ADVERTISEMENT

ಕಾಮನ್‌ವೆಲ್ತ್‌ ಫೆನ್ಸಿಂಗ್‌ ಚಾಂಪಿಯನ್‌ಷಿಪ್‌: ಚಿನ್ನ ಗೆದ್ದ ಭವಾನಿದೇವಿ

ಕಾಮನ್‌ವೆಲ್ತ್‌ ಫೆನ್ಸಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಉಳಿಸಿಕೊಂಡ ಭಾರತದ ಆಟಗಾರ್ತಿ

ಪಿಟಿಐ
Published 10 ಆಗಸ್ಟ್ 2022, 12:36 IST
Last Updated 10 ಆಗಸ್ಟ್ 2022, 12:36 IST
ಭವಾನಿ ದೇವಿ– ಸಾಯ್ ಮೀಡಿಯಾ ಟ್ವಿಟರ್ ಚಿತ್ರ
ಭವಾನಿ ದೇವಿ– ಸಾಯ್ ಮೀಡಿಯಾ ಟ್ವಿಟರ್ ಚಿತ್ರ   

ಲಂಡನ್‌: ಭಾರತದ ಭವಾನಿ ದೇವಿ ಅವರು ಇಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್ ಫೆನ್ಸಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಜಯಿಸಿದ್ದಾರೆ. ಇದರೊಂದಿಗೆ ಕಳೆದ ಬಾರಿ ಗೆದ್ದಿದ್ದ ಪ್ರಶಸ್ತಿಯನ್ನು ಉಳಿಸಿಕೊಂಡಿದ್ದಾರೆ.

ಮಂಗಳವಾರ ನಡೆದ ಮಹಿಳೆಯರ ವೈಯಕ್ತಿಕ ಸೇಬರ್‌ ವಿಭಾಗದ ಫೈನಲ್ ಹಣಾಹಣಿಯಲ್ಲಿ ಅವರು 15–10ರಿಂದ ಆಸ್ಟ್ರೇಲಿಯಾದ ವೆರೋನಿಕಾ ವೇಸ್‌ಲೆವಾ ಅವರನ್ನು ಪರಾಭವಗೊಳಿಸಿದರು.

ಕಳೆದ ವರ್ಷ ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಿದ್ದ ಚೆನ್ನೈನ ಭವಾನಿ, ಈ ಶ್ರೇಯ ಗಳಿಸಿದ ಭಾರತದ ಮೊದಲ ಫೆನ್ಸರ್ ಎನಿಸಿಕೊಂಡಿದ್ದರು.

ADVERTISEMENT

ಈ ವರ್ಷದ ಆರಂಭದಲ್ಲಿ ಇಸ್ತಾಂಬುಲ್‌ನಲ್ಲಿ ನಡೆದಿದ್ದ ವಿಶ್ವಕಪ್‌ನಲ್ಲಿ 23ನೇ ಸ್ಥಾನ ಗಳಿಸಿದ್ದ ಅವರು, ಕೈರೊದಲ್ಲಿ ನಡೆದಿದ್ದ ವಿಶ್ವಚಾಂಪಿಯನ್‌ಷಿಪ್‌ನಲ್ಲಿ ಎರಡನೇ ಸುತ್ತು ಪ್ರವೇಶಿಸಿದ್ದರು. ಕಾಮನ್‌ವೆಲ್ತ್ ಚಾಂಪಿಯನ್‌ಷಿಪ್‌ ಅವರು ಈ ವರ್ಷ ಭಾಗವಹಿಸುತ್ತಿರುವ 10ನೇ ಅಂತರರಾಷ್ಟ್ರೀಯ ಟೂರ್ನಿಯಾಗಿದೆ.

‘ಇದೊಂದು ಸವಾಲಿನ ಪಂದ್ಯವಾಗಿತ್ತು. ಈ ವರ್ಷ ಮತ್ತೊಂದು ಚಿನ್ನದ ಪದಕ ಜಯಿಸಿರುವುದಕ್ಕೆ ಖುಷಿಯಿದೆ. ಮುಂದಿನ ಟೂರ್ನಿಗಳಲ್ಲೂ ಇದೇ ಲಯ ಮುಂದುವರಿಸುವೆ‘ ಎಂದು ಭವಾನಿ ಹೇಳಿದ್ದಾರೆ.

ಭಾರತ ಫೆನ್ಸಿಂಗ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ರಾಜೀವ್ ಮೆಹ್ತಾ, ಭವಾನಿ ಅವರನ್ನು ಅಭಿನಂದಿಸಿದ್ದಾರೆ. ‘ದೇಶದ ಪ್ರತಿ ಫೆನ್ಸರ್‌ಗಳಿಗೂಭವಾನಿ ಅವರು ಪ್ರೇರಕಶಕ್ತಿಯಾಗಿದ್ದಾರೆ. ಹಲವು ಯುವ ಪ್ರತಿಭೆಗಳು ಅವರಿಂದ ಸ್ಫೂರ್ತಿ ಪಡೆಯುತ್ತಿದ್ದಾರೆ‘ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.