ADVERTISEMENT

ಜನಾಂಗೀಯ ಭೇದವೇ ಭಾರಿ ವೈರಸ್ ಎನ್ನುತ್ತಾರೆ ಬಾಕ್ಸರ್ ಜೋಶುವಾ

ರಾಯಿಟರ್ಸ್
Published 8 ಜೂನ್ 2020, 4:30 IST
Last Updated 8 ಜೂನ್ 2020, 4:30 IST
ಪ್ರತಿಭಟನೆಯಲ್ಲಿ ಪಾಲ್ಗೊಂಡ ಬಾಕ್ಸರ್ ಆ್ಯಂಟನಿ ಜೋಶುವಾ –ರಾಯಿಟರ್ಸ್ ಚಿತ್ರ
ಪ್ರತಿಭಟನೆಯಲ್ಲಿ ಪಾಲ್ಗೊಂಡ ಬಾಕ್ಸರ್ ಆ್ಯಂಟನಿ ಜೋಶುವಾ –ರಾಯಿಟರ್ಸ್ ಚಿತ್ರ   

ಲಂಡನ್: ‘ಇದು ಭಯಾನಕ ವೈರಸ್. ಇದನ್ನು ಈಗಾಗಲೇ ರೋಗಕಾರಕ ಎಂದು ಗುರುತಿಸಲಾಗಿದೆ. ಹೌದು, ಇದು ನಿಜಕ್ಕೂ ಸಾಂಕ್ರಾಮಿಕ ರೋಗ...’

ಹೆವಿವೇಟ್ ಬಾಕ್ಸಿಂಗ್‌ನಲ್ಲಿ ವಿಶ್ವ ಚಾಂಪಿಯನ್ ಆಗಿರುವ ಆ್ಯಂಟನಿ ಜೋಶುವಾ ರೋಷದಿಂದ ವ್ಯಕ್ತಪಡಿಸಿರುವ ಅಭಿಪ್ರಾಯ ಇದು. ಅವರು ಇಲ್ಲಿ ಉಲ್ಲೇಖಿಸಿರುವುದು ಕೊರೊನಾ ವೈರಾಣುವನ್ನಲ್ಲ. ಅವರ ಪ್ರಕಾರ ಜನಾಂಗೀಯ ಭೇದವೂ ಅಪಾಯಕಾರಿ ವೈರಸ್‌.

ಅಮೆರಿಕದಲ್ಲಿ ಪೊಲೀಸ್ ದೌರ್ಜನ್ಯಕ್ಕೆ ಒಳಗಾಗಿ ಪ್ರಾಣ ಕಳೆದುಕೊಂಡ ಜಾರ್ಜ್ ಫ್ಲಾಯ್ಡ್ ಪರ ಲಂಡನ್‌ನಲ್ಲಿ ಶನಿವಾರ ನಡೆದ ‘ಬ್ಲ್ಯಾಕ್ ಲಿವ್ಸ್ ಮ್ಯಾಟರ್’ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಜೋಶುವಾ ‘ತಿಳಿಗೇಡಿಗಳು ನಡೆಸುತ್ತಿರುವ ನಿರಂತರ ದೌರ್ಜನ್ಯವನ್ನು ಸಹಿಸುತ್ತ ಇನ್ನು ಸುಮ್ಮನೆ ಇರಲಾಗದು’ ಎಂದು ಎಚ್ಚರಿಕೆ ನೀಡಿದರು.

ADVERTISEMENT

ಬ್ರಿಟನ್‌ನಲ್ಲಿ ಅತಿ ಹೆಚ್ಚು ಬೇಡಿಕೆ ಇರುವ ಬಾಕ್ಸರ್ ಜೋಶುವಾ. ಅವರು ಜನಿಸಿದ ವಾಟ್‌ಫಾರ್ಡ್‌ ಪಟ್ಟಣದಲ್ಲಿ ನಡೆದ ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಂಡ ಜನರು ಕೊನೆಗೆ ಉದ್ಯಾನವೊಂದರಲ್ಲಿ ಜಮಾಯಿಸಿದರು. ತಮ್ಮ ಗೆಳೆಯ ಬರೆದ ಕವನವೊಂದನ್ನುಅಲ್ಲಿ ಜೋಶುವಾ ವಾಚಿಸಿದರು.

