
ಕಲಬುರ್ಗಿ: ಕರ್ನಾಟಕದ ಎಸ್.ಭಾರ್ಗವ್ ಮತ್ತು ಕೃತಿ ಭಾರದ್ವಾಜ್, ನಗರದಲ್ಲಿಆಯೋಜಿಸಿರುವ ಅಂತರರಾಜ್ಯ ದಕ್ಷಿಣ ವಲಯ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನ 19 ವರ್ಷದೊಳಗಿನವರ ವಿಭಾಗದಲ್ಲಿ ಮಂಗಳವಾರ ಕ್ರಮವಾಗಿ ಬಾಲಕರ ಮತ್ತು ಬಾಲಕಿಯರ ಸಿಂಗಲ್ಸ್ ಫೈನಲ್ ತಲುಪಿದರು.
ಚಂದ್ರಶೇಖರ ಪಾಟೀಲ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಟೂರ್ನಿಯ ಬಾಲಕರ ಸಿಂಗಲ್ಸ್ ಸೆಮಿಫೈನಲ್‌ನಲ್ಲಿ ಭಾರ್ಗವ್19–21, 21–17, 21–16ರಲ್ಲಿ ತಮಿಳುನಾಡಿನ ಎಚ್.ಅರುಣೇಶ್ ಅವರನ್ನು ಸೋಲಿಸಿದರು.
ಕೃತಿ ಭಾರದ್ವಾಜ್ ಮೂರು ಗೇಮ್‌ಗಳಿಗೆ ಬೆಳೆದ ಬಾಲಕಿಯರ ಸೆಮಿಫೈನಲ್‌ನಲ್ಲಿ 18–21, 21–11, 21–11ರಲ್ಲಿ ಕೇರಳದ ಪವಿತ್ರಾ ನವೀನ್ ಅವರನ್ನು ಹಿಮ್ಮೆಟ್ಟಿಸಿದರು.
ಬಾಲಕರ ಡಬಲ್ಸ್‌ನಲ್ಲಿ ಎಚ್.ವಿ.ನಿತಿನ್, ಎಸ್.ಭಾರ್ಗವ್ ಜೋಡಿ, ಮಿಶ್ರ ಡಬಲ್ಸ್‌ನಲ್ಲಿ ಸಿ.ವಿ.ರಮ್ಯಾ, ಎಚ್.ವಿ.ನಿತಿನ್ ಜೋಡಿಗಳು ಫೈನಲ್ ಪ್ರವೇಶಿಸಿದವು.
ಎಸ್.ಭಾರ್ಗವ್– ನಿತಿನ್ ಜೋಡಿ 21–13, 19–21, 24–22ರಲ್ಲಿ ಕೇರಳದ ಜೇಕಬ್ ಥಾಮಸ್, ಆರ್.ಜೆ.ರೋಗಿನ್ ಜೋಡಿಗೆ ಸೋಲುಣಿಸಿತು. ಮಿಶ್ರ ಡಬಲ್ಸ್‌ನಲ್ಲಿ ಎಚ್.ವಿ.ನಿತಿನ್– ಸಿ.ವಿ.ರಮ್ಯಾ ಜೋಡಿ 21–15, 21–14ರ ನೇರ ಗೇಮ್‌ಗಳಿಂದ ಕೇರಳದ ಆರ್.ಜೆ.ರೋಗಿನ್, ಸಾರಾ ಅಲ್ಮಾ ಬಾಸಿಲ್ ಜೋಡಿಯನ್ನು ಸೋಲಿಸಿತು.
ಬಾಲಕರ ಸಿಂಗಲ್ಸ್ ಸೆಮಿಫೈನಲ್‌ನಲ್ಲಿ ಕೇರಳದ ಎನ್.ಪಿ.ಉದಿತ್ ಅವರು 21–17, 21–16ರ ನೇರ ಸೆಟ್‌ಗಳಿಂದ ರಾಜ್ಯದ ತೇಜಸ್ ಎಸ್.ಕಲ್ಲೂರಕರ್ ಅವರನ್ನು ಸೋಲಿಸಿದರು.
ಮಹಿಳೆಯರ ಸಿಂಗಲ್ಸ್ ಸೆಮಿಫೈನಲ್‌ನಲ್ಲಿ ತೆಲಂಗಾಣದ ಎಂ.ಮೇಘನಾ ರೆಡ್ಡಿ 21–16, 21–17ರಲ್ಲಿ ಕರ್ನಾಟಕದ ರುತ್ ಮಿಶಾ ವಿನೋದ್ ಅವರನ್ನು ಮಣಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.