚ್ಚಿತು. ಎದುರಾಳಿಗಳ ಆಕ್ರಮಣಕ್ಕೆ ಉತ್ತರ ನೀಡಲು ಕೆನಡಾ ಪರದಾಡಿತು.

ADVERTISEMENT

ಬ್ರಿಯೆಲ್ಸ್ ಥಾಮಸ್ 22ನೇ ನಿಮಿಷದಲ್ಲಿ ಗಳಿಸಿದ ಗೋಲಿನ ಮೂಲಕ ಬೆಲ್ಜಿಯಂ ಮುನ್ನಡೆಯನ್ನು ಹೆಚ್ಚಿಸಿಕೊಂಡಿತು. ತಿರುಗೇಟು ನೀಡಲು ಕೆನಡಾ ನಡೆಸಿದ ಪ್ರಯತ್ನಗಳಿಗೆ ಫಲ ಸಿಗಲಿಲ್ಲ.

ಪ್ರಬಲ ಪೈಪೋಟಿ: ದ್ವಿತೀಯಾರ್ಧದಲ್ಲಿ ಕೆನಡಾ ಪ್ರಬಲ ಪೈಪೋಟಿ ಒಡ್ಡಿತು. ಬೆಲ್ಜಿಯಂ ತಂಡದವರ ಆಕ್ರಮಣವನ್ನು ಮೆಟ್ಟಿ ನಿಲ್ಲುವಲ್ಲಿ ರಕ್ಷಣಾ ವಿಭಾಗದವರು ಯಶಸ್ವಿಯಾದರು. ಗೋಲ್‌ಕೀಪರ್‌ ಕಿಂಡ್ಲರ್ ಆ್ಯಂಟೊನಿ ಕೂಡ ಗಮನ ಸೆಳೆದರು.

48ನೇ ನಿಮಿಷದಲ್ಲಿ ಲಭಿಸಿದ ಪೆನಾಲ್ಟಿ ಅವಕಾಶದಲ್ಲಿ ಕೆನಡಾ ಖಾತೆ ತೆರೆಯಿತು. ಪಿಯರ್ಸನ್ ಮಾರ್ಕ್‌ ಚೆಂಡನ್ನು ಗುರಿ ಮುಟ್ಟಿಸಿ ಸಂಭ್ರಮಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.