ADVERTISEMENT

ಬಾಕ್ಸಿಂಗ್‌ ಸಂಸ್ಥೆ ಚುನಾವಣೆ ವಿಳಂಬ: ಸತ್ಯಶೋಧನಾ ಸಮಿತಿ ರಚಿಸಿದ ಉಷಾ

ಪಿಟಿಐ
Published 13 ಜುಲೈ 2025, 13:25 IST
Last Updated 13 ಜುಲೈ 2025, 13:25 IST
   

ನವದೆಹಲಿ: ಭಾರತ ಬಾಕ್ಸಿಂಗ್ ಫೆಡರೇಷನ್‌ ಚುನಾವಣೆ ವಿಳಂಬಕ್ಕೆ ಕಾರಣಗಳನ್ನು ಕಂಡುಕೊಳ್ಳಲು ಮತ್ತು ನ್ಯಾಯಸಮ್ಮತವಾಗಿ ಚುನಾವಣೆ ನಡೆಸಲು ಏನು ಮಾಡಬಹುದೆಂದು ಶಿಫಾರಸುಗಳನ್ನು ಮಾಡಲು, ಭಾರತ ಒಲಿಂಪಿಕ್ ಸಂಸ್ಥೆ ಅಧ್ಯಕ್ಷೆ ಪಿ.ಟಿ. ಉಷಾ ಅವರು ಮೂವರು ಸದಸ್ಯರ ಸತ್ಯಶೋಧನಾ ಸಮಿತಿ ರಚಿಸಿದ್ದಾರೆ. 

ಐಒಎ ಖಜಾಂಚಿ ಸಹದೇವ್ ಯಾದವ್ ಅವರು ಅಧ್ಯಕ್ಷರಾಗಿರುವ ಈ ಸಮಿತಿಗೆ, ಕಾರ್ಯಕಾರಿ ಸಮಿತಿ ಸದಸ್ಯ ಭೂಪೆಂದರ್‌ ಸಿಂಗ್‌ ಬಾಜ್ವಾ ಮತ್ತು ವಕೀಲ ಪಾಯಲ್ ಕಾಕ್ರ ಅವರು ಸದಸ್ಯರಾಗಿದ್ದಾರೆ. ವಾರದ ಒಳಗೆ ವರದಿ ಸಲ್ಲಿಸುವಂತೆಯೂ ತಿಳಿಸಲಾಗಿದೆ. 

‘ಬಾಕ್ಸಿಂಗ್‌ ಫೆಡರೇಷನ್‌ನ ಹಾಲಿ ಪದಾಧಿಕಾರಿಗಳ ಅವಧಿ ಫೆ. 2ರಂದು ಮುಗಿದಿದ್ದು, ನಂತರ ಹೊಸದಾಗಿ ಚುನಾವಣೆ ನಡೆದಿಲ್ಲ’ ಎಂದು ಉಷಾ ಅವರು ಜುಲೈ 11ರ ಐಒಎ ಕಚೇರಿ ಆದೇಶದಲ್ಲಿ ತಿಳಿಸಿದ್ದಾರೆ. ‘ಬಿಎಫ್‌ಐನ ಕಾನೂನಾತ್ಮಕ ಮತ್ತು ಆಡಳಿತಾತ್ಮಕ ಸ್ಥಿತಿಗತಿ ಮತ್ತು ಚುನಾವಣೆ ವಿಳಂಬದಿಂದ ಆಗಿರುವ ಪರಿಣಾಮಗಳ ಬಗ್ಗೆ ಮೌಲ್ಯಮಾಪನ ನಡೆಸುವಂತೆ’ ಸಮಿತಿಗೆ ಸೂಚಿಸಿದ್ದಾರೆ.

ADVERTISEMENT

ಪದಾಧಿಕಾರಿಗಳ ಅವಧಿ ಮುಗಿದ ನಂತರ, ಮಾರ್ಚ್‌ 28ರಂದು ಚುನಾವಣೆ ನಿಗದಿಯಾಗಿತ್ತು. ಆದರೆ ಕೆಲವರು ನ್ಯಾಯಾಲಯದ ಮೊರೆಹೋಗಿದ್ದರಿಂದ ಚುನಾವಣೆ ಪ್ರಕ್ರಿಯೆ ಸಾಧ್ಯವಾಗಲಿಲ್ಲ. 

ದೇಶೀ ಮತ್ತು ಅಂತರರಾಷ್ಟ್ರೀಯ ಸ್ಪರ್ಧೆಗಳಿಗೆ ತಂಡದ ಆಯ್ಕೆಯ ಮೇಲ್ವಿಚಾರಣೆ ವಹಿಸಲು ಮತ್ತು ಆಡಳಿತಾತ್ಮಕ ನಿರ್ಧಾರ ಕೈಗೊಳ್ಳಲು ವಿಶ್ವ ಬಾಕ್ಸಿಂಗ್ ಏ. 7ರಂದು ಅಜಯ್ ಸಿಂಗ್ ನೇತೃತ್ವದಲ್ಲಿ ಆರು ಮಂದಿಯ ಸಮಿತಿ ರಚಿಸಿತ್ತು. 

ಬಿಎಫ್‌ಐ ಅಧ್ಯಕ್ಷ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷ ಅಜಯ್ ಸಿಂಗ್ ವಿರುದ್ಧ ಕೇಂದ್ರದ ಮಾಜಿ ಕ್ರೀಡಾ ಸಚಿವ ಅನುರಾಗ್ ಠಾಕೂರ್‌ ಸ್ಪರ್ಧೆಗಿಳಿಯಲು ಸಜ್ಜಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.