ಬೀಲ್, ಸ್ವಿಟ್ಜರ್ಲೆಂಡ್: ಭಾರತದ ಯುವ ಗ್ರ್ಯಾಂಡ್‌ಮಾಸ್ಟರ್ ನಿಹಾಲ್ ಸರಿನ್ ಅವರು ಬೀಲ್ ಚೆಸ್ ಫೆಸ್ಟಿವಲ್‌ನ ರ‍್ಯಾಪಿಡ್ ವಿಭಾಗದಲ್ಲಿ ಎರಡನೇ ಸ್ಥಾನ ಗಳಿಸಿದ್ದಾರೆ. ಟೂರ್ನಿಯಲ್ಲಿ ಅವರು ಒಟ್ಟು ನಾಲ್ಕು ಗೆಲುವು ಹಾಗೂ ಎರಡು ಡ್ರಾ ಸಾಧಿಸಿದರು.
17 ವರ್ಷದ ನಿಹಾಲ್ (ಇಎಲ್‌ಒ ರೇಟಿಂಗ್ 2620) ಅವರು ಭಾನುವಾರ ರಾತ್ರಿ ನಡೆದ ಕೊನೆಯ ಸುತ್ತಿನಲ್ಲಿ ಗ್ರ್ಯಾಂಡ್‌ಮಾಸ್ಟರ್ ಗಾಟಾ ಕಾಮ್‌ಸ್ಕಿ ಅವರೊಂದಿಗೆ ಡ್ರಾ ಸಾಧಿಸಿದರು. ಇದರೊಂದಿಗೆ ಅಮೆರಿಕದ ಆಟಗಾರನ ಸತತ ಐದು ಪಂದ್ಯಗಳ ಜಯದ ಓಟಕ್ಕೆ ತಡೆ ಹಾಕಿದರು.
ನಿಹಾಲ್ ಅವರು ಗಳಿಸಲು ಸಾಧ್ಯವಿದ್ದ 14 ಪಾಯಿಂಟ್ಸ್ ಪೈಕಿ 10 ಪಾಯಿಂಟ್ಸ್ ತಮ್ಮದಾಗಿಸಿಕೊಂಡರು. 11 ಪಾಯಿಂಟ್ಟ್ ಗಳಿಸಿದ ಕಾಮ್‌ಸ್ಕಿ ಮೊದಲ ಸ್ಥಾನ ಗಳಿಸಿದರು.
ಟೂರ್ನಿಯಲ್ಲಿ ನಿಹಾಲ್ ಅವರು ರಷ್ಯಾದ ಕಿರಿಲ್ ಅಲೆಕ್ಸೀಂಕೊ, ಇಸ್ರೇಲ್ ಗ್ರ್ಯಾಂಡ್‌ಮಾಸ್ಟರ್ ಬೊರಿಸ್ ಗೆಲ್‌ಫಾಂಡ್, ವಿನ್ಸೆಂಟ್ ಕೇಮರ್ ಮತ್ತು ಮ್ಯಾಕ್ಸಿಮ್ ಲಗಾರ್ಡ್ ಅವರಿಗೆ ಸೋಲಿನ ರುಚಿ ತೋರಿಸಿದರು. ಅಲನ್ ಪಿಚೊಟ್ ಮತ್ತು ಕಾಮ್‌ಸ್ಕಿ ಎದುರು ಸಮಬಲ ಸಾಧಿಸಿದರೆ, ಸ್ವಿಟ್ಜರ್ಲೆಂಡ್‌ನ ನೋಯಲ್ ಸ್ಟುಡರ್ ಎದುರಿನ ಪಂದ್ಯವನ್ನು ಕೈಚೆಲ್ಲಿದರು.
ಇಲ್ಲಿ ಭಾಗವಹಿಸಿದ ಎಂಟು ಆಟಗಾರರು ಮಂಗಳವಾರ ಆರಂಭವಾಗುವ ಕ್ಲಾಸಿಕಲ್ ವಿಭಾಗದಲ್ಲೂ ಸ್ಪರ್ಧಿಸಲಿದ್ದಾರೆ. ಇದೇ 31ರಂದು ಬ್ಲಿಟ್ಜ್ ವಿಭಾಗದ ಸ್ಪರ್ಧೆಗಳು ನಡೆಯಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.