ADVERTISEMENT

ಸೋಲಿನಿಂದ ಪಾರಾದ ವಾರಿಯರ್ಸ್‌

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2019, 20:00 IST
Last Updated 7 ಸೆಪ್ಟೆಂಬರ್ 2019, 20:00 IST
ರೇಡ್‌ ಮಾಡುತ್ತಿರುವ ಗುಜರಾತ್‌ ಫಾರ್ಚೂನ್‌ಜೈಂಟ್ಸ್‌ ತಂಡದ ರೋಹಿತ್‌ ಗುಲಿಯಾ
ರೇಡ್‌ ಮಾಡುತ್ತಿರುವ ಗುಜರಾತ್‌ ಫಾರ್ಚೂನ್‌ಜೈಂಟ್ಸ್‌ ತಂಡದ ರೋಹಿತ್‌ ಗುಲಿಯಾ   

ಕೋಲ್ಕತ್ತ: ರೈಡರ್‌ ಮಣಿಂದರ್‌ ಸಿಂಗ್‌ ಅವರು ಒಂದು ನಿಮಿಷ ಉಳಿದಿರುವಂತೆ ತಂಡದ ಕೊನೆಯ ರೇಡ್‌ನಲ್ಲಿ ಇಬ್ಬರನ್ನು ಔಟ್‌ ಮಾಡುವ ಮೂಲಕ ಆತಿಥೇಯ ಬೆಂಗಾಲ್‌ ವಾರಿಯರ್ಸ್‌ ತಂಡ ತವರು ಲೆಗ್‌ನ ಮೊದಲ ಪಂದ್ಯವನ್ನು ಸೋಲದಂತೆ ನೋಡಿಕೊಂಡರು. ಶನಿವಾರ ಪ್ರೊ ಕಬಡ್ಡಿ ಲೀಗ್‌ ಪಂದ್ಯದಲ್ಲಿ ವಾರಿಯರ್ಸ್‌ ಮತ್ತು ಗುಜರಾತ್‌ ಫಾರ್ಚೂನ್‌ ಜೈಂಟ್ಸ್ ನಡುವಣ ಪಂದ್ಯ 25–25ರಲ್ಲಿ ‘ಟೈ’ ಆಯಿತು.

ಒಂದು ನಿಮಿಷ ಉಳಿದಿದ್ದಾಗ ಗುಜರಾತ್‌ ತಂಡ 25–23ರಲ್ಲಿ ಮುಂದಿತ್ತು. ಆದರೆ ಮಣಿಂದರ್‌ ಯಶಸ್ವಿ ರೈಡ್‌ನಲ್ಲಿ ಸುನೀಲ್‌ ಕುಮಾರ್‌ ಮತ್ತು ಪರ್ವೇಶ್‌ ಬೇನ್ಸ್‌ವಾಲ್‌ ಅವರನ್ನು ಟಚ್‌ ಮಾಡಿ ಕೋಲ್ಕತ್ತ ಪ್ರೇಕ್ಷಕರನ್ನು ಸಂಭ್ರಮದಲ್ಲಿ ಮುಳುಗಿಸಿದರು. ಆಲೌಟ್‌ ಆಗುವುದನ್ನು ತಡೆಯುವ ನಿಟ್ಟಿನಲ್ಲಿ ಎರಡೂ ತಂಡಗಳು ರಕ್ಷಣಾತ್ಮಕ ಆಟಕ್ಕೆ ಒತ್ತು ನೀಡಿದ್ದವು.

ಮಣಿಂದರ್‌ ಒಟ್ಟು 9 ಪಾಯಿಂಟ್ಸ್‌ ಗಳಿಸಿದರು. ಪ್ರಪಂಜನ್‌ ನಾಲ್ಕು ಪಾಯಿಂಟ್ಸ್‌ ಕಲೆಹಾಕಿದರು. ಗುಜರಾತ್‌ ಪರ ರೈಡರ್‌ಗಳಾದ ಸಚಿನ್‌, ಸೋನು ತಲಾ ಆರು ಮತ್ತು ರೋಹಿತ್‌ ಗುಲಿಯಾ ಐದು ಪಾಯಿಂಟ್ಸ್‌ ಗಳಿಸಿದರು.

ADVERTISEMENT

ಬೆಂಗಾಲ್‌ ವಾರಿಯರ್ಸ್‌ 13 ಪಂದ್ಯಗಳಿಂದ 48 ಪಾಯಿಂಟ್ಸ್‌ ಗಳಿಸಿದ್ದು, ಮೂರನೇ ಸ್ಥಾನದಲ್ಲಿ ಮುಂದುವರಿದಿದೆ. ಗುಜರಾತ್ ತಂಡ ಇಷ್ಟೇ ಪಂದ್ಯಗಳಿಂದ 33 ಪಾಯಿಂಟ್ಸ್‌ ಸಂಗ್ರಹಿಸಿ ಎಂಟನೇ ಸ್ಥಾನದಲ್ಲಿದೆ.

ದಬಂಗ್‌ ಡೆಲ್ಲಿಗೆ ನಿರಾಸೆ: ಹರಿಯಾಣ ಸ್ಟೀಲರ್ಸ್‌ ತಂಡ ಇನ್ನೊಂದು ಪಂದ್ಯದಲ್ಲಿ ಲೀಗ್‌ ಲೀಡರ್ ದಬಂಗ್ ಡೆಲ್ಲಿ ತಂಡವನ್ನು 47–25 ಪಾಯಿಂಟ್‌ಗಳಿಂದ ಸೋಲಿಸಿತು. ಇದು ಡೆಲ್ಲಿ ತಂಡಕ್ಕೆ ಎರಡನೇ ಸೋಲು. ಆಗಸ್ಟ್‌ 1ರಂದು ಅದು ಫಾರ್ಚೂನ್‌ಜೈಂಟ್ಸ್ ಎದುರು ಮೊದಲ ಸೋಲು ಕಂಡಿತ್ತು.

ಡೆಲ್ಲಿ 54 ಅಂಕಗಳೊಡನೆ ಅಗ್ರಸ್ಥಾನದಲ್ಲೇ ಮುಂದುವರಿದರೆ, ಸ್ಟೀಲರ್ಸ್‌ ತಂಡ ಮೂರನೇ ಸ್ಥಾನ ಕಾಪಾಡಿಕೊಂಡಿದೆ. ಎರಡೂ ತಂಡಗಳು 13 ಪಂದ್ಯಗಳನ್ನಾಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.