ಮಾಂಟ್ರಿಯಲ್: ಕೆನಡಾದ ಈಜುತಾರೆ ಸಮ್ಮರ್ ಮೆಕಿಂತೋಷ್ ಅವರು ಮೂರು ದಿನಗಳ ಅಂತರದಲ್ಲಿ ಎರಡನೇ ವಿಶ್ವದಾಖಲೆ ನಿರ್ಮಿಸಿದರು. ಕೆನೆಡಿಯನ್ ಈಜು ಟ್ರಯಲ್ಸ್‌ನಲ್ಲಿ ಮಹಿಳೆಯರ 200 ಮೀಟರ್ ಮೆಡ್ಲೆ ಸ್ಪರ್ಧೆಯಲ್ಲಿ ದಶಕಗಳ ಹಿಂದಿನ ದಾಖಲೆಯನ್ನು ಮುರಿದರು.
18 ವರ್ಷ ವಯಸ್ಸಿನ ಮೆಕಿಂತೋಷ್ ಸೋಮವಾರ ನಡೆದ ಸ್ಪರ್ಧೆಯಲ್ಲಿ ಅವರು 2 ನಿಮಿಷ 05.70 ಸೆಕೆಂಡ್‌ಗಳಲ್ಲಿ ತಲುಪಿದರು. ಈ ಮೂಲಕ 2015ರ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಹಂಗೇರಿಯ ಕಟಿಂಕಾ ಹೊಸ್ಜು (2 ನಿ.06.12 ಸೆ) ನಿರ್ಮಿಸಿದ್ದ ದಾಖಲೆಯನ್ನು ಸರಿಸಿದರು.
ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಮೂರು ಚಿನ್ನ ಗೆದ್ದಿರುವ ಮೆಕಿಂತೋಷ್ ಅವರು ಶನಿವಾರ 400 ಮೀಟರ್ಸ್ ಫ್ರೀಸ್ಟೈಲ್ ಈಜು ಸ್ಪರ್ಧೆಯಲ್ಲಿ ವಿಶ್ವದಾಖಲೆ ಬರೆದಿದ್ದರು. ಅವರು 3 ನಿಮಿಷ, 54.18 ಸೆಕೆಂಡುಗಳಲ್ಲಿ ಗುರಿ ತಲುಪಿದ್ದರು.
ಭಾನುವಾರ ನಡೆದ 800 ಫ್ರೀಸ್ಟೈಲ್‌ನಲ್ಲೂ ಮೆಕಿಂತೋಷ್ ಅವರು ಕೂದಲೆಳೆಯ ಅಂತರದಲ್ಲಿ ದಾಖಲೆ ತಪ್ಪಿಸಿಕೊಂಡರು. ಮೇ ತಿಂಗಳಲ್ಲಿ ಅಮೆರಿಕದ ಕೇಟಿ ಲೆಡೆಕಿ (8ನಿ.05.07ಸೆ) ಸ್ಥಾಪಿಸಿದ್ದ ವಿಶ್ವದಾಖಲೆಗಿಂತ ಕೇವಲ 0.95 ಸೆಕೆಂಡ್ ಹೆಚ್ಚು ಸಮಯ ತೆಗೆದುಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.