ADVERTISEMENT

ಬೆಂಗಳೂರು ಕಪ್‌ ಹಾಕಿ: ಐಒಸಿಎಲ್‌ ಮುಡಿಗೆ ಕಿರೀಟ

ಫೈನಲ್‌ನಲ್ಲಿ ಎಡವಿದ ಆರ್ಮಿ ಇಲೆವನ್‌

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2019, 19:46 IST
Last Updated 18 ಆಗಸ್ಟ್ 2019, 19:46 IST
ಬೆಂಗಳೂರು ಕಪ್‌ ಹಾಕಿ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದ ಐಒಸಿಎಲ್‌ ತಂಡದವರು ಟ್ರೋಫಿಯೊಂದಿಗೆ ಸಂಭ್ರಮಿಸಿದರು (ಕುಳಿತವರು; ಎಡದಿಂದ) ಅರ್ಮಾನ್‌ ಖುರೇಷಿ, ರೋಷನ್‌ ಮಿಂಜ್‌, ಮನಪ್ರೀತ್‌ ಸಿಂಗ್‌, ವಿಕ್ರಂ ಕಾಂತ್‌, ತಲ್ವಿಂದರ್‌ ಸಿಂಗ್‌, ಯುವರಾಜ್‌ ವಾಲ್ಮಿಕಿ, ಸುಮಿತ್‌ ಕುಮಾರ್‌, ಜುಬೇರ್‌ ಖಾನ್‌ ಮತ್ತು ಸುನಿಲ್‌ ಯಾದವ್‌. (ನಿಂತವರು; ಎಡದಿಂದ) ಚೇತನ್‌ ಜನಾರ್ಧನ್‌, ಎಸ್‌.ಕೆ.ಉತ್ತಪ್ಪ, ವಿಕ್ರಮ್‌ಜಿತ್‌ ಸಿಂಗ್‌, ಧರ್ಮವೀರ್‌ ಸಿಂಗ್, ದೀಪಕ್‌ ಠಾಕೂರ್‌ (ಕೋಚ್‌), ದೇವೇಶ್‌ ಚೌಹಾಣ್‌ (ಮ್ಯಾನೇಜರ್‌), ಅಫಾನ್‌ ಯೂಸುಫ್‌, ವಿಕಾಸ್‌ ಶರ್ಮಾ, ಗುರ್ಜಿಂದರ್‌ ಸಿಂಗ್‌, ವಿ.ಆರ್‌.ರಘುನಾಥ್‌ ಮತ್ತು ಪಂಕಜ್‌ ಕುಮಾರ್‌ ರಾಜಕ್‌ –ಪ್ರಜಾವಾಣಿ ಚಿತ್ರ/ ಎಸ್‌.ಕೆ.ದಿನೇಶ್‌

ಬೆಂಗಳೂರು: ಹೋದ ತಿಂಗಳ ಅಂತ್ಯದಲ್ಲಿ ನಡೆದಿದ್ದ ಬೆಂಗಳೂರು ಸೂಪರ್‌ ಡಿವಿಷನ್‌ ಹಾಕಿ ಟೂರ್ನಿಯಲ್ಲಿ ಚಾಂಪಿಯನ್‌ ಆಗಿದ್ದ ಇಂಡಿಯನ್‌ ಆಯಿಲ್‌ ಕಾರ್ಪೊರೇಷನ್‌ ಲಿಮಿಟೆಡ್‌ (ಐಒಸಿಎಲ್‌) ತಂಡ ಈಗ ಮತ್ತೊಂದು ಟ್ರೋಫಿ ಮುಡಿಗೇರಿಸಿಕೊಂಡಿದೆ.

ಹಾಕಿ ಕರ್ನಾಟಕ ಆಶ್ರಯದ ಬೆಂಗಳೂರು ಕಪ್‌ ಅಖಿಲ ಭಾರತ ಆಹ್ವಾನಿತ ಟೂರ್ನಿಯಲ್ಲಿ ಈ ತಂಡ ಪ್ರಶಸ್ತಿ ಜಯಿಸಿದೆ.

ಶಾಂತಿನಗರದಲ್ಲಿರುವ ಫೀಲ್ಡ್‌ ಮಾರ್ಷಲ್‌ ಕೆ.ಎಂ.ಕಾರ್ಯಪ್ಪ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಫೈನಲ್‌ನಲ್ಲಿ ಐಒಸಿಎಲ್‌ 5–0 ಗೋಲುಗಳಿಂದ ಆರ್ಮಿ ಇಲೆವನ್‌ ತಂಡವನ್ನು ಪರಾಭವಗೊಳಿಸಿತು.

ADVERTISEMENT

ಮೊದಲ ಕ್ವಾರ್ಟರ್‌ನಲ್ಲಿ ಉಭಯ ತಂಡಗಳು ಸಮಬಲದ ಪೈಪೋಟಿ ನಡೆಸಿದವು. ಹೀಗಾಗಿ ಯಾರಿಗೂ ಖಾತೆ ತೆರೆಯಲು ಆಗಲಿಲ್ಲ. ಎರಡನೇ ಕ್ವಾರ್ಟರ್‌ನಲ್ಲಿ ಐಒಸಿಎಲ್‌ ಯಶಸ್ಸು ಗಳಿಸಿತು. 20ನೇ ನಿಮಿಷದಲ್ಲಿ ಸುಮಿತ್‌ ಕುಮಾರ್‌ ಕೈಚಳಕ ತೋರಿದರು. ಇದರ ಬೆನ್ನಲ್ಲೇ (24ನೇ ನಿ.) ಗುರ್ಜಿಂದರ್‌ ಸಿಂಗ್‌ ಮೋಡಿ ಮಾಡಿದರು.

2–0 ಮುನ್ನಡೆಯೊಂದಿಗೆ ವಿರಾಮಕ್ಕೆ ಹೋದ ಐಒಸಿಎಲ್‌ ತಂಡ ದ್ವಿತೀಯಾರ್ಧದಲ್ಲೂ ಪೂರ್ಣ ಪ್ರಾಬಲ್ಯ ಮೆರೆಯಿತು. ಯುವರಾಜ್‌ ವಾಲ್ಮಿಕಿ ಮತ್ತು ಧರಮ್‌ವೀರ್‌ ಸಿಂಗ್‌ ಕ್ರಮವಾಗಿ 35 ಮತ್ತು 37ನೇ ನಿಮಿಷಗಳಲ್ಲಿ ಚೆಂಡನ್ನು ಗುರಿ ಸೇರಿಸಿ ಐಒಸಿಎಲ್‌ ಗೆಲುವು ಖಾತ್ರಿಪಡಿಸಿದರು.

ಅಂತಿಮ ಕ್ವಾರ್ಟರ್‌ನಲ್ಲಾದರೂ ಆರ್ಮಿ ಇಲೆವನ್‌ ತಿರುಗೇಟು ನೀಡಬಹುದೆಂಬ ನಿರೀಕ್ಷೆಯೂ ಹುಸಿಯಾಯಿತು. 52ನೇ ನಿಮಿಷದಲ್ಲಿ ಗೋಲು ಹೊಡೆದ ತಲ್ವಿಂದರ್‌ ಸಿಂಗ್‌ ಐಒಸಿಎಲ್‌ ಸಂಭ್ರಮಕ್ಕೆ ಕಾರಣರಾದರು.

ತಲ್ವಿಂದರ್‌ ಅವರು ಟೂರ್ನಿಯಲ್ಲಿ ಅತಿ ಹೆಚ್ಚು ಗೋಲು ಗಳಿಸಿದ ಆಟಗಾರ ಎಂಬ ಶ್ರೇಯಕ್ಕೆ ಪಾತ್ರರಾದರು. ಅವರು ಒಟ್ಟು ಏಳು ಗೋಲುಗಳನ್ನು ದಾಖಲಿಸಿದರು. ಅಫಾನ್‌ ಯೂಸುಫ್‌ ‘ಟೂರ್ನಿಯ ಶ್ರೇಷ್ಠ ಆಟಗಾರ’ ಗೌರವ ಪಡೆದರು. ಹಾಕಿ ಕರ್ನಾಟಕ ತಂಡದ ಕೆ.ಪಿ.ಸೋಮಯ್ಯ ಅವರಿಗೆ ‘ಉತ್ತಮ ಮಿಡ್‌ಫೀಲ್ಡರ್‌’ ಪ್ರಶಸ್ತಿ ಲಭಿಸಿತು.

ಮೇಜರ್‌ ಧ್ಯಾನ್‌ ಚಂದ್‌ ಜೀವಮಾನ ಸಾಧನೆ ಪುರಸ್ಕಾರಕ್ಕೆ ನಾಮ ನಿರ್ದೇಶನಗೊಂಡಿರುವ ಒಲಿಂಪಿಯನ್‌ ಆಟಗಾರ ಮ್ಯಾನುಯೆಲ್‌ ಫ್ರೆಡರಿಕ್‌ ಅವರನ್ನು ಹಾಕಿ ಕರ್ನಾಟಕ ವತಿಯಿಂದ ಗೌರವಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.