‘ಚರ್ಮದ ಬಣ್ಣದ ಆಧಾರದಲ್ಲಿ ನಿಂದನೆ ಮಾಡುತ್ತಿದ್ದು ವ್ಯಕ್ತಿಗಳನ್ನು ನಿರ್ದಯವಾಗಿ ಕೊಲ್ಲಲಾಗುತ್ತಿದೆ. ಇದನ್ನು ಎಷ್ಟು ದಿನ ಸಹಿಸಲು ಸಾಧ್ಯ’ ಎಂದು ಪ್ರಶ್ನಿಸಿದ ಅವರು ‘ಶಾಂತಿಯುತ ಪ್ರತಿಭಟನೆಗಳ ಮೂಲಕ ದನಿ ಎತ್ತಬೇಕಾದ ಕಾಲವಿದು. ಇಂದು ಇಲ್ಲಿ ನಡೆದಿರುವ ಪ್ರತಿಭಟನೆ ಎಲ್ಲರಿಗೂ ಮಾದರಿ’ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ವಿಶ್ವ ಹೆವಿವೇಟ್ ಪ್ರಶಸ್ತಿ ಉಳಿಸಿಕೊಳ್ಳುವತ್ತ ಚಿತ್ತ ಹರಿಸಿರುವ 30 ವರ್ಷದ ಜೋಶುವಾ ಅವರು ಟಾಟೆನ್‌ಹ್ಯಾಮ್ ಹಾಟ್‌ಸ್ಪುರ್ ಕ್ರೀಡಾಂಗಣದಲ್ಲಿ ಈ ತಿಂಗಳಲ್ಲಿ ನಡೆಯಬೇಕಾಗಿದ್ದ ‘ಫೈಟ್‌’ನಲ್ಲಿ ಬಲ್ಗೇರಿಯಾದ ಕುಬ್ರತ್ ಪುಲೇವ್ ಅವರನ್ನು ಎದುರಿಸಬೇಕಾಗಿತ್ತು. ಆದರೆ ಕೊರೊನಾ ಹಾವಳಿಯಿಂದಾಗಿ ಈ ಸ್ಪರ್ಧೆಯನ್ನು ಮುಂದೂಡಲಾಗಿದೆ.

ಐಬಿಎಫ್‌, ಡಬ್ಲ್ಯುಬಿಎ ಮತ್ತು ಡಬ್ಲ್ಯುಬಿಒ ಚಾಂಪಿಯನ್ ಕೂಡ ಆಗಿರುವ ಅವರು ಈಚೆಗೆ ಅಭ್ಯಾಸ ನಡೆಸುತ್ತಿದ್ದಾಗ ಗಾಯಗೊಂಡಿದ್ದರು. ಹೀಗಾಗಿ ಮೊಣಕಾಲಿಗೆ ಕವಚ ಧರಿಸಿ ಊರುಗೋಲಿನ ನೆರವಿನಿಂದ ನಡೆಯುತ್ತಿದ್ದಾರೆ.

‘ಜೋಶುವಾ ಅವರಿಗೆ ಆಗಿರುವ ಗಾಯದ ಬಗ್ಗೆ ಸದ್ಯ ಆತಂಕಪಡುವಂಥಾದ್ದೇನೂ ಇಲ್ಲ. ಮೊಣಕಾಲನ್ನು ಸದ್ಯದಲ್ಲೇ ವೈದ್ಯರು ಮೊತ್ತೊಮ್ಮೆ ತಪಾಸಣೆಗೆ ಒಳಪಡಿಸಲಿದ್ದಾರೆ’ ಎಂದು ಅವರ ವಕ್ತಾರರೊಬ್ಬರು ತಿಳಿಸಿದರು.

ಮೇ 25ರಂದು ಅಮೆರಿಕದಲ್ಲಿ ಜಾರ್ಜ್‌ ಫ್ಲಾಯ್ಡ್ ‍ಪೊಲೀಸ್‌ ದೌರ್ಜನ್ಯದಿಂದ ಸಾವಿಗೀಡಾದ ನಂತರ ವಿಶ್ವದಾದ್ಯಂತ ಪ್ರತಿಭಟನೆಗಳು ನಡೆಯುತ್ತಿವೆ. ಕೊರೊನಾ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಜನರು ಗುಂಪು ಸೇರಬಾರದು ಎಂದು ಬ್ರಿಟನ್ ಆರೋಗ್ಯ ಸಚಿವರು ಮನವಿ ಮಾಡಿದ್ದರೂ ಲಂಡನ್‌ನಲ್ಲಿ ಜನರು ನ್ಯಾಯಕ್ಕಾಗಿ ಬೀದಿಗಿಳಿದರು.

ಪ್ರತಿಭಟನೆ ಮತ್ತು ನಿರ್ಬಂಧಗಳ ವಿಷಯದಲ್ಲಿ ಜನರು ಹಾಗೂ ಆಡಳಿತಗಾರರ ನಡುವೆ ಲಂಡನ್‌ನಲ್ಲಿ ಹಗ್ಗಜಗ್ಗಾಟವೂ ನಡೆಯುತ್ತಿದೆ. ಅಂತರ ಕಾಯ್ದುಕೊಳ್ಳುವುದನ್ನು ಜನರು ಮರೆಯುವ ಸಾಧ್ಯತೆ ಇರುವುದರಿಂದ ಪ್ರತಿಭಟನೆ ಕಾನೂನು ಬಾಹಿರ ಎಂದು ಮೆಟ್ರೊಪಾಲಿಟನ್ ಪೊಲೀಸರು ಹೇಳಿದ್ದರೆ, ಅಧಿಕಾರಿಗಳು ಪ್ರತಿಭಟನೆ ಹತ್ತಿಕ್ಕಲು ಪ್ರಯತ್ನಿಸುತ್ತಿರುವುದರ ಹಿಂದಿನ ಹುರುಳೇನು ಎಂದು ಕ್ರಿಸ್ಟಲ್ ಪ್ಯಾಲೇಸ್ ಫುಟ್‌ಬಾಲ್ ಆಟಗಾರ ಆ್ಯಂಡ್ರೋಸ್ ಟೌನ್‌ಸೆಂಡ್ ಪ್ರಶ್ನಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.