ADVERTISEMENT

ಭಾರತ ಮಹಿಳಾ ಬಾಕ್ಸಿಂಗ್‌ ತಂಡಕ್ಕೆ ಸ್ಯಾಂಟಿಯಾಗೊ ಮುಖ್ಯ ಕೋಚ್‌

ಪಿಟಿಐ
Published 28 ನವೆಂಬರ್ 2025, 20:30 IST
Last Updated 28 ನವೆಂಬರ್ 2025, 20:30 IST
ಸ್ಯಾಂಟಿಯಾಗೊ ನೀವಾ
ಸ್ಯಾಂಟಿಯಾಗೊ ನೀವಾ   

ನವದೆಹಲಿ: ಭಾರತ ಪುರುಷರ ಬಾಕ್ಸಿಂಗ್‌ ತಂಡದ ಮಾಜಿ ‘ಹೈ ಪರ್ಫಾರ್ಮೆನ್ಸ್’ ನಿರ್ದೇಶಕ ಸ್ಯಾಂಟಿಯಾಗೊ ನೀವಾ ಅವರು ಮಹಿಳಾ ತಂಡದ ಮುಖ್ಯ ಕೋಚ್‌ ಆಗಿ ನೇಮಕಗೊಂಡಿದ್ದಾರೆ.

50 ವರ್ಷದ ಸ್ಯಾಂಟಿಯಾಗೊ ಅವರು 2017ರಿಂದ 2022ರವರೆಗೆ ಭಾರತ ಪುರುಷರ ಬಾಕ್ಸಿಂಗ್‌ ತಂಡದೊಂದಿಗೆ ಕೆಲಸ ಮಾಡಿದ್ದರು. ಅವರ ಮಾರ್ಗದರ್ಶನದಲ್ಲಿ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತದಿಂದ ಅತ್ಯಧಿಕ ಬಾಕ್ಸರ್‌ಗಳು ಕಣಕ್ಕಿಳಿದಿದ್ದರು; ಮಾತ್ರವಲ್ಲದೆ 2019ರ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಭಾರತ ಎರಡು ಐತಿಹಾಸಿಕ ಪದಕ ಗೆದ್ದಿತ್ತು. 

‘ಭಾರತಕ್ಕೆ ಹಿಂತಿರುಗಲು ಉತ್ಸುಕನಾಗಿದ್ದೇನೆ. ಈ ಹಿಂದಿನ ಅವಧಿಯ ಐದು ವರ್ಷಗಳನ್ನು ಅದ್ಭುತವಾಗಿ ಕಳೆದಿದ್ದೇನೆ. ಈಗ ಹೊಸ ಅಧ್ಯಾಯಕ್ಕಾಗಿ ಎದುರು ನೋಡುತ್ತಿದ್ದೇನೆ. ಒಗ್ಗಟ್ಟಿನಿಂದ ಮುಂದೆ ಸಾಗಿ, ದೊಡ್ಡ ಯಶಸ್ಸನ್ನು ಆಶಿಸುತ್ತೇನೆ’ ಎಂದು ಅರ್ಜೆಂಟೀನಾ ಮೂಲದ ಸ್ಯಾಂಟಿಯಾಗೊ ಪ್ರತಿಕ್ರಿಯಿಸಿದ್ದಾರೆ.

ADVERTISEMENT

ಸ್ಯಾಂಟಿಯಾಗೊ ಅವರು ಅಂತರರಾಷ್ಟ್ರೀಯ ಕೋಚಿಂಗ್‌ನಲ್ಲಿ ಎರಡು ದಶಕಗಳಿಗೂ ಹೆಚ್ಚು ಅನುಭವ ಹೊಂದಿದ್ದಾರೆ. ಕಳೆದ ಕೆಲ ವರ್ಷಗಳಿಂದ ಬಾಕ್ಸಿಂಗ್ ಆಸ್ಟ್ರೇಲಿಯಾದ ಹೈ ಪರ್ಫಾರ್ಮೆನ್ಸ್‌ ಘಟಕದ ರಾಷ್ಟ್ರೀಯ ಮುಖ್ಯ ಕೋಚ್‌ ಆಗಿದ್ದರು.

‘ಸ್ಯಾಂಟಿಯಾಗೊ ಅವರ ನೇಮಕವು ಭಾರತ ಮಹಿಳಾ ಬಾಕ್ಸಿಂಗ್‌ಗೆ ಪ್ರಮುಖ ಉತ್ತೇಜನವನ್ನು ನೀಡಲಿದೆ’ ಎಂದು ಭಾರತ ಬಾಕ್ಸಿಂಗ್ ಫೆಡರೇಷನ್ ಅಧ್ಯಕ್ಷ ಅಜಯ್ ಸಿಂಗ್ ಹೇಳಿದ್ದಾರೆ.

ಈತನಕ ಮುಖ್ಯ ಕೋಚ್‌ ಆಗಿದ್ದ ಡಿ.ಚಂದ್ರಪಾಲ್‌ ಅವರು ಕೋಚಿಂಗ್ ಸಿಬ್ಬಂದಿಯ ಭಾಗವಾಗಿ ಮುಂದುವರಿಯಲಿದ್ದಾರೆ. ಭಾರತದ ಮಹಿಳಾ ಬಾಕ್ಸರ್‌ಗಳು ಈ ವರ್ಷ ಉತ್ತಮ ಪ್ರದರ್ಶನ ನೀಡಿದ್ದಾರೆ. ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಎರಡು ಚಿನ್ನ ಸೇರಿದಂತೆ ನಾಲ್ಕು ಪದಕಗಳನ್ನು ಗೆದ್ದಿದ್ದಾರೆ. ತವರಿನಲ್ಲಿ ನಡೆದ ವಿಶ್ವ ಬಾಕ್ಸಿಂಗ್ ಕಪ್ ಫೈನಲ್‌ನಲ್ಲಿ 9 ಚಿನ್ನ ಸೇರಿದಂತೆ 10 ಪದಕಗಳನ್ನು ಗೆದ್ದಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.