ADVERTISEMENT

ಪ್ರೊ ಕಬಡ್ಡಿ | 'ಪವನಶಕ್ತಿ' ವಿಜೃಂಭಣೆ: ಸೆಮಿಗೆ ಬೆಂಗಳೂರು

ಪ್ರದೀಪ್ ಮ್ಯಾಜಿಕ್; ಪುಣೇರಿಗೆ ಸೋಲುಣಿಸಿ ನಾಲ್ಕರ ಹಂತಕ್ಕೇರಿದ ಯೋಧಾ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2022, 18:12 IST
Last Updated 21 ಫೆಬ್ರುವರಿ 2022, 18:12 IST
ಗುಜರಾತ್ ಜೈಂಟ್ಸ್ ಆವರಣದಲ್ಲಿ ಪಾಯಿಂಟ್ ಗಳಿಸಲು ಪ್ರಯತ್ನಿಸಿದ ಬೆಂಗಳೂರು ಬುಲ್ಸ್ ತಂಡದ ಪವನ್ ಶೆರಾವತ್
ಗುಜರಾತ್ ಜೈಂಟ್ಸ್ ಆವರಣದಲ್ಲಿ ಪಾಯಿಂಟ್ ಗಳಿಸಲು ಪ್ರಯತ್ನಿಸಿದ ಬೆಂಗಳೂರು ಬುಲ್ಸ್ ತಂಡದ ಪವನ್ ಶೆರಾವತ್   

ಬೆಂಗಳೂರು: ಪವನಕುಮಾರ್ ಶೆರಾವತ್ ರೇಡಿಂಗ್‌ನಲ್ಲಿ ಮತ್ತೆ ಮಿಂಚಿದರು. ಈ ಮೂಲಕ ಬೆಂಗಳೂರು ಬುಲ್ಸ್ ತಂಡ ಪ್ರೊ ಕಬಡ್ಡಿ ಟೂರ್ನಿಯಲ್ಲಿ ಸೆಮಿಫೈನಲ್ ಪ್ರವೇಶಿಸಲು ಕಾರಣರಾದರು.

ವೈಟ್‌ಫೀಲ್ಸ್‌ನಲ್ಲಿರುವ ಶೆರಟನ್ ಗ್ರ್ಯಾಂಡ್ ಹೋಟೆಲ್‌ನಲ್ಲಿ ನಡೆಯುತ್ತಿರುವ ಟೂರ್ನಿಯ ಸೋಮವಾರ ನಡೆದ ಎಲಿಮಿನೇಟರ್ ಪಂದ್ಯದಲ್ಲಿ ಬುಲ್ಸ್ 49-29ರಿಂದ ಗುಜರಾತ್ ಜೈಂಟ್ಸ್ ವಿರುದ್ಧ ಜಯಿಸಿತು. ಇದರೊಂದಿಗೆ ಐದನೇ ಸಲ ಸೆಮಿಫೈನಲ್ ಹಂತ ಪ್ರವೇಶಿಸಿತು.

ಇಡೀ ಟೂರ್ನಿಯಲ್ಲಿ ಅಂಕಗಳ ರಾಶಿ ಪೇರಿಸಿರುವ ಪವನ್ ಈ ಪಂದ್ಯದಲ್ಲಿ 13 ಅಂಕ ಗಳಿಸಿದರು. ಅವರು ಮತ್ತು ಚಂದ್ರನ್ ರಂಜಿತ್ 14ನೇ ನಿಮಿಷದಷ್ಟೊತ್ತಿಗೆ ಗುಜರಾತ್ ಅಂಕಣ ಖಾಲಿ ಮಾಡಿಸುವಲ್ಲಿ ಸಫಲರಾದರು. ಇದರಿಂದಾಗಿ ಬುಲ್ಸ್‌ಗೆ 20-10ರ ಮುನ್ನಡೆ ಲಭಿಸಿತು. ಬುಲ್ಸ್ ಮೊದಲಾರ್ಧದಲ್ಲಿ 24-17 ರಿಂದ ಮುನ್ನಡೆಯಿತು. ಪವನ್ ಎಂಟು ರೇಡ್‌ಗಳಲ್ಲಿ ಒಂಬತ್ತು ಅಂಕ ಗಳಿಸಿದರು. ಟ್ಯಾಕ್ಲಿಂಗ್‌ ಮಾಡುವ ಪ್ರಯತ್ನಗಳಲ್ಲಿ ಮೂರು ಸಲ ಔಟಾದರು.

ADVERTISEMENT

ವಿರಾಮದ ನಂತರ ಎಲ್ಲ ಲೋಪಗಳನ್ನು ತಿದ್ದಿಕೊಂಡ ಪವನ್ ಬಳಗ ಗುಜರಾತ್ ತಂಡವನ್ನು ಚಿತ್ ಮಾಡಿತು. 20 ಅಂಕಗಳ ಅಂತರದಿಂದ ಬುಲ್ಸ್ ಜಯಿಸಿತು. ನಾಲ್ಕರ ಘಟ್ಟದಲ್ಲಿ ದಬಂಗ್ ಡೆಲ್ಲಿ ತಂಡವನ್ನು ಎದುರಿಸಲಿದೆ.

ಪ್ರದೀಪ್ ಮ್ಯಾಜಿಕ್: ಸೆಮಿಗೆ ಯೋಧಾ

ಅನುಭವಿ ಪ್ರದೀಪ್ ನರ್ವಾಲ್ ಸೂಪರ್ ರೇಡ್‌ಗಳ ಮ್ಯಾಜಿಕ್ ಮುಂದೆ ಪುಣೇರಿ ಪಲ್ಟನ್ ದೂಳೀಪಟವಾಯಿತು. ಯುಪಿ ಯೋಧಾ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿತು. ಮೊದಲ ಎಲಿಮಿನೇಟರ್ ಪಂದ್ಯದಲ್ಲಿ ಪ್ರದೀಪ್ ಗಳಿಸಿದ 18 ಅಂಕಗಳ ಬಲದಿಂದ ಯೋಧಾ ತಂಡವು 42-31ರಿಂದ ಜಯಭೇರಿ ಬಾರಿಸಿತು.

ಪುಣೇರಿ ತಂಡವು ಉತ್ತಮ ಆರಂಭವನ್ನೇನೋ ಮಾಡಿತು. ಆದರೆ ಪ್ರದೀಪ್ ಬಿರುಗಾಳಿ ವೇಗದ ರೇಡಿಂಗ್ ಮುಂದೆ ಮಂಕಾಯಿತು. ಮೊದಲ ಐದು ನಿಮಿಷಗಳಲ್ಲೇ ಯೋಧಾ ಅಂಕಣವನ್ನು ಖಾಲಿ ಮಾಡುವಲ್ಲಿ ಪುಣೇರಿಯ ಅಸ್ಲಂ ಮತ್ತು ಮೋಹಿತ್ ಯಶಸ್ವಿ ಯಾದರು.ಇದರ ನಂತರ ಯೋಧಾ ಭರ್ಜರಿ ತಿರುಗೇಟು ನೀಡಿತು. ಪುಣೇರಿಯ ಅಂಕಣ ಖಾಲಿ ಮಾಡಿಸಿ 10-10ರ ಸಮಬಲ ಸಾಧಿಸಿತು.

ಈ ಸಂದರ್ಭದಲ್ಲಿ ನರ್ವಾಲ್ ಗಳಿಸಿದ ಸೂಪರ್ ಟೆನ್ ಅಂಕಗಳ ಬಲದಿಂದ ಯೋಧಾ 25-17 ಮುನ್ನಡೆ ಸಾಧಿಸಿತು. ವಿರಾಮದ ನಂತರವೂ ಪುಣೇರಿಯ ರಕ್ಷಣಾ ಗೋಡೆಯನ್ನು ಪುಡಿಗಟ್ಟುವಲ್ಲಿ ಪ್ರದೀಪ್ ಯಶಸ್ವಿ ಆದರು. ಅಡ್ವಾನ್ಸ್ ಟ್ಯಾಕಲ್ ಮಾಡುವ ಪುಣೇರಿ ಆಟಗಾರರ ಪ್ರಯತ್ನಗಳು ವಿಫಲವಾದವು. ಪುಣೇರಿಯ ಅಸ್ಲಾಂ ಹತ್ತು ಅಂಕ ಗಳಿಸಿದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.