ನವದೆಹಲಿ: ಕೇಂದ್ರದ ಎನ್ಡಿಎ ಸರ್ಕಾರ, ಶುಕ್ರವಾರ ಮಂಡಿಸಿದ ಬಜೆಟ್ನಲ್ಲಿ ‘ರಾಷ್ಟ್ರೀಯ ಕ್ರೀಡಾ ಶಿಕ್ಷಣ ಮಂಡಳಿ’ ಸ್ಥಾಪನೆಯನ್ನು ಪ್ರಕಟಿಸಿದೆ. ಆ ಮೂಲಕ ಮಹತ್ವಾಕಾಂಕ್ಷೆಯ ‘ಖೇಲೊ ಇಂಡಿಯಾ’ ಯೋಜನೆಯ ವ್ಯಾಪ್ತಿ ವಿಸ್ತರಿಸಲು ಮುಂದಾಗಿದೆ.
‘2017ರ ಅಕ್ಟೋಬರ್ನಲ್ಲಿ ಆರಂಭಿಸಿದ ‘ಖೇಲೊ ಇಂಡಿಯಾ’ ಯೋಜನೆವಿಸ್ತರಿಸಲು ಸರ್ಕಾರ ಬದ್ಧವಾಗಿದೆ. ಇದಕ್ಕೆ ಅಗತ್ಯವಿರುವ ಎಲ್ಲ ಆರ್ಥಿಕ ನೆರವನ್ನು ಒದಗಿಸಲಾಗುವುದು. ಈ ಯೋಜನೆಯಡಿ ಎಲ್ಲ ಹಂತಗಳಲ್ಲಿ ಕ್ರೀಡೆಯನ್ನು ಜನಪ್ರಿಯಗೊಳಿಸಲು ರಾಷ್ಟ್ರೀಯ ಕ್ರೀಡಾ ಶಿಕ್ಷಣ ಮಂಡಳಿ’ಯನ್ನು ಸ್ಥಾಪಿಸಲಾಗುತ್ತಿದೆ’ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ನಲ್ಲಿ ಘೋಷಣೆ ಮಾಡಿದ್ದಾರೆ.
ಕ್ರೀಡಾ ಕ್ಷೇತ್ರಕ್ಕೆ ಮೀಸಲಿಟ್ಟ ಹಣದ ಪ್ರಮಾಣದಲ್ಲಿ ಬದಲಾವಣೆ ಮಾಡಿಲ್ಲ. ಪೀಯೂಷ್ ಗೋಯಲ್ ಈ ವರ್ಷದ ಫೆಬ್ರುವರಿಯಲ್ಲಿ ಮಂಡಿಸಿದ್ದ ಮಧ್ಯಂತರ ಬಜೆಟ್ನಲ್ಲಿ ಕ್ರೀಡೆಗೆ ₹ 2216.92 ಕೋಟಿ ಮೊತ್ತ ಮೀಸಲಿಡಲಾಗಿತ್ತು. ಇದು ಅದರ ಹಿಂದಿನ ವರ್ಷಕ್ಕೆ ಹೋಲಿಸಿದರೆ ₹ 214.2 ಕೋಟಿಯಷ್ಟು ಅಧಿಕ. 2017–18ರಲ್ಲಿ ₹ 2002.72 ಕೋಟಿ ನೀಡಲಾಗಿತ್ತು.
ಕ್ರೀಡಾಪಟುಗಳಿಗೆ ನೀಡಲಾಗುವ ಪ್ರೋತ್ಸಾಹಧನದ ನಿಧಿಯನ್ನು ₹ 63 ಕೋಟಿಯಿಂದ 89 ಕೋಟಿಗೆ ಹೆಚ್ಚಿಸಲಾಗಿದೆ. ಆದರೆ ದೇಶದ ಕ್ರೀಡಾ ಫೆಡರೇಷನ್ಗಳಿಗೆ ನೀಡಲಾಗುವ ನೆರವನ್ನು ಕೊಂಚಮಟ್ಟಿಗೆ, 245.13 ಕೋಟಿಯಿಂದ 245 ಕೋಟಿಗೆ ಇಳಿಸಲಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.