ADVERTISEMENT

ನಾಕೌಟ್‌ ಹಂತಕ್ಕೆ ಲಕ್ಷ್ಯ, ಸಿಂಧು

ವಿಶ್ವ ಟೂರ್ ಫೈನಲ್ಸ್ ಬ್ಯಾಡ್ಮಿಂಟನ್‌: ಶ್ರೀಕಾಂತ್‌, ಅಶ್ವಿನಿ–ಸಿಕ್ಕಿಗೆ ಸೋಲು

ಪಿಟಿಐ
Published 2 ಡಿಸೆಂಬರ್ 2021, 13:17 IST
Last Updated 2 ಡಿಸೆಂಬರ್ 2021, 13:17 IST
ಪಿ.ವಿ.ಸಿಂಧು ಆಟದ ವೈಖರಿ– ಪಿಟಿಐ ಚಿತ್ರ
ಪಿ.ವಿ.ಸಿಂಧು ಆಟದ ವೈಖರಿ– ಪಿಟಿಐ ಚಿತ್ರ   

ಬಾಲಿ: ಭಾರತದ ಪಿ.ವಿ.ಸಿಂಧು ಹಾಗೂ ಲಕ್ಷ್ಯ ಸೇನ್‌ ಅವರು ಬಿಡಬ್ಲ್ಯುಎಫ್‌ ವಿಶ್ವ ಟೂರ್‌ ಫೈನಲ್ಸ್ ಬ್ಯಾಡ್ಮಿಂಟನ್ ಟೂರ್ನಿಯ ನಾಕೌಟ್‌ ಹಂತಕ್ಕೆ ಪ್ರವೇಶಿಸಿದ್ದಾರೆ. ಆದರೆ ಕಿದಂಬಿ ಶ್ರೀಕಾಂತ್‌, ಅಶ್ವಿನಿ ಪೊನ್ನಪ್ಪ–ಸಿಕ್ಕಿ ರೆಡ್ಡಿ ಸೋಲು ಅನುಭವಿಸಿದ್ದಾರೆ.

ಗುರುವಾರ ನಡೆದ ’ಎ‘ ಗುಂಪಿನ ಮಹಿಳಾ ಸಿಂಗಲ್ಸ್ ವಿಭಾಗದ ಪಂದ್ಯದಲ್ಲಿ, 26ರ ಹರೆಯದ ಸಿಂಧು 21-10, 21-13ರಿಂದ ಜರ್ಮನಿಯ ವೈವೊನ್‌ ಲಿ ಅವರನ್ನು ಪರಾಭವಗೊಳಿಸಿದರು. ವಿಶ್ವ ಚಾಂಪಿಯನ್‌ ಆಟಗಾರ್ತಿಗೆ ಪಂದ್ಯ ಗೆಲ್ಲಲು 31 ನಿಮಿಷಗಳು ಸಾಕಾದವು.

ಎರಡು ಬಾರಿಯ ಒಲಿಂಪಿಕ್ಸ್ ಪದಕ ವಿಜೇತೆ ಸಿಂಧು, ಗುಂಪಿನ ಕೊನೆಯ ಪಂದ್ಯದಲ್ಲಿ ಅಗ್ರಶ್ರೇಯಾಂಕದ, ಥಾಯ್ಲೆಂಡ್ ಆಟಗಾರ್ತಿ ಪಾರ್ನ್‌ಪವೀ ಚೋಚುವೊಂಗ್ ಅವರನ್ನು ಎದುರಿಸುವರು.

ADVERTISEMENT

‘ಎ’ ಗುಂಪಿನ ಪುರುಷರ ಸಿಂಗಲ್ಸ್ ವಿಭಾಗದ ಎರಡನೇ ಪಂದ್ಯದಲ್ಲಿ ಲಕ್ಷ್ಯ ಸೇನ್‌ 15–21, 14–21ರಿಂದ ಒಲಿಂಪಿಕ್ ಚಾಂಪಿಯನ್‌ ವಿಕ್ಟರ್‌ ಅಕ್ಸೆಲ್ಸೆನ್ ಎದುರು ಸೋಲು ಅನುಭವಿಸಿದರೂ ಸೆಮಿಫೈನಲ್‌ನಲ್ಲಿ ಸ್ಥಾನ ಖಚಿತಪಡಿಸಿಕೊಂಡರು. ಈ ಗುಂಪಿನಲ್ಲಿದ್ದ ಜಪಾನ್‌ನ ಕೆಂಟೊ ಮೊಮೊಟಾ ಮತ್ತು ಡೆನ್ಮಾರ್ಕ್‌ನ ರಾಸ್ಮಸ್‌ ಗೆಮ್ಕೆ ಗಾಯದ ಕಾರಣ ಟೂರ್ನಿಯಿಂದ ಹಿಂದೆ ಸರಿದರು. ಇದರಿಂದ ಲಕ್ಷ್ಯ ಅವರು ಗುಂಪಿನ ಪಟ್ಟಿಯಲ್ಲಿ ಎರಡನೇ ಸ್ಥಾನ ಗಳಿಸಿದರು.

ವಿಶ್ವ ರ‍್ಯಾಂಕಿಂಗ್‌ನಲ್ಲಿ 14ನೇ ಸ್ಥಾನದಲ್ಲಿರುವ ಶ್ರೀಕಾಂತ್ ಅವರು ’ಬಿ‘ ಗುಂಪಿನ ಪುರುಷರ ಸಿಂಗಲ್ಸ್ ಎರಡನೇ ಸುತ್ತಿನ ಹಣಾಹಣಿಯಲ್ಲಿ 18-21, 7-21ರಿಂದ ಥಾಯ್ಲೆಂಡ್‌ನ ಕುನ್ಲಾವುತ್‌ ವಿತಿದ್ಸರ್ನ್‌ ಎದುರು ಎಡವಿದರು. ಇದರೊಂದಿಗೆ ನಾಕೌಟ್‌ ತಲುಪುವ ಅವರ ಆಸೆ ಕ್ಷೀಣಿಸಿದೆ.

ಇದಕ್ಕೂ ಮೊದಲು ಕರ್ನಾಟಕದ ಅಶ್ವಿನಿ ಪೊನ್ನಪ್ಪ ಮತ್ತು ಎನ್‌.ಸಿಕ್ಕಿ ರೆಡ್ಡಿ ಜೋಡಿಯು ಮಹಿಳಾ ಡಬಲ್ಸ್ ವಿಭಾಗದಲ್ಲಿ ಸತತ ಎರಡನೇ ಸೋಲು ಅನುಭವಿಸಿದೆ. ಭಾರತದ ಆಟಗಾರ್ತಿಯರು 19-21, 20-22ರಿಂದ ಬಲ್ಗೇರಿಯಾದ ಗೇಬ್ರಿಯೇಲಾ ಸ್ಟೋವಾ ಮತ್ತು ಸ್ಟೆಫಾನಿ ಸ್ಟೋವಾ ಎದುರು ನಿರಾಸೆ ಅನುಭವಿಸಿದರು.

ಮುಂದಿನ ಪಂದ್ಯದಲ್ಲಿ ಭಾರತದ ಜೋಡಿಯು ಇಂಗ್ಲೆಂಡ್‌ನ ಕ್ಲೋಯ್ ಬರ್ಚ್‌ ಮತ್ತು ಲಾರೆನ್ ಸ್ಮಿತ್ ಅವರನ್ನು ಎದುರಿಸುವರು.

ಹಿಂದೆ ಸರಿದ ಸಾತ್ವಿಕ್‌–ಚಿರಾಗ್‌: ಸಾತ್ವಿಕ್ ಸಾಯಿರಾಜ್‌ ರಣಕಿರೆಡ್ಡಿ ಅವರು ಮೊಣಕಾಲು ನೋವಿನಿಂದ ಬಳಲುತ್ತಿರುವ ಹಿನ್ನೆಲೆಯಲ್ಲಿ ಅವರು ಮತ್ತು ಡಬಲ್ಸ್ ಜೊತೆಗಾರ ಚಿರಾಗ ಶೆಟ್ಟಿ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ. ’ಎ’ ಗುಂಪಿನ ಮೊದಲ ಪಂದ್ಯದಲ್ಲಿ ಸೋಲು ಅನುಭವಿಸಿದ್ದ ಈ ಜೋಡಿಯು ಎರಡನೇ ಸುತ್ತಿನ ಪಂದ್ಯದಲ್ಲಿ ಗುರುವಾರ ಕಣಕ್ಕಿಳಿಯಲಿಲ್ಲ. ಇದರಿಂದಾಗಿ ಇಂಡೊನೇಷ್ಯಾದ ಮಾರ್ಕಸ್‌ ಫೆರ್ನಾಲ್ಡಿ ಗಿಡಿಯೊನ್‌ ಮತ್ತು ಕೆವಿನ್‌ ಸುಕಮುಲ್ಜೊ ಜೋಡಿಗೆ ವಾಕ್‌ಓವರ್ ಲಭಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